ಸೋಮವಾರ, ಮಾರ್ಚ್ 1, 2021
29 °C

ಟ್ರ್ಯಾಕ್ಟರ್ ರ‍್ಯಾಲಿ ಅಡ್ಡಿಪಡಿಸಲು ಪಾಕ್‌ನಿಂದ 300ಕ್ಕೂ ಹೆಚ್ಚು ಟ್ವಿಟರ್ ಖಾತೆ!

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಗಣರಾಜ್ಯೋತ್ಸವದಂದು ರೈತರು ನಡೆಸಲಿರುವ ಟ್ರ್ಯಾಕ್ಟರ್ ರ‍್ಯಾಲಿಯನ್ನು ಅಡ್ಡಿಪಡಿಸಲು ಪಾಕಿಸ್ತಾನದಿಂದ 300ಕ್ಕೂ ಹೆಚ್ಚು ಟ್ವಿಟರ್ ಖಾತೆಗಳನ್ನು ರಚಿಸಲಾಗಿದೆ ಎಂದು ದೆಹಲಿ ಪೊಲೀಸರು ಭಾನುವಾರ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ವಿಶೇಷ ಪೊಲೀಸ್ ಆಯುಕ್ತ (ಗುಪ್ತಚರ ವಿಭಾಗ) ದೀಪೇಂದ್ರ ಪಾಠಕ್, ಮಂಗಳವಾರ ಗಣರಾಜ್ಯೋತ್ಸವ ಪರೇಡ್ ಮುಕ್ತಾಯಗೊಂಡ ಬಳಿಕ ಬಿಗಿ ಭದ್ರತೆಯೊಂದಿಗೆ ರೈತರು ಟ್ರ್ಯಾಕ್ಟರ್ ರ‍್ಯಾಲಿಯನ್ನು ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

ಜನರನ್ನು ಹಾದಿ ತಪ್ಪಿಸುವ ಮೂಲಕ ಟ್ರ್ಯಾಕ್ಟರ್ ರ‍್ಯಾಲಿಯನ್ನು ಅಡ್ಡಿಪಡಿಸಲು ಜನವರಿ 13ರಿಂದ 18ರ ವರೆಗೆ ಪಾಕಿಸ್ತಾನದಿಂದ 300ಕ್ಕೂ ಹೆಚ್ಚು ಟ್ವಿಟರ್ ಖಾತೆಗಳನ್ನು ರಚಿಸಲಾಗಿದೆ. ವಿವಿಧ ಗುಪ್ತಚರ ವಿಭಾಗಗಳಿಂದ ಈ ಕುರಿತು ಮಾಹಿತಿ ಲಭಿಸಿದೆ. ನಮ್ಮ ಪಾಲಿಗಿದು ಸವಾಲಿನ ಕೆಲಸ. ಆದರೆ ಗಣರಾಜ್ಯೋತ್ಸವ ಪರೇಡ್ ಮುಗಿದ ಬಳಿಕ ಬಿಗಿ ಭದ್ರತೆಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರದ ವಿವಾದಿತ ನೂತನ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ಕಳೆದ ವರ್ಷ ನವೆಂಬರ್‌ನಿಂದ ದೆಹಲಿ ಹಾಗೂ ಹರಿಯಾಣ ವಿವಿಧ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: 

ಒಟ್ಟು 170 ಕೀ.ಮೀ. ದೂರ ಕ್ರಮಿಸಲಿರುವ ರೈತರು...
ಜನವರಿ 26 ಗಣರಾಜ್ಯೋತ್ಸವ ದಿನದಂದು ಪ್ರತಿಭಟನಾ ನಿರತ ರೈತರು ಟ್ರ್ಯಾಕ್ಟರ್ ಪರೇಡ್ ನಡೆಸಲು ಬಯಸಿದ್ದರಿಂದ, ಗಣರಾಜ್ಯೋತ್ಸವ ಸಮಾರಂಭ ಮುಗಿದ ಬಳಿಕ ರ‍್ಯಾಲಿ ನಡೆಸುವ ನಿರ್ಧಾರಕ್ಕೆ ಬಂದಿದ್ದೇವೆ. ನಾವು ಅವರಿಗೆ ಮೂರು ಮಾರ್ಗಗಳಲ್ಲಿ ಸುಮಾರು 170 ಕಿ.ಮೀ. ದೂರವನ್ನು ನೀಡಿದ್ದೇವೆ ಎಂದು ಪಾಠಕ್ ಮಾಹಿತಿ ಒದಗಿಸಿದರು.

ರಾಷ್ಟ್ರ ರಾಜಧಾನಿಗೆ ಎಂಟ್ರಿ ಕೊಡಲಿರುವ ರೈತರು:
ಬ್ಯಾರಿಕೇಡ್‌ಗಳು ಮತ್ತು ಇತರೆ ಭದ್ರತಾ ವ್ಯವಸ್ಥೆಗಳನ್ನು ತೆಗೆದು ಹಾಕಲಾಗುವುದು ಮತ್ತು ರೈತರು ರಾಷ್ಟ್ರ ರಾಜಧಾನಿಗೆ ಪ್ರವೇಶಿಸಲಿದ್ದಾರೆ. ಟ್ರ್ಯಾಕ್ಟರ್ ರ‍್ಯಾಲಿ ಬಳಿಕ ಅವರು ತಮ್ಮ ಸ್ಥಳಗಳಿಗೆ ಹಿಂತಿರುಗಲಿದ್ದಾರೆ ಎಂದು ತಿಳಿಸಿದರು.

ದೆಹಲಿ ಪೊಲೀಸರಿಗೆ ಇದು ಸವಾಲಿನ ಕೆಲಸವಾಗಿದೆ. ಅದನ್ನು ಹೇಗೆ ಸುರಕ್ಷಿತವಾಗಿ ನಡೆಸಲಾಗುವುದು ಎಂಬುದರ ಬಗ್ಗೆ ಹರಿಯಾಣ ಹಾಗೂ ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ಗಣರಾಜ್ಯೋತ್ಸವ ಪರೇಡ್ ಬಳಿಕ ಟ್ರ್ಯಾಕ್ಟರ್ ರ‍್ಯಾಲಿ ಆರಂಭವಾಗಲಿದೆ. ಗಣರಾಜ್ಯೋತ್ಸವ ಹಾಗೂ ಭದ್ರತಾ ವ್ಯವಸ್ಥೆಗಳಿಗೆ ಯಾವುದೇ ರೀತಿಯ ತೊಂದರೆಯಾಗದು ಎಂದು ತಿಳಿಸಿದರು.

ಈ ಎಲ್ಲ ಮೂರು ಮಾರ್ಗಗಳ ಭದ್ರತಾ ಮೌಲ್ಯಮಾಪನ ನಡೆದಿದೆ ಎಂದು ಹೇಳಿದರು. ರ‍್ಯಾಲಿ ಶಾಂತಿಯುತ ಹಾಗೂ ಶಿಸ್ತಬದ್ಧವಾಗಿ ನಡೆಸುವ ಸಲುವಾಗಿ ವಿವಿಧ ಮಾರ್ಗಗಳಲ್ಲಿ ಟ್ರ್ಯಾಕ್ಟರ್‌ಗಳ ಸಂಖ್ಯೆಗಳನ್ನು ನಿಗದಿಪಡಿಸಲಾಗುವುದು ಎಂದು ಹೇಳಿದರು.

ಸಿಂಘು ಗಡಿಯಿಂದ ಪ್ರಾರಂಭವಾಗಲಿರುವ ರ‍್ಯಾಲಿ, ಸಂಜಯ್ ಗಾಂಧಿ ಟ್ರಾನ್ಸ್‌ಪೋರ್ಟ್ ನಗರ, ಕಾಂಜವಾಲಾ, ಬವಾನಾ, ಔಚಾಂಡಿಬೋರೆರ್, ಕುಂಡ್ಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್ ವೇ ಮೂಲಕ ಹಾದು ಹೋಗಿ ಸಿಂಘು ಗಡಿಗೆ ಮರಳಲಿದೆ. ಇದು ಸುಮಾರು 62 ಕೀ.ಮೀ. ವ್ಯಾಪಿಯನ್ನು ಹೊಂದಿರುತ್ತದೆ ಎಂದು ಪಾಠಕ್ ತಿಳಿಸಿದರು.

ಇದನ್ನೂ ಓದಿ: 

ಟಿಕ್ರಿ ಗಡಿಯಿಂದ ಆರಂಭವಾಗಲಿರುವ ರ‍್ಯಾಲಿಯು ನಂಗ್ಲೋಯಿ, ನಜಾಫರಗಡ, ಜಾರೋಡಾ, ಕುಂಡ್ಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್ ವೇ ಹಾದಿಯಾಗಿ ಟಿಕ್ರಿಗೆ ಮರಳಲಿದೆ. ಗಾಝಿಪುರ ಗಡಿಯಿಂದ ಆರಂಭವಾಗಲಿರುವ ರ‍್ಯಾಲಿಯು ಅಪ್ಸರಾ ಗಡಿ, ಹಾಪುರ ರಸ್ತೆ, ಕುಂಡ್ಲಿ-ಮನೇಸರ್-ಪಲ್ವಾಲ್ ಮೂಲಕ ಹಾದುಹೋಗಿ ಗಾಝಿಪುರದಲ್ಲಿ ಮುಕ್ತಾಯವಾಗಲಿದೆ. ಇದು ಒಟ್ಟಾರೆ 100 ಕೀ.ಮೀ. ದೂರವನ್ನು ಕ್ರಮಿಸಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಟ್ರ್ಯಾಕ್ಟರ್ ರ‍್ಯಾಲಿ ಆರಂಭವಾದ ಪ್ರದೇಶದಿಂದ ಮತ್ತದೇ ಸ್ಥಳಕ್ಕೆ ಹಿಂತಿರುಗುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಭರವಸೆ ನೀಡಿದೆ. ಈಗಿನ ಪ್ರಕಾರ ದೆಹಲಿ ವಿವಿಧ ಗಡಿ ಪ್ರದೇಶಗಳಲ್ಲಿ 12,000ದಿಂದ 13,000, ಟಿಕ್ರಿಯಲ್ಲಿ 7,000ದಿಂದ 8,000 ಮತ್ತು ಸಿಂಘುವಿನಲ್ಲಿ ಸುಮಾರು 5000 ಮತ್ತು ಗಾಝಿಪುರದಲ್ಲಿ ಸುಮಾರು 1000 ಟ್ರ್ಯಾಕ್ಟರ್‌ಗಳು ಭಾಗವಹಿಸಲಿದೆ. ಆದರೂ ಈ ಸಂಖ್ಯೆ ಜಾಸ್ತಿಯಾಗುವ ಸಾಧ್ಯತೆಯಿಂದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರ್ಯಾಕ್ಟರ್ ಪರೇಡ್ ರಾಷ್ಟ್ರ ರಾಜಧಾನಿಯ ಹೊರಗಡೆ ನಡೆಸಲು ಮನವೊಳಿಸಲು ಪೊಲೀಸರು ಪ್ರಯತ್ನಿಸಿದ್ದರೂ ರೈತರು ಪಟ್ಟು ಸಡಿಲಿಸಲಿಲ್ಲ. ಕೊನೆಗೂ ಶುಕ್ರವಾರ ನಡೆದ ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ ರೈತರು ಟ್ರ್ಯಾಕ್ಟರ್ ಪರೇಡ್ ನಡೆಸಲು ಪೊಲೀಸರು ಷರತ್ತುಬದ್ಧ ಅನುಮತಿ ನೀಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು