ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಮ್ರಾನ್ ಮನೆಗೆ ಪೊಲೀಸ್‌ ದಾಳಿ; ಬೆಂಬಲಿಗರ ಮೇಲೆ ಲಾಠಿ ಪ್ರಹಾರ

Last Updated 18 ಮಾರ್ಚ್ 2023, 16:18 IST
ಅಕ್ಷರ ಗಾತ್ರ

ಲಾಹೋರ್: ಭ್ರಷ್ಟಾಚಾರದ ಆರೋಪ ಹೊತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಶನಿವಾರ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಇಸ್ಲಾಮಾಬಾದ್‌ಗೆ ತೆರಳುತ್ತಿದ್ದಂತೆಯೇ ಅವರ ‘ಜಮಾನ್‌ ಪಾರ್ಕ್’ ನಿವಾಸದ ಮೇಲೆ ದಾಳಿ ಮಾಡಿದ ಸುಮಾರು 10 ಸಾವಿರಕ್ಕೂ ಹೆಚ್ಚಿನ ಪೊಲೀಸರು, ಇಮ್ರಾನ್ ಬೆಂಬಲಿಗರ ಮೇಲೆ ಲಾಠಿ ಪ್ರಹಾರ ನಡೆಸಿ, ಹಲವರನ್ನು ಬಂಧಿಸಿದ್ದಾರೆ.

ಪೊಲೀಸ್ ಕಾರ್ಯಾಚರಣೆಯ ವೇಳೆ ಪಾಕಿಸ್ತಾನ್ ತೆಹ್ರಿಕ್–ಎ– ಇನ್ಸಾಫ್‌ನ (ಪಿಟಿಐ) 10 ಕಾರ್ಯಕರ್ತರು ಗಾಯಗೊಂಡಿದ್ದು, 61 ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಪಿಟಿಐ ಪಕ್ಷದ ಅಧ್ಯಕ್ಷರೂ ಆಗಿರುವ ಇಮ್ರಾನ್ ಖಾನ್‌ ಅವರ ನಿವಾಸದ ಪ್ರವೇಶ ದ್ವಾರದ ಬಳಿಯ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಿದ ಪೊಲೀಸರು, ಪಿಟಿಐ ಕಾರ್ಯಕರ್ತರು ತಮ್ಮ ನಾಯಕನ ರಕ್ಷಣೆಗಾಗಿ ಹಾಕಿದ್ದ ಎಲ್ಲ ಶಿಬಿರಗಳನ್ನೂ ತೆರವುಗೊಳಿಸಿದರು. ಖಾನ್ ನಿವಾಸದಿಂದ ಪೆಟ್ರೋಲ್ ಬಾಂಬ್‌ಗಳು, 20 ರೈಫಲ್‌ಗಳು ಸೇರಿದಂತೆ ಇತರ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇಮ್ರಾನ್ ಅವರ ನಿವಾಸದಲ್ಲಿ ಪೊಲೀಸರು ಪಿಟಿಐ ಕಾರ್ಯಕರ್ತರನ್ನು ಥಳಿಸುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿವೆ.

ಈ ನಡುವೆ, ‘ಜಮಾನ್‌ ಪಾರ್ಕ್ ಪ್ರದೇಶವನ್ನು ತೆರವುಗೊಳಿಸಲು ಪೊಲೀಸ್ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಈ ವೇಳೆ ಮೂವರು ಪೊಲೀಸರು ಮತ್ತು ಹತ್ತು ಪಿಟಿಐ ಕಾರ್ಯಕರ್ತರು ಗಾಯಗೊಂಡಿದ್ದಾರೆ’ ಎಂದು ಪಂಜಾಬ್ ಪ್ರಾಂತ್ಯದ ಉಸ್ತುವಾರಿ ಹಾಗೂ ಮಾಹಿತಿ ಸಚಿವ ಅಮೀರ್ ಮಿರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಇಮ್ರಾನ್ ಮನೆಯ ಶೋಧಕ್ಕಾಗಿ ಪೊಲೀಸರು ಸರ್ಚ್ ವಾರಂಟ್‌ಗಳನ್ನು ಹೊಂದಿದ್ದಾರೆ. ಭಯೋತ್ಪಾದನೆ ವಿರೋಧಿ ನ್ಯಾಯಾಲಯವು ಖಾನ್ ಅವರ ನಿವಾಸದ ಶೋಧಕ್ಕಾಗಿ ವಾರಂಟ್ ಹೊರಡಿಸಿದೆ’ ಎಂದೂ ಮಿರ್ ಸಮರ್ಥಿಸಿಕೊಂಡಿದ್ದಾರೆ.

ಇಮ್ರಾನ್ ಟ್ವೀಟ್:

ತಮ್ಮ ನಿವಾಸದ ಮೇಲಿನ ಪೊಲೀಸರ ಕಾರ್ಯಾಚರಣೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಇಮ್ರಾನ್ ಖಾನ್, ‘ತೋಶಾಖಾನಾ ಪ್ರಕರಣದ ವಿಚಾರಣೆಗಾಗಿ ನಾನು ಇಸ್ಲಾಮಾಬಾದ್‌ಗೆ ಹೊರಡುತ್ತಿದ್ದಂತೆಯೇ, ಪಂಜಾಬ್ ಪ್ರಾಂತ್ಯದ ಪೊಲೀಸರು ನನ್ನ ಮನೆಗೆ ನುಗ್ಗಿದ್ದಾರೆ. ಈ ವೇಳೆ ನನ್ನ ಪತ್ನಿ ಬುಶ್ರಾ ಬೀಬಿ ಅವರೊಬ್ಬರೇ ಮನೆಯಲ್ಲಿದ್ದರು. ಯಾವ ಕಾನೂನಿನ ಅಡಿಯಲ್ಲಿ ಪೊಲೀಸರು ಇದನ್ನು ಮಾಡುತ್ತಿದ್ದಾರೆ? ಇದು ನಾಪತ್ತೆಯಾಗಿರುವ ನವಾಜ್ ಷರೀಫ್ ಅವರನ್ನು ಮತ್ತೆ ಅಧಿಕಾರಕ್ಕೆ ತರುವ ಯೋಜನೆಯ ಭಾಗವಾಗಿದೆ’ ಎಂದು ಆರೋಪಿಸಿದ್ದಾರೆ.

‘ಈಗ ಅಧಿಕಾರದಲ್ಲಿರುವ ಸರ್ಕಾರವು, ದೇಶಭ್ರಷ್ಟ ನವಾಜ್ ಷರೀಫ್ ಅವರ ಬೇಡಿಕೆಯ ಮೇರೆಗೆ ನನ್ನನ್ನು ಜೈಲಿಗೆ ಹಾಕಲು ಬಯಸಿದೆ’ ಎಂದೂ ಇಮ್ರಾನ್ ವಿಡಿಯೊ ಸಂದೇಶವೊಂದರಲ್ಲಿ ಹೇಳಿದ್ದಾರೆ.

****

ವಿಚಾರಣೆಗೂ ಮುನ್ನ ಘರ್ಷಣೆ, ಇಮ್ರಾನ್ ಬೆಂಗಾವಲು ಪಡೆ ವಾಹನ ಪಲ್ಟಿ

ಇಸ್ಲಾಮಾಬಾದ್: ತೋಶಾಖಾನಾ ಪ್ರಕರಣದ ವಿಚಾರಣೆಗೂ ಮುನ್ನ ಇಮ್ರಾನ್ ಖಾನ್ ಬೆಂಬಲಿಗರು ಮತ್ತು ಪೊಲೀಸರ ನಡುವೆ ಇಸ್ಲಾಮಾಬಾದ್‌ನಲ್ಲಿ ಘರ್ಷಣೆ ನಡೆಯಿತು.

‘ಇಮ್ರಾನ್ ಪರ ಬೆಂಬಲಿಗರು ಹಿಂಸಾಚಾರ ನಡೆಸಿ, ಪೊಲೀಸರತ್ತ ಕಲ್ಲುತೂರಾಟ ನಡೆಸಿದರು’ ಎಂದು ಇಸ್ಲಾಮಾಬಾದ್ ಪೊಲೀಸ್ ಮುಖ್ಯಸ್ಥ ಅಕ್ಬರ್ ನಾಸೀರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಲಾಹೋರ್‌ನಿಂದ ಇಸ್ಲಾಮಾಬಾದ್‌ಗೆ ಹೊರಟಿದ್ದ ಇಮ್ರಾನ್ ಖಾನ್ ಅವರ ಬೆಂಗಾವಲು ಪಡೆಯಲ್ಲಿ ಮೂರು ವಾಹನಗಳು ಅಪಘಾತಕ್ಕೀಡಾಗಿವೆ. ಆದರೆ, ಘಟನೆಯಲ್ಲಿ ಯಾವುದೇ ಸಾವು–ನೋವಿನ ವರದಿಯಾಗಿಲ್ಲ.

ನೇರಪ್ರಸಾರ: ವಾಹಿನಿಗಳಿಗೆ ನಿಷೇಧ

ಇಸ್ಲಾಮಾಬಾದ್: ಇಮ್ರಾನ್ ಖಾನ್ ಹಾಜರಾಗಲಿದ್ದ ಇಸ್ಲಾಮಾಬಾದ್ ನ್ಯಾಯಾಲಯದ ಹೊರಗಿನ ಘಟನೆಗಳನ್ನು ನೇರ ಪ್ರಸಾರ ಮಾಡುವ ಸ್ಯಾಟಲೈಟ್ ಚಾನೆಲ್‌ಗಳಿಗೆ ಪಾಕಿಸ್ತಾನದ ವಿದ್ಯುನ್ಮಾನ ಮಾಧ್ಯಮ ಮೇಲ್ವಿಚಾರಕವು ನಿಷೇಧ ಹೇರಿತ್ತು.

ಈ ಹಿಂದೆ ನಡೆದ ಇಂಥದ್ದೇ ಘಟನೆ ಸಂದರ್ಭದಲ್ಲಿ ನೇರಪ್ರಸಾರವು ವೀಕ್ಷರು ಮತ್ತು ಪೊಲೀಸರಲ್ಲಿ ಗೊಂದಲ ಮತ್ತು ಭೀತಿಯನ್ನು ಸೃಷ್ಟಿಸಿದ್ದವು. ಈ ಕಾರಣಕ್ಕಾಗಿ ಚಾನೆಲ್‌ಗಳ ನೇರ ಪ್ರಸಾರಕ್ಕೆ ನಿಷೇಧ ಹೇರಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ದೋಷಾರೋಪ ಹೊರಿಸದ ಕೋರ್ಟ್: ಮರಳಿದ ಇಮ್ರಾನ್

ಇಸ್ಲಾಮಾಬಾದ್: ತೋಶಾಖಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸ್ಥಳೀಯ ನ್ಯಾಯಾಲಯದ ಹೊರಗೆ ಹಾಜರಾದ ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ವಿರುದ್ಧ ಯಾವುದೇ ದೋಷಾರೋಪ ಹೊರಿಸದ ಕಾರಣ, ಇಮ್ರಾನ್ ಅವರಿಗೆ ವಾಪಸ್ ಹೋಗಲು ನ್ಯಾಯಾಲಯವು ಅನುಮತಿ ನೀಡಿತು.

‘ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಇಮ್ರಾನ್ ಖಾನ್ ಪೂರ್ಣಗೊಳಿಸಿದ್ದಾರೆ. ಅವರ ವಿರುದ್ಧ ಯಾವುದೇ ದೋಷಾರೋಪ ಹೊರಿಸಲಾಗಿಲ್ಲ. ಹಾಗಾಗಿ, ಅವರು ಹಿಂತಿರುಗಿದ್ದಾರೆ’ ಎಂದು ಪಿಟಿಐನ ಹಿರಿಯ ನಾಯಕ ಷಾ ಮಹಮೂದ್ ಖುರೇಷಿ ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ.

ಚುನಾವಣೆ ವೇಳೆಯಲ್ಲಿ ಇಮ್ರಾನ್ ಖಾನ್ ತಮ್ಮ ಆಸ್ತಿ ಘೋಷಣೆಯಲ್ಲಿ ಉಡುಗೊರೆಗಳ ವಿವರಗಳನ್ನು ಮರೆಮಾಚಿದ್ದ ಕಾರಣಕ್ಕಾಗಿ ಅವರ ವಿರುದ್ಧ ಚುನಾವಣಾ ಆಯೋಗವು ದೂರು ಸಲ್ಲಿಸಿತ್ತು. ಈ ಪ್ರಕರಣದ ವಿಚಾರಣೆಗಾಗಿ ಶನಿವಾರ ಇಮ್ರಾನ್, ಸ್ಥಳೀಯ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಾಫರ್ ಇಕ್ಬಾಲ್ ಅವರ ಮುಂದೆ ಹಾಜರಾಗಬೇಕಿತ್ತು.

ತಮ್ಮ ಬೆಂಬಲಿಗರು ಹಾಗೂ ಭದ್ರತಾ ಪಡೆಗಳ ನಡುವೆ ಸಂಘರ್ಷ ನಡೆದ ಕಾರಣ, ಇಮ್ರಾನ್ ನ್ಯಾಯಾಲಯದ ಒಳಗೆ ಬರಲು ಸಾಧ್ಯವಾಗಲಿಲ್ಲ. ಇಮ್ರಾನ್‌ಗಾಗಿ ನ್ಯಾಯಾಧೀಶರು ಗಂಟೆಗಟ್ಟಲೆ ಕಾದರು. ಬಳಿಕ ಇಮ್ರಾನ್ ಪರ ವಕೀಲರ ಸಲಹೆಯಂತೆ, ನ್ಯಾಯಾಲಯದ ಹೊರಗೆ ವಾಹನದಲ್ಲಿ ಕುಳಿತಿದ್ದ ಇಮ್ರಾನ್ ಅವರಿಂದ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿಸಿಕೊಳ್ಳಲು ಅವರು ಒಪ್ಪಿಕೊಂಡರು.

ಇಮ್ರಾನ್ ಸಹಿ ಹಾಕಿದ ಬಳಿಕ ಅವರಿಗೆ ವಾಪಸ್ ಹೋಗಲು ನ್ಯಾಯಾಲಯ ಅನುಮತಿ ನೀಡಿತು.

‘ಇಂದಿನ ಪರಿಸ್ಥಿತಿ ಹೀಗಿರುವಾಗ ವಿಚಾರಣೆ ಮತ್ತು ಹಾಜರಾತಿಗಾಗಿ ಮುಂದುವರಿಯುವುದು ಸಾಧ್ಯವಿಲ್ಲ. ಇಮ್ರಾನ್ ಅವರ ಹಾಜರಾತಿಯನ್ನು ಗುರುತಿಸಿದ ಬಳಿಕ ಇಲ್ಲಿ ನೆರೆದಿರುವವರೆಲ್ಲರನ್ನೂ ಚದುರಿಸಬೇಕು. ಇದಕ್ಕಾಗಿ ಇಲ್ಲಿ ಶೆಲ್ ದಾಳಿಯ ಅಥವಾ ಘರ್ಷಣೆಯ ಅಗತ್ಯವಿಲ್ಲ. ಇಂದು ವಿಚಾರಣೆಯನ್ನು ನಡೆಸಲಾಗದು ಎಂದು ನ್ಯಾಯಾಧೀಶರು ಹೇಳಿದ್ದಾರೆ’ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT