ಗುರುವಾರ , ಸೆಪ್ಟೆಂಬರ್ 16, 2021
29 °C

ಭಾರತದ ಗಡಿ ಸಮೀಪ ಉಗ್ರರ ಸಂಚಾರ; ಬಿಎಸ್‌ಎಫ್‌ ಹೈ–ಟೆಕ್‌ ಸಾಧನದಲ್ಲಿ ದೃಶ್ಯ ಸೆರೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಪಾಕಿಸ್ತಾನದ ಬದ್ಧತೆಯು ಬೂಟಾಟಿಕೆ ಎಂಬುದು ಮತ್ತೆ ಸಾಬೀತಾಗಿದೆ. ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಅಂತರರಾಷ್ಟ್ರೀಯ ಗಡಿಯ ಸಮೀಪ ಪಾಕಿಸ್ತಾನವು ಭಯೋತ್ಪಾದಕರ ಜಮಾವಣೆಯಲ್ಲಿ ನಿರತವಾಗಿದೆ. ಉಗ್ರರ ನೆಲೆ ಹಾಗೂ ಉಗ್ರರ ಸಂಚಾರದ ದೃಶ್ಯಗಳು ಪಾಕಿಸ್ತಾನದ ನಡೆಯ ಬಗ್ಗೆ ಪೂರಕ ದಾಖಲೆ ಒದಗಿಸಿವೆ.

ಗುಪ್ತಚರ ಮೂಲಗಳಿಂದ ದೊರೆತಿರುವ ಮಾಹಿತಿ ಪ್ರಕಾರ, ಭಾರತದ ಮೇಲೆ ಯುದ್ಧ ಮಾಡಲು ಪಾಕಿಸ್ತಾನವು ಉಗ್ರರನ್ನು ಬಳಸಿಕೊಳ್ಳುತ್ತಿರುವುದು ಸಾಬೀತಾಗಿದೆ. ಉಗ್ರಗಾಮಿಗಳು ಭಾರತದೊಳಗೆ ನುಸುಳಲು ಸರಿಯಾದ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಜಮ್ಮು ಪ್ರದೇಶದ ಅಂತರರಾಷ್ಟ್ರೀಯ ಗಡಿ ಸಮೀಪದ ಬಿಎಸ್‌ಎಫ್‌ ಪೋಸ್ಟ್‌ನ ಎದುರಲ್ಲಿಯೇ ಉಗ್ರರು ಬೀಡು ಬಿಟ್ಟಿರುವುದಕ್ಕೆ ದೃಶ್ಯಗಳ ಸಾಕ್ಷಿ ಇರುವುದಾಗಿ ತಿಳಿದು ಬಂದಿದೆ. ಈ ಕುರಿತು ಐಎಎನ್‌ಎಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹೈ–ಟೆಕ್‌ ಸಾಧನಗಳನ್ನು ಬಳಸಿ ಬಿಎಸ್‌ಎಫ್‌, ಉಗ್ರರ ನೆಲೆಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ದೇಶದೊಳಗೆ ನುಸುಳುವ ಉಗ್ರರ ಯೋಜನೆಗಳನ್ನು ಹೊಸಕಿಹಾಕುವ ಪ್ರಯತ್ನ ನಡೆಸಿದೆ. ಉಗ್ರರ ನೆಲೆಗಳು ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಬದಿಗೆ ಇರುವುದನ್ನು ಗುರುತಿಸಲಾಗಿದೆ.

ಇದನ್ನೂ ಓದಿ: ಗಡಿ ನುಸುಳುವಿಕೆ: ಬಾಂಗ್ಲಾದಿಂದ 441, ಪಾಕ್‌ನಿಂದ 33 ಯತ್ನ, ಚೀನಾದಿಂದ ಒಂದೂ ಇಲ್ಲ

ಅಂತರರಾಷ್ಟ್ರೀಯ ಗಡಿಯ ಸಮೀಪ ನಾಲ್ಕರಿಂದ ಐವರು ನುಸುಳುಕೋರರ ಗುಂಪು ಓಡಾಟ ನಡೆಸಿರುವುದು ಇದೇ ಮೊದಲ ಬಾರಿಗೆ ಪತ್ತೆಯಾಗಿದೆ. ಬಹುಶಃ ಭಾರತದ ಗಡಿಯೊಳಗೆ ನುಸುಳುವ ಮಾರ್ಗದ ಹುಡುಕಾಟ ನಡೆಸಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಇದೇ ಮೊದಲ ಬಾರಿಗೆ ಉಗ್ರರ ನೆಲೆ ಮತ್ತು ಅಲ್ಲಿ ಉಗ್ರರ ಓಡಾಟವಿರುವ ಸ್ಪಷ್ಟವಾದ ದೃಶ್ಯಗಳು ಸೆರೆಯಾಗಿವೆ. ಜಮ್ಮು ಪ್ರದೇಶದಲ್ಲಿ ಉಗ್ರರು ನುಸುಳಲು ಹಲವು ಪ್ರಯತ್ನ ನಡೆಸಬಹುದಾಗಿದ್ದು, ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ. ಈಗಾಗಲೇ ಜಮ್ಮು ಭಾಗದಲ್ಲಿ ಎರಡು ಪ್ರಮುಖ ನುಸುಳುವಿಕೆ ಪ್ರಯತ್ನಗಳನ್ನು ಭದ್ರತಾ ಪಡೆಗಳು ತಪ್ಪಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು