ಮಂಗಳವಾರ, ಮೇ 17, 2022
26 °C

ಪಾಕ್‌ ಕುಚೋದ್ಯಕ್ಕೆ ಭಾರತೀಯ ಸೇನೆಯಿಂದ ತಕ್ಕ ಉತ್ತರ: ರಾಜನಾಥ್‌ಸಿಂಗ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಪಾಕಿಸ್ತಾನದ ಕುಚೋದ್ಯವನ್ನು ಗಡಿಗಷ್ಟೇ ಸೀಮಿತಗೊಳಿಸುವ ಮೂಲಕ ಅವರ ದುಷ್ಕೃತ್ಯಕ್ಕೆ ಭಾರತೀಯ ಸೇನೆಯು ತಕ್ಕ ಉತ್ತರ ನೀಡಿದೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ರಾಜ್ಯಸಭೆಗೆ ಸೋಮವಾರ ತಿಳಿಸಿದರು.

‘ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಚಟುವಟಿಕೆಗಳನ್ನು ಒಳಗೊಂಡಿರುವ ಅವರ ಕ್ರಮಗಳಿಗೆ ಭಾರತೀಯ ಸೇನೆ, ಬಿಎಸ್‌ಎಫ್‌ ಮತ್ತು ಇತರ ಭದ್ರತಾ ಪಡೆಗಳು ತಕ್ಕ ಉತ್ತರ ನೀಡಿವೆ’ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಹೇಳಿದರು.

ಕದನ ವಿರಾಮ ಉಲ್ಲಂಘನೆ ತಡೆಯುವಲ್ಲಿ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದರಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ‘ನಿರ್ಲಕ್ಷ್ಯ ವಹಿಸುವ ಪ್ರಶ್ನೆಯೇ ಇಲ್ಲ. ನಮ್ಮ ಸೇನೆಯು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ. ನಾವು ಅಧಿಕಾರಕ್ಕೆ ಬಂದ ನಂತರ ಸೇನೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಹೇಳುತ್ತಿಲ್ಲ. ನಮ್ಮ ಸೇನೆಯು ಮೊದಲಿನಿಂದಲೂ ಪರಿಣಾಮಕಾರಿ ಕ್ರಮ ತೆಗೆದುಕೊಂಡಿದೆ. ಕದನ ವಿರಾಮ ಉಲ್ಲಂಘನೆ ಎದುರಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳು ಮತ್ತು ಶಸ್ತ್ರಾಸ್ತ್ರಗಳ ಬಗ್ಗೆ ವಿವರಗಳನ್ನು ನೀಡುವುದು ಸೂಕ್ತವಲ್ಲ’ ಎಂದು ಹೇಳಿದರು.

‘ಗಡಿಯಾಚೆಗಿನ ಗುಂಡಿನ ದಾಳಿ ಸೇರಿದಂತೆ 2020ರಲ್ಲಿ 5,133 ಬಾರಿ ಕದನ ವಿರಾಮ ಉಲ್ಲಂಘನೆಯಾಗಿದೆ. 2021ರ ಜನವರಿ 28ರ ವರೆಗೆ 299 ಬಾರಿ ಉಲ್ಲಂಘನೆ ಪ್ರಕರಣಗಳು ನಡೆದಿವೆ. 2020ರಲ್ಲಿ 46 ಮಂದಿ ಮೃತಪಟ್ಟಿದ್ದಾರೆ. 2021ರ ಫೆಬ್ರುವರಿ 1ರವರೆಗೆ ಒಬ್ಬ ಯೋಧ ಮೃತಪಟ್ಟ ವರದಿಯಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು