ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಯದ ಸದನ ಕದನ: ಬೃಹತ್ ಬ್ಯಾನರ್ ಪ್ರದರ್ಶಿಸಿದ ಪ್ರತಿಪಕ್ಷಗಳು

ಬೃಹತ್ ಬ್ಯಾನರ್ ಪ್ರದರ್ಶಿಸಿದ ಪ್ರತಿಪಕ್ಷಗಳು; ಸಭಾಪತಿ ಕರೆದಿದ್ದ ಸಭೆಗೆ ಗೈರು
Last Updated 21 ಮಾರ್ಚ್ 2023, 22:54 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ತಿನಲ್ಲಿ ನಡೆಯುತ್ತಿರುವ ಬಜೆಟ್‌ ಅಧಿವೇಶನದ ಎರಡನೇ ಭಾಗದ ಅಧಿವೇಶನದ ಸತತ ಏಳನೇ ದಿನವೂ ವ್ಯರ್ಥವಾಗಿದೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಣ ಸಂಘರ್ಷ ಮಂಗಳವಾರವೂ ಮುಂದುವರಿದಿದೆ.

ಅದಾನಿ ಪ್ರಕರಣದಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಬೇಕು ಎಂಬ ಆಗ್ರಹಕ್ಕೆ ಕಿವಿಗೊಡದ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ರತಿಪಕ್ಷಗಳು ಪ್ರತಿಭಟನೆಗೆ ವಿನೂತನ ಮಾರ್ಗ ಹಿಡಿದಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಉದ್ಯಮಿ ಗೌತಮ್ ಅದಾನಿ ಅವರ ಚಿತ್ರಗಳಿರುವ ಬೃಹತ್ ಗಾತ್ರದ ಬ್ಯಾನರ್‌ ಅನ್ನು ಸಂಸತ್ತಿನ ಮೊದಲ ಮಹಡಿಯಲ್ಲಿ ಮಂಗಳವಾರ ಪ್ರದರ್ಶಿಸಿ ಪ್ರತಿ
ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದವು. ಸಂಸತ್ ಭವನದಲ್ಲಿ ಈ ರೀತಿಯ ದೊಡ್ಡ ಬ್ಯಾನರ್ ನೇತುಹಾಕಿ ಪ್ರತಿಭಟಿಸಿದ್ದು ಇದೇ ಮೊದಲು ಎನ್ನಲಾಗಿದೆ.

ಮಂಗಳವಾರ ಕಲಾಪ ಆರಂಭವಾಗುವುದಕ್ಕೂ ಮುನ್ನ, ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯಲ್ಲಿ ‘ವಿನೂತನ’ ಪ್ರತಿಭಟನೆಗೆ ಅಂತಿಮ ರೂಪ ನೀಡಲಾಯಿತು.

ಸಂಸತ್ತಿನ ಉಭಯ ಸದನಗಳ ಕಲಾಪವು ಮಂಗಳವಾರ ಮಧ್ಯಾಹ್ನಕ್ಕೆ ಮುಂದೂಡಿಕೆಯಾದ ಬಳಿಕ, 17 ಪ್ರತಿಪಕ್ಷಗಳ ಸಂಸದರು ಸಂಸತ್ ಭವನದ ಮೊದಲ ಮಹಡಿಯಲ್ಲಿರುವ ಎಸ್‌ಬಿಐ ಕಚೇರಿ ಎದುರು ಸೇರಿದರು. ಅದಾನಿ ಸಮೂಹಕ್ಕೆ ಸಾಲ ನೀಡಿರುವ ಎಸ್‌ಬಿಐ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ‘ಮೋದಾನಿ’, ‘ನಮಗೆ ಜೆಪಿಸಿ ಬೇಕು’ ಎಂದು ಬರೆಯಲಾಗಿದ್ದ ದೊಡ್ಡ ಬ್ಯಾನರ್ ಪ್ರದರ್ಶಿಸಿದರು. ‘ಮೋದಿ ಮತ್ತು ಅದಾನಿ ಅಣ್ಣತಮ್ಮಂದಿರು. ಇಬ್ಬರೂ ಸೇರಿ ದೇಶವನ್ನು ಮಾರುತ್ತಾರೆ’ ಎಂಬುದಾಗಿ ಘೋಷಣೆಗಳನ್ನು ಕೂಗಿದರು.

ಕಾಂಗ್ರೆಸ್, ಎಎಪಿ, ಬಿಆರ್‌ಎಸ್, ಡಿಎಂಕೆ, ಸಿಪಿಎಂ, ಸಿಪಿಐ, ಆರ್‌ಜೆಡಿ, ಎನ್‌ಸಿಪಿ ಹಾಗೂ ಎಸ್‌ಪಿ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇದೇ 13ರಿಂದ ಆರಂಭವಾದ ಎರಡನೇ ಹಂತದ ಬಜೆಟ್‌ ಅಧಿವೇಶನದಲ್ಲಿ ಪ್ರತಿಪಕ್ಷಗಳು ಒಗ್ಗಟ್ಟಾಗಿ ನಡೆಸಿದ ನಾಲ್ಕನೇ ಪ್ರತಿಭಟನೆ ಇದು.

ಸದನ ನಾಯಕರ ಸಭೆಗೆ ಗೈರು

ರಾಜ್ಯಸಭೆಯ ಸಭಾಪತಿ ಜಗದೀಪ್‌ ಧನಕರ್ ಅವರು, ಸಂಸತ್ ಕಲಾಪದ ಬಿಕ್ಕಟ್ಟು ಪರಿಹರಿಸುವ ಕುರಿತಂತೆ ಮಂಗಳವಾರ ಕರೆದಿದ್ದ ಎರಡು ಸಭೆಗಳಿಗೆ ಪ್ರತಿಪಕ್ಷಗಳು ಹಾಜರಾಗಲಿಲ್ಲ. ಬೆಳಗ್ಗಿನ ಕಲಾಪ ಮುಂದೂಡಿಕೆಯಾದ ಬಳಿಕ ಕರೆದಿದ್ದ ಸದನ ನಾಯಕರ ಸಭೆಗೆ ಪ್ರತಿಪಕ್ಷಗಳು ಗೈರಾಗಿದ್ದವು. ಡಿಎಂಕೆ, ಬಿಆರ್‌ಎಸ್, ಎಎಪಿ ಒಳಗೊಂಡಂತೆ ವಿವಿಧ ಪಕ್ಷಗಳ ಸದನ ನಾಯಕರು ಸಭೆಗೆ ಹಾಜರಾಗದಿರಲು ತೀರ್ಮಾನಿಸಿದ್ದರು. ‘ಸರ್ಕಾರವು ಜೆಪಿಸಿ ರಚನೆಗೆ ಸಿದ್ಧವಿಲ್ಲ ಎಂಬುದು ಈ ನಡೆಯಿಂದ ಗೊತ್ತಾಗುತ್ತದೆ. ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಸರ್ಕಾರದ ಜೊತೆ ಸಭೆ ನಡೆಸುವುದರಲ್ಲಿ ಅರ್ಥವಿಲ್ಲ’ ಎಂದು ಪ್ರತಿಪಕ್ಷಗಳು ಹೇಳಿವೆ. ಬಿಜೆಪಿ, ವೈಎಸ್‌ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ಸಭೆಯಲ್ಲಿ ಭಾಗಿಯಾಗಿದ್ದವು ಎಂದು ಧನಕರ್ ಅವರು ಸಭೆಯ ಬಳಿಕ ಟ್ವೀಟ್ ಮಾಡಿದರು. ಸಭೆಗೆ ಹಾಜರಾಗದ ಪ್ರತಿಪಕ್ಷಗಳ ವರ್ತನೆ ಸರಿಯಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಸಭೆಗೂ ಮುನ್ನ ತಮ್ಮನ್ನು ಭೇಟಿಯಾಗಿದ್ದ ಕಾಂಗ್ರೆಸ್ ಮುಖ್ಯ ಸಚೇತಕ ಮತ್ತು ಡಿಎಂಕೆ ಸದನ ನಾಯಕರು ಸಭೆಗೆ ಹಾಜರಾಗುತ್ತಿಲ್ಲ ಎಂಬುದನ್ನು ತಿಳಿಸಿದ್ದರು ಎಂದು ಧನಕರ್ ಹೇಳಿದ್ದಾರೆ.

ಮಧ್ಯಾಹ್ನ 2.30ಕ್ಕೆ ಧನಕರ್ ಅವರು ಕರೆದಿದ್ದ ಮತ್ತೊಂದು ಸಭೆಯಲ್ಲಿ ಪ್ರತಿಪಕ್ಷಗಳಾದ ಎನ್‌ಸಿಪಿ, ಡಿಎಂಕೆ ಹಾಗೂ ಟಿಎಂಸಿಯ ಕೆಲವು ಪ್ರತಿನಿಧಿಗಳು ಕಾಣಿಸಿಕೊಂಡರು. ಮತ್ತೆ ಸಭೆ ಕರೆದ ಸಭಾಪತಿ ಅವರಿಗೆ ಅಗೌರವ ತೋರಬಾರದು ಎಂಬ ಕಾರಣಕ್ಕೆ ಕೆಲವರನ್ನು ಸಭೆಗೆ ಕಳುಹಿಸಲು ಪ್ರತಿಪಕ್ಷಗಳು ತೀರ್ಮಾನಿಸಿದ್ದವು ಎಂದು ಮೂಲಗಳು ತಿಳಿಸಿವೆ.

ಎರಡೂ ಕಡೆಯವರು ತಮ್ಮ ವಿಷಯಗಳನ್ನು ಪಕ್ಕಕ್ಕಿಡಬೇಕು ಎಂದು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಲೋಕಸಭೆ ಸ್ಪೀಕರ್ ಓ ಬಿರ್ಲಾ ಅವರು ಸಲಹೆ ನೀಡಿದರು. ಬಿಜೆಪಿ ಇದಕ್ಕೆ ಒಪ್ಪಿಕೊಂಡಿತ್ತಾ ದರೂ, ಕಾಂಗ್ರೆಸ್‌ನಿಂದಲೂ ಇದೇ ನಿಲುವನ್ನು ಬಯಸಿತು. ಆದರೆ, ಅದಾನಿ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುವುದನ್ನು ಮುಂದುವರಿಸುವುದಾಗಿ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದರು. ರಾಹುಲ್ ಅವರಿಗೆ ಮಾತ ನಾಡಲು ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನು ಅವರು ಮುಂದಿಟ್ಟರು.

ಕಲಾಪ ಮತ್ತೆ ನನೆಗುದಿಗೆ

ಬೆಳಿಗ್ಗೆ 11 ಗಂಟೆಗೆ ಸದನ ಆರಂಭವಾದಾಗ, ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡುವಂತೆ ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರು ಸೂಚಿಸಿದರು. ಆದರೆ ರಾಹುಲ್ ಗಾಂಧಿ ಕ್ಷಮೆಗೆ ಆಗ್ರಹಿಸಿ ಬಿಜೆಪಿ ಸಂಸದರು ಘೋಷಣೆ ಕೂಗಿ ಗದ್ದಲ ಎಬ್ಬಿಸಿದರು. ಕಲಾಪ ಆರಂಭವಾದ ಕೆಲವೇ ನಿಮಿಷಗಳಲ್ಲಿ ಎರಡೂ ಸದನಗಳನ್ನು ಮುಂದೂಡಲಾಯಿತು. ಈ ಗದ್ದಲದ ನಡುವೆಯೇ ಬಜೆಟ್‌ ಸಂಬಂಧಿತ ಮಸೂದೆಗಳು ಹಾಗೂ ಜಮ್ಮು–ಕಾಶ್ಮೀರದ ಪೂರಕ ಅಂದಾಜಿಗೆ ಒಪ್ಪಿಗೆ ಸಿಕ್ಕಿತು.

ಟಿಎಂಸಿ ಪ್ರತ್ಯೇಕ ಹಾದಿ

ಸಂಸತ್ ಭವನದ ಮೊದಲ ಮಹಡಿಯಲ್ಲಿ ಪ್ರತಿಪಕ್ಷಗಳು ಮಂಗಳವಾರ ನಡೆಸಿದ ಪ್ರತಿಭಟನೆಯಲ್ಲಿ ತೃಣಮೂಲ ಕಾಂಗ್ರೆಸ್ ಭಾಗಿಯಾಗಿರಲಿಲ್ಲ. ಪ್ರತಿಪಕ್ಷಗಳ ಗುಂಪಿನಲ್ಲಿದ್ದರೂ, ಪ್ರತ್ಯೇಕ ಮಾರ್ಗ ಅನುಸರಿಸುತ್ತಿರುವ ಟಿಎಂಸಿ, ಅದಾನಿ ವಿಚಾರವಾಗಿ ಪ್ರತ್ಯೇಕ ಪ್ರತಿಭಟನೆ ಹಮ್ಮಿಕೊಂಡಿತ್ತು. ಸಂಸತ್ ಭವನದ ಪಕ್ಷದ ಕಚೇರಿಯಿಂದ ವಿಜಯ್ ಚೌಕದವರೆಗೆ ಸಂಸದರು ಮೆರವಣಿಗೆ ನಡೆಸಿದರು. ಅದಾನಿಯನ್ನು ಬಂಧಿಸಿ ಎಂಬ ಬರಹವುಳ್ಳ ಹಾಗೂ ಎಲ್ಲ ಟಿಎಂಸಿ ಸಂಸದರ ಸಹಿ ಇರುವ ಟೋಪಿಯನ್ನು ಧರಿಸಿ ಸದಸ್ಯರು ಮೆರವಣಿಗೆ ನಡೆಸಿದರು. ಹಣಕಾಸು ಸಚಿವರು, ಸೆಬಿ, ಎಲ್‌ಐಸಿ, ಎಸ್‌ಬಿಐ ಮುಖ್ಯಸ್ಥರಿಗೆ ಟೋಪಿಯನ್ನು ನೀಡಲಾಗುವುದು ಎಂದು ರಾಜ್ಯಸಭೆಯಲ್ಲಿ ಪಕ್ಷದ ನಾಯಕರಾಗಿರುವ ಡೆರೆಕ್ ಒಬ್ರಿಯನ್ ತಿಳಿಸಿದರು.

ಅದಾನಿ ಪ್ರಕರಣದಲ್ಲಿ ಪಕ್ಷವು ಮೆದುವಾಗಿ ನಡೆದುಕೊಳ್ಳುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಟಿಎಂಸಿ, ಅದಾನಿಯನ್ನು ಬಂಧಿಸಿ ಎಂದು ಆಗ್ರಹಿಸಿರುವ ಏಕೈಕ ಪಕ್ಷ ತಮ್ಮದು ಎಂದು ಹೇಳಿಕೊಂಡಿದೆ.

***

ಖರ್ಗೆ ಅವರಿಗೆ ಮಾತನಾಡಲು ಸಭಾಪತಿ ಅವಕಾಶ ನೀಡಿದರು. ಆದರೆ ಬಿಜೆಪಿ ಸಂಸದರು ಘೋಷಣೆ ಕೂಗಿದರು. ಹೀಗಾದರೆ ಬಿಕ್ಕಟ್ಟು ಪರಿಹಾರವಾಗುತ್ತದೆಯೇ?

- ಜೈರಾಮ್ ರಮೇಶ್, ಕಾಂಗ್ರೆಸ್ ಮುಖ್ಯ ಸಚೇತಕ

***

‘ಪ್ರಾಮಾಣಿಕ ಧ್ಯೇಯ ಮತ್ತು ನೈಜ ವಿಕಾಸ’ವೇ ಉದ್ದೇಶ ವಾಗಿದ್ದರೆ ಸರ್ಕಾರ ಚರ್ಚೆಯಿಂದ ಓಡಿಹೋಗುತ್ತಿರುವುದೇಕೆ? ರಾಷ್ಟ್ರೀಯ ಹಿತಾಸಕ್ತಿಯ ವಿಚಾರ ಚರ್ಚೆಯಾಗಬೇಕಲ್ಲವೇ?

- ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ಪ್ರತಿಪಕ್ಷದ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT