ಮಂಗಳವಾರ, ಸೆಪ್ಟೆಂಬರ್ 28, 2021
22 °C
ಸಂಸತ್‌ ಅಧಿವೇಶನ ಸುಗಮವಾಗಿ ನಡೆಯದಿರಲು ಕಾರಣ ಸರ್ಕಾರವೇ, ವಿರೋಧ ಪಕ್ಷವೇ?

ವಿಶ್ವೇಶ್ವರ ಹೆಗಡೆ ಕಾಗೇರಿ ಬರಹ: ಕಲಾಪಗಳ ಸಂಸ್ಕೃತಿಯು ಗದ್ದಲದ ಸಂಸ್ಕೃತಿಯತ್ತ...

ವಿಶ್ವೇಶ್ವರ ಹೆಗಡೆ, ಕಾಗೇರಿ Updated:

ಅಕ್ಷರ ಗಾತ್ರ : | |

ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವಂತಹ ಪದ್ದತಿಯೇ ಪ್ರಜಾಪ್ರಭುತ್ವ. ಇಲ್ಲಿ ಪ್ರಜೆಗಳ ಭಾವನೆ, ಪ್ರಜೆಗಳ ಆಕಾಂಕ್ಷೆ ಮತ್ತು ಆಶೋತ್ತರಗಳ ಉದ್ದೇಶವನ್ನಿಟ್ಟು, ಒಂದು ಸದನದ ಜನಪ್ರತಿನಿಧಿಗಳಾಗಿ ಕರ್ತವ್ಯವನ್ನು ನಿರ್ವಹಿಸುವಂತಹ ವ್ಯವಸ್ಥೆಯೇ ಸಂಸದೀಯ ವ್ಯವಸ್ಥೆ.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳ ಪಾತ್ರ ಮಹತ್ವದ್ದಾಗಿರುತ್ತದೆ. ರಾಜಕೀಯ ಪಕ್ಷಗಳು ಈ ಸಂಸದೀಯ ವ್ಯವಸ್ಥೆಯ ಬೆನ್ನೆಲುಬು. ಅದರಂತೆ ಭಾರತದ ಸಂವಿಧಾನವು ಚುನಾವಣಾ ಆಯೋಗಕ್ಕೆ ಪ್ರತ್ಯೇಕ ಸ್ಥಾನಮಾನವನ್ನು ನೀಡಿ ದೇಶದಲ್ಲಿ ಮುಕ್ತ ಹಾಗೂ ನ್ಯಾಯೋಚಿತ ಚುನಾವಣೆಯ ಉದ್ದೇಶವನ್ನು ಈಡೇರಿಸಿದೆ. ರಾಷ್ಟ್ರ ಮತ್ತು ಜನರು ಎದುರಿಸುತ್ತಿರುವ ಬಹುರೂಪಿ ಸಮಸ್ಯೆಗಳನ್ನು ನಿಭಾಯಿಸಲು ಸಕ್ರಿಯವಾಗಿ ಶ್ರಮಿಸುವ ವ್ಯವಸ್ಥೆಯೇ ಯಶಸ್ವಿ ಪ್ರಜಾಪ್ರಭುತ್ವ.

ಈ ವ್ಯವಸ್ಥೆಯಲ್ಲಿ ಶಾಸಕಾಂಗವು ಸಾರ್ವಭೌಮ ಮತ್ತು ಸರ್ವೋಚ್ಚ ಅಧಿಕಾರವನ್ನು ಹೊಂದಿದೆ. ಈ ವೇದಿಕೆಗಳು ಜನರ ವಿಶ್ವಾಸವನ್ನು ಗಳಿಸಿಕೊಳ್ಳಬೇಕಾದರೆ ಅವುಗಳು ವ್ಯವಸ್ಥಿತ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾದುದು ಅತ್ಯಗತ್ಯ. 

ಸಂವಿಧಾನದಲ್ಲಿ ದೇಶದ ಸಂಸತ್ತು ಮತ್ತು ರಾಜ್ಯದ ವಿಧಾನ ಮಂಡಲಗಳಿಗೆ ಅತ್ಯುನ್ನತ ಸ್ಥಾನಮಾನವನ್ನು ನೀಡಿದ್ದು, ಅಲ್ಲಿನ ಸದಸ್ಯರಿಗೆ ಸಂಪೂರ್ಣ ವಾಕ್ ಸ್ವಾತಂತ್ರ್ಯವನ್ನು ಕಲ್ಪಿಸಲಾಗಿದೆ. ಅಂದರೆ ಸದನದ ಕಲಾಪವನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಸದನದ ಕಲಾಪಗಳನ್ನು ನಿಯಮಾವಳಿಗಳಂತೆ ನಡೆಸಲು ಸದನದ ಮುಖ್ಯಸ್ಥರಾಗಿ ಸಭಾಧ್ಯಕ್ಷರು ಸ್ವತಂತ್ರ ಹಾಗೂ ನಿಷ್ಪಕ್ಷವಾದ ದೃಷ್ಟಿಕೋನವನ್ನು ಹೊಂದಿರುವಂತೆ ಸಂವಿಧಾನದಲ್ಲಿ ಹಾಗೂ ನಿಯಮಾವಳಿಗಳಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ.

ಈ ಸಂಸದೀಯ ವ್ಯವಸ್ಥೆಯಲ್ಲಿ ಪಕ್ಷ ಪದ್ಧತಿಯ ಮೇರೆಗೆ ಆಡಳಿತ ನಡೆಸುವಂತಹ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳಿರುತ್ತವೆ. ಇವುಗಳೆರಡರ ಮುಖ್ಯ ಧ್ಯೇಯ ಕಲ್ಯಾಣ ರಾಜ್ಯವನ್ನು ಸೃಷ್ಟಿಸುವುದೇ ಆಗಿದೆ. ಇವುಗಳು ಒಂದು ವ್ಯವಸ್ಥೆಯ ಎರಡು ಮುಖಗಳಿದ್ದಂತೆ. ಆದರೆ ಕಳೆದೆರಡು ದಶಕಗಳಿಂದ ಸಂಸತ್ತು ಮತ್ತು ವಿಧಾನ ಮಂಡಲಗಳ ಚರ್ಚೆಗಳನ್ನು ಗಮನಿಸಿದಲ್ಲಿ ಆಡಳಿತ ಪಕ್ಷದ ಎಲ್ಲಾ ಕ್ರಮಗಳನ್ನು ವಿರೋಧಿಸುವುದೇ ಸರಿಯಾದ ಧೋರಣೆ ಎಂಬ ಭಾವನೆ ಪ್ರತಿಪಕ್ಷಗಳಲ್ಲಿರುವುದು ಕಾಣಿಸುತ್ತದೆ. ಪ್ರತಿಭಟನೆಯ ನೆಪದಲ್ಲಿ ಭಾರತದ ಜನತೆಯ ಆಶೋತ್ತರಗಳನ್ನು, ಸಂಸದೀಯ ಕಲಾಪಗಳ ಮಹತ್ವವನ್ನು, ಪ್ರಜಾಪ್ರಭುತ್ವದ ನಿಲುವುಗಳನ್ನು ಇಂದಿನ ರಾಜಕೀಯ ಪಕ್ಷಗಳು ಬಲಿಕೊಡುತ್ತಿವೆ. ಆಡಳಿತ ಪಕ್ಷವು ತಾನು ಮಾಡಿದ್ದೇ ಸರಿ ಎಂಬ ಧೋರಣೆಯಲ್ಲಿದ್ದರೂ ಅದನ್ನು ಸರಿಪಡಿಸಲು ಸಂಸದೀಯ ಪದ್ಧತಿಯಲ್ಲಿ ಕೆಲವೊಂದು ಮಾರ್ಗೋಪಾಯಗಳನ್ನು ಅಳವಡಿಸಿಕೊಳ್ಳಲಾಗಿದೆ.

ಕಲಾಪ ನಡೆಸಲು ಅವಕಾಶ ನೀಡದಿರುವುದರ ಹಿಂದೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದವು-

1. ವಿರೋಧ ಪಕ್ಷ ಎಂಬ ಕಾರಣಕ್ಕೋಸ್ಕರ ಹಲವಾರು ಬಾರಿ ಸರ್ಕಾರದ ನಿಲುವು/ನಿರ್ಣಯವನ್ನು ವಿರೋಧಿಸುವಂತಹ ಪ್ರವೃತ್ತಿ

2. ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಸದಾವಕಾಶದಿಂದ ವಂಚಿತರಾಗಿದ್ದೇವೆ ಎನ್ನುವ ಭಾವನೆಯನ್ನು ವಿಪಕ್ಷ ಹೊಂದಿರುವುದು

3. ರಾಜಕೀಯ ಪಕ್ಷಗಳು ತಮ್ಮ ಸದಸ್ಯರನ್ನು ಸದನದ ಶಿಸ್ತು ಹಾಗೂ ಗೌರವಕ್ಕೆ ಧಕ್ಕೆ ಬಾರದಂತೆ ವರ್ತಿಸುವಂತೆ ಮಾಡಲು ವಿಫಲವಾಗಿರುವುದು

4. ಸದನದ ಕಲಾಪವನ್ನು ಮೊಟಕುಗೊಳಿಸುವ ಸದಸ್ಯರ ವಿರುದ್ಧ ಸಮಯೋಚಿತ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದು

5. ರಾಜಕೀಯ ಪಕ್ಷಗಳು ಆಂತರಿಕವಾಗಿ ತಮ್ಮ ಸದಸ್ಯರಿಗೆ ಸದನದ ನಿಯಮಾವಳಿಗಳನ್ನು ಪಾಲಿಸುವಂತೆ ತರಬೇತಿ ನೀಡದೇ ಇರುವುದು

6. ಪ್ರತಿಪಕ್ಷವು ಸದನದ ಕಾರ್ಯಕಲಾಪ ಸಲಹಾ ಸಮಿತಿಯ ಸಭೆಯನ್ನು ಬಹಿಷ್ಕರಿಸುವುದು

ಸಾಂವಿಧಾನಿಕ ಸಂಸ್ಥೆಗಳು ತಮ್ಮದೇ ಆದ ಪರಂಪರೆ, ಸಂಸ್ಕೃತಿ, ರೀತಿ-ನೀತಿಗಳನ್ನು ಹೊಂದಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಸಂಸ್ಥೆಗಳ ಕಲಾಪಗಳ ಸಂಸ್ಕೃತಿಯು ಗದ್ದಲದ ಸಂಸ್ಕೃತಿಯತ್ತ ಸಾಗುತ್ತಿದೆ. ಆಟದಲ್ಲಿ ಗೆಲ್ಲಲಾರದವನು ಸುಮ್ಮನೆ ತಕರಾರು ಎತ್ತಿ ಆಟ ನಡೆಯದಂತೆ ಮಾಡುವುದು ಸರಿಯಲ್ಲ. ಈ ರೀತಿ ಮಾಡುತ್ತಲೇ ಹೋದರೆ ಆಟ ಸುಸೂತ್ರವಾಗಿ ನಡೆಯುವುದೇ ಇಲ್ಲ, ಫಲಿತಾಂಶ ದೊರೆಯುವುದಿಲ್ಲ.

ನೆಹರೂರವರು ‘ಸಂಸತ್ತಿನಲ್ಲಿ ಪ್ರಬಲವಾದ ವಿರೋಧ ಪಕ್ಷವಿರಬೇಕು’ ಎಂದು ಬಯಸಿದ್ದರು, ಆದರೆ ಕಲಾಪ ನಡೆಸಲು ಬಿಡಲಾರದಂತಹ ವಿರೋಧ ಪಕ್ಷವನ್ನು ನಿರೀಕ್ಷಿಸಿರಲಿಲ್ಲ. ವಿರೋಧ ಪಕ್ಷಗಳ ಧ್ವನಿ ಎತ್ತರದಲ್ಲಿರಬೇಕು, ಆದರೆ ತಾರ್ಕಿಕ ಚರ್ಚೆಯ ನೆಲೆಗಟ್ಟಿನ ಮೇಲೆ ಆ ಧ್ವನಿ ನಿಂತಿರಬೇಕು, ಸಾರ್ವಜನಿಕ ಹೊಣೆಗಾರಿಕೆ, ಪರಿಣಾಮಕಾರಿ ಚರ್ಚೆ, ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವಂತಹ ಸಂವಾದದ ಅಧಿವೇಶನಗಳನ್ನು ಪ್ರಬುದ್ಧ ಜನತೆ ನಿರೀಕ್ಷಿಸುತ್ತಿದ್ದಾರೆ.

‘ಆಡಳಿತ ಪಕ್ಷದಿಂದ ಮೌಲ್ಯರಹಿತ ಅಧಿಕಾರ ಬಳಕೆ, ವಿರೋಧ ಪಕ್ಷಗಳ ಸಂಯಮ ರಹಿತ ನಡವಳಿಕೆ ಹಾಗೂ ಸಭಾಧ್ಯಕ್ಷರ ಪಕ್ಷಪಾತಿ ಧೋರಣೆ ಸಂಸತ್ತಿನ ದೋಷಗಳ ಅಂಶಗಳು’ ಎಂದು ಅರುಣ್ ಶೌರಿ ಹೇಳಿರುವ ಮಾತಿನಂತೆ ‘ವಿರೋಧ ಪಕ್ಷದ ಸಂಯಮರಹಿತ ನಡವಳಿಕೆ ಮಾತ್ರ ಸಂಸತ್ ಕಲಾಪ ನಡೆಯದಿರಲು ಕಾರಣವಾಗಿದೆ. ವಿಪಕ್ಷ ಸದನದಿಂದ ಹೊರಹೋಗುವುದು ಕೊನೆಯ ಅಸ್ತ್ರವಾಗಬೇಕು. ಕ್ಷುಲ್ಲಕ ಕಾರಣಗಳಿಗಾಗಿ ಸದನವನ್ನು ಬಹಿಷ್ಕರಿಸುವುದು, ಶೂನ್ಯವೇಳೆಯ ದುರುಪಯೋಗ, ಅರ್ಥವಿಲ್ಲದ ಗೊತ್ತುವಳಿಗಳ ಮಂಡನೆ ವಿರೋಧ ಪಕ್ಷಗಳ ಸಾಮಾನ್ಯ ನಡೆಯಾಗಿದೆ. ಹಕ್ಕುಚ್ಯುತಿಗಳ ಮಂಡನೆಯೂ ಇದೇ ರೀತಿಯಾಗಿದೆ. ಸಚಿವರು ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿದರೆ, ಸದನದ ಹಕ್ಕು ಉಲ್ಲಂಘಿಸಿರುವುದು ಸ್ಪಷ್ಟವಾಗಿ ಗೋಚರವಾದರೆ ಹಕ್ಕುಚ್ಯುತಿ ಮಂಡಿಸಬೇಕು. ಸಣ್ಣ ಪುಟ್ಟ ವಿಷಯಗಳಿಗೆಲ್ಲ ಮಂಡಿಸಿದರೆ ಸಾರ್ವಜನಿಕರು ಸದನವನ್ನು ಗಂಭೀರವಾಗಿ ಪರಿಗಣಿಸದಿರಲು ಕಾರಣವಾಗಬಹುದು.

ಶಾಸನ ಸಭೆಯ ಸುಗಮ ಕಲಾಪಕ್ಕೆ ಈ ಅಂಶಗಳು ನೆರವಾಗಬಹುದು

1. ಶಾಸನ ಸಭೆಯ ಅಧಿವೇಶನದ ಕಾಲಾವಧಿಯನ್ನು ಹೆಚ್ಚಿಸುವುದು

2. ಈಗಿರುವ 3 ಅಧಿವೇಶನದ ಪದ್ಧತಿಯನ್ನು 4 ಅಧಿವೇಶನಗಳಾಗಿ ಮಾರ್ಪಡಿಸುವುದು (ಜನವರಿಯಿಂದ ಮಾರ್ಚ್‍ವರೆಗೆ ಬಜೆಟ್‌ ಅಧಿವೇಶನ, ಏಪ್ರಿಲ್‍ನಿಂದ ಜೂನ್‍ವರೆಗೆ ಬೇಸಿಗೆ ಕಾಲದ ಅಧಿವೇಶನ, ಜುಲೈನಿಂದ ಸೆಪ್ಟಂಬರ್‌ವರೆಗೆ ಮುಂಗಾರು ಅಧಿವೇಶನ ಮತ್ತು ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಚಳಿಗಾಲದ ಅಧಿವೇಶನ)

3. ಸದನದ ಕಾರ್ಯಕಲಾಪವನ್ನು ಬಹಿಷ್ಕರಿಸುವ ಹಾಗೂ ಮೊಟಕುಗೊಳಿಸುವ ಸದಸ್ಯರ ವಿರುದ್ಧ ತಕ್ಷಣವೇ ಕಠಿಣ ಕ್ರಮವನ್ನು ಜರುಗಿಸುವುದು

4. ಕಾರ್ಯಕಲಾಪಗಳ ನಿಯಮಾವಳಿಗಳನ್ನು ಸೂಕ್ತ ತಿದ್ದುಪಡಿ ಮೂಲಕ ಹೆಚ್ಚು ಬಲಪಡಿಸುವುದು

5. ಪ್ರತಿಪಕ್ಷಗಳು ಪ್ರತಿಪಾದಿಸುವ ವಿಷಯಗಳನ್ನು ಚರ್ಚಿಸುವ ಸಲುವಾಗಿ ಸದನದಲ್ಲಿ ಪ್ರತ್ಯೇಕವಾಗಿ ದಿನ ಹಾಗೂ ಸಮಯವನ್ನು ನಿಗದಿಪಡಿಸುವುದು

ವಿರೋಧ ಪಕ್ಷಗಳು ಇರುವುದೇ ಟೀಕಿಸಲು ಎಂಬುದನ್ನು ಮರೆತು ಪ್ರಜೆಗಳ ಹಿತ ಕಾಪಾಡುವಲ್ಲಿ ಆಡಳಿತ ಪಕ್ಷಕ್ಕೆ ಸಾಥ್ ನೀಡಬೇಕು. ಹಾಗಾದಾಗ ಮಾತ್ರ ಸುಸೂತ್ರ ಆಡಳಿತ ಹಾಗೂ ಸುಗಮವಾಗಿ ಕಲಾಪ ನಡೆಯುತ್ತದೆ. ಆದರೆ, ಸಂಸತ್ತು ಮತ್ತು ವಿಧಾನ ಮಂಡಲಗಳ ಇತ್ತೀಚಿನ ಕಲಾಪಗಳನ್ನು ಗಮನಿಸಿದಲ್ಲಿ ಯಾವುದೋ ಒಂದೆರಡು ವಿಷಯಗಳನ್ನು ಹಿಡಿದುಕೊಂಡು ಆಡಳಿತ ಪಕ್ಷವನ್ನು ದುರ್ಬಲಗೊಳಿಸಬಹುದೆಂಬ ನಿಲುವಿನಲ್ಲಿ, ಕಾರ್ಯಕಲಾಪಗಳು ನಡೆಯದಂತೆ ಅಡ್ಡಿಪಡಿಸುವುದು, ಕಾರ್ಯಕಲಾಪಗಳನ್ನು ಬಹಿಷ್ಕರಿಸುವುದು, ಇಡೀ ಸದನದ ಸದಸ್ಯರುಗಳ ಹಕ್ಕಿಗೆ ಧಕ್ಕೆ ತಂದಂತೆ ಆಗುವುದಿಲ್ಲವೇ? ಆಡಳಿತ/ಪ್ರತಿಪಕ್ಷಗಳು ತಮ್ಮ ಹೊಣೆಗಾರಿಕೆಗಳನ್ನು ಅರಿತು ಸಂಸತ್ತು/ವಿಧಾನ ಮಂಡಲಗಳ ಕಾರ್ಯಕಲಾಪಗಳು ಸಂಸದೀಯ ವ್ಯವಸ್ಥೆಯ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ನಡೆಯುವಂತೆ ಮಾಡಬೇಕು. ಈ ದಿಸೆಯಲ್ಲಿ ಜನಪ್ರತಿನಿಧಿಗಳೆಲ್ಲರೂ ತಮ್ಮ ತಮ್ಮ ನಡೆಯನ್ನು ಪರಿಶೀಲಿಸಿಕೊಳ್ಳುವ ಅಗತ್ಯವಿದೆ. ಅದೇ ರೀತಿ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹಂತದಿಂದ ಹಿಡಿದು ಶಾಸಕಾಂಗಕ್ಕೆ ಆಯ್ಕೆಯಾದ ಮೇಲೂ ರಾಜಕೀಯ ಶಿಕ್ಷಣ, ಸದನದಲ್ಲಿನ ನಡವಳಿಕೆ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಅವರ ನೈತಿಕ ಬೆಳವಣಿಗೆಗೆ ಮಹತ್ವ ನೀಡುವಂತಹ ವ್ಯವಸ್ಥೆಯನ್ನು ಜಾರಿಗೆ ತರುವಲ್ಲಿ ಗುರುತರವಾದ ಪಾತ್ರವಹಿಸಬೇಕು. ಈ ದಿಸೆಯಲ್ಲಿ ತ್ವರಿತ ಕ್ರಮದ ಅಗತ್ಯವಿದೆ ಎನ್ನುವುದು ನನ್ನ ಬಲವಾದ ಒತ್ತಾಯ.

ಲೇಖಕ: ಸಭಾಧ್ಯಕ್ಷ, ಕರ್ನಾಟಕ ವಿಧಾನ ಸಭೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು