ಶನಿವಾರ, ನವೆಂಬರ್ 28, 2020
22 °C

ರಾಮಮಂದಿರ‌ ನಿರ್ಮಾಣ: ಸಂಕ್ರಾಂತಿಯಿಂದ ದೇಣಿಗೆ ಸಂಗ್ರಹ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಶೀಘ್ರವೇ ಆರಂಭವಾಗಲಿದ್ದು, ಭಕ್ತರಿಂದ ದೇಣಿಗೆ‌ ಸಂಗ್ರಹಿಸಲು ಸಂಕ್ರಾಂತಿಯ ದಿನದಿಂದ ವಿಶೇಷ ಅಭಿಯಾನ ಆರಂಭಿಸಲಾಗುತ್ತಿದೆ.

ಇಲ್ಲಿನ ವಸಂತಕುಂಜ್ ಪ್ರದೇಶದಲ್ಲಿರುವ ಪೇಜಾವರ ಮಠದ ಶಾಖೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ‌ ವಿಶ್ವ ಹಿಂದೂ ಪರಿಷತ್‌ನ ಮಾರ್ಗದರ್ಶಕ ಮಂಡಳಿ ಸದಸ್ಯ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ‌ ಸ್ವಾಮೀಜಿ, ಸತತ 45 ದಿನಗಳ ಕಾಲ ವಿಶ್ವದಾದ್ಯಂತ ದೇಣಿಗೆ ಸಂಗ್ರಹ ಅಭಿಯಾನ ನಡೆಯಲಿದೆ ಎಂದರು.

ಪ್ರತಿಯೊಬ್ಬ ಭಕ್ತ ಕನಿಷ್ಠ ₹ 10 ದೇಣಿಗೆ‌ ನೀಡುವಂತೆ ಮನವಿ ಮಾಡಲಾಗಿದೆ. ಪ್ರತಿ ಕುಟುಂಬ ಕನಿಷ್ಠ ‌₹ 100 ನೀಡಿ ರಸೀದಿ ಪಡೆಯುವ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿರುವ ಮಂದಿರ ‌ನಿರ್ಮಾಣಕ್ಕೆ ನೆರವು ನೀಡಬೇಕು ಎಂದು ಅವರು ಕೋರಿದರು.

ರಾಮಮಂದಿರ ಕಟ್ಟಡದ ನಿರ್ಮಾಣದ‌ ಅಂದಾಜು  ವೆಚ್ಚ ಎಷ್ಟಿರಲಿದೆ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಸಂಜೆ ನಡೆಯಲಿರುವ ಕಾರ್ಯಕಾರಿ ಸಮಿತಿಯ ಮತ್ತೊಂದು ಸುತ್ತಿನ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ‌ ಇದೆ ಎಂದು ಅವರು ಹೇಳಿದರು.

ರಾಮಮಂದಿರ‌ ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಎಲ್ ಅಂಡ್‌ ಟಿ ಸಂಸ್ಥೆಗೆ ವಹಿಸಲಾಗಿದೆ. ಟಾಟಾ ಕನ್ಸಲ್ಟನ್ಸಿ ಸಂಸ್ಥೆಗೆ ಉಸ್ತುವಾರಿ ಹೊಣೆ ವಹಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು. ಪೇಜಾವರ ಮಠದ ಶಾಖೆಯ ವ್ಯವಸ್ಥಾಪಕರಾದ ಯು.ವಿ. ದೇವಿಪ್ರಸಾದ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು