ರಾಮ ಮಂದಿರಕ್ಕೆ ದೇಣಿಗೆ ಸಂಗ್ರಹಿಸುವ ಬದಲು ಇಂಧನ ದರ ತಗ್ಗಿಸಿ: ಶಿವಸೇನಾ

ಮುಂಬೈ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ಬದಲು ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ತಗ್ಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶಿವಸೇನಾ ಪಕ್ಷವು ಸೋಮವಾರ ಆಗ್ರಹಿಸಿದೆ.
ಅದೇ ಹೊತ್ತಿಗೆ ಇಂಧನ ಬೆಲೆ ಗಗನಕ್ಕೇರುತ್ತಿದ್ದರೂ ಬಾಲಿವುಡ್ ತಾರೆಗಳು ಮೌನ ಪಾಲಿಸುತ್ತಿರುವುದರ ವಿರುದ್ಧ ಶಿವಸೇನಾ ಟೀಕೆ ಮಾಡಿದೆ. ಶಿವಸೇನಾ ಪಕ್ಷದ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಈ ಕುರಿತು ಉಲ್ಲೇಖಿಸಿದ್ದು, ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಕಡಿಮೆ ಮಾಡುವುದರಿಂದ ರಾಮನ ಭಕ್ತರಿಗೆ ಆಹಾರ ಸಿಗಲಿದೆ ಎಂದಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರವು ರೂಪಿಸಿರುವ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ದೇವಾಲಯದ ನಿರ್ಮಾಣಕ್ಕಾಗಿ ಕಳೆದ ತಿಂಗಳು ದೇಣಿಗೆ ಸಂಗ್ರಹಿಸುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಬದಲು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಇಳಿಕೆ ಮಾಡಿ. ದರ ಇಳಿಕೆಯಿಂದ ರಾಮ ಭಕ್ತರಿಗೆ ಆಹಾರ ಸಿಗಲಿದ್ದು, ಭಗವಾನ್ ಶ್ರೀರಾಮ್ ಕೂಡಾ ಖುಷಿಪಡಲಿದ್ದಾರೆ ಎಂದು ತಿಳಿಸಿದೆ.
ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಶಿವಸೇನೆ ಉಲ್ಲೇಖಿಸಿದೆ.
ಇದನ್ನೂ ಓದಿ: ವಯನಾಡ್ನಲ್ಲಿ ರಾಹುಲ್ ಗಾಂಧಿ ಟ್ರ್ಯಾಕ್ಟರ್ ರ್ಯಾಲಿ: ಕೇಂದ್ರದ ವಿರುದ್ಧ ಆಕ್ರೋಶ
2014ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಇಂಧನ ಬೆಲೆ ಏರಿಕೆಯಾದಾಗ ಅಕ್ಷಯ್ ಕುಮಾರ್ ಹಾಗೂ ಅಮಿತ್ ಬಚ್ಚನ್ ಮುಂತಾದ ಬಾಲಿವುಡ್ ತಾರೆಗಳು ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದರು. ಆದರೆ ಈಗ ಪೆಟ್ರೋಲ್ ಬೆಲೆ 100 ರೂ. (ರಾಜಸ್ಥಾನದಲ್ಲಿ) ದಾಟಿದರೂ ಬಾಲಿವುಡ್ ತಾರೆಗಳು ಮೌನ ಪಾಲಿಸುತ್ತಿದ್ದಾರೆ ಎಂದು ಶಿವಸೇನಾ ಆರೋಪಿಸಿದೆ.
ಕೇಂದ್ರ ಸರ್ಕಾರದ ಸೂಚನೆಯಂತೆ ಸೆಲೆಬ್ರಿಟಿಗಳು ಮೌನ ಪಾಲಿಸುತ್ತಿದ್ದಾರೆ. ಇದರ ಅರ್ಥವೇನೆಂದರೆ 2014ಕ್ಕಿಂತ ಮೊದಲು ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿತ್ತು. ಸರ್ಕಾರದ ನೀತಿಗಳನ್ನು ಟೀಕಿಸಿದರೆ ದೇಶ ದ್ರೋಹಿ ಎಂಬ ಆರೋಪ ಹೊರಿಸಿ ಜೈಲಿಗೆ ಕಳುಹಿಸುತ್ತಿರಲಿಲ್ಲ. ಆದರೆ ಇಂದು ನಾವು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ವಿರುದ್ಧ ಮಾತನಾಡುವ ಹಕ್ಕನ್ನು ಕಳೆದುಕೊಂಡಿದ್ದೇವೆ. ಹಾಗಾಗಿ ಅಕ್ಷಯ್, ಅಮಿತಾಬ್ ಅವರನ್ನು ಅನಗತ್ಯವಾಗಿ ದೂಷಿಸಬೇಕೇ? ಎಂದು ಪ್ರಶ್ನಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.