ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಷ್ಣೋದೇವಿ ದೇಗುಲ, ಗುಹೆ ಭಾನುವಾರದಿಂದ ಭಕ್ತರ ಭೇಟಿಗೆ ಮುಕ್ತ

Last Updated 15 ಆಗಸ್ಟ್ 2020, 6:40 IST
ಅಕ್ಷರ ಗಾತ್ರ

ಜಮ್ಮು: ಇಲ್ಲಿನ ರಿಯಾಸಿ ಜಿಲ್ಲೆಯ ತ್ರಿಕುಟಾ ಬೆಟ್ಟದಲ್ಲಿ ಇರುವಹೆಸರಾಂತ ಯಾತ್ರಾ ಸ್ಥಳ ವೈಷ್ಣೋದೇವಿ ಗುಹೆಗೆ ಯಾತ್ರಾರ್ಥಿಗಳ ಭೇಟಿ ಭಾನುವಾರದಿಂದ ಪುನರಾರಂಭವಾಗಲಿದೆ.

ಕೋವಿಡ್-19ನಿಂದ ಮೂಡಿದ್ದ ಪರಿಸ್ಥಿತಿ ಕಾರಣದಿಂದಾಗಿ ಐದು ತಿಂಗಳಿನಿಂದ (ಮಾರ್ಚ್ 18ರಿಂದ) ಯಾತ್ರಿಗಳ ಭೇಟಿಗೆ ನಿರ್ಬಂಧ ಹೇರಲಾಗಿತ್ತು.

ಶ್ರೀಮಾತಾ ವೈಷ್ಣೋದೇವಿ ದೇಗುಲ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಕುಮಾರ್ ಅವರು, ‘ಮೊದಲ ವಾರ ನಿತ್ಯ 2,000 ಜನರಿಗೆ ಅವಕಾಶ ಕಲ್ಪಿಸಲಾಗುವುದು. ಇವರಲ್ಲಿ 1,900 ಮಂದಿ ಜಮ್ಮು-ಕಾಶ್ಮೀರದವರು’ ಎಂದು ತಿಳಿಸಿದರು.

‘ನಂತರದ ವಾರ ಪರಿಸ್ಥಿತಿ ಅವಲೋಕಿಸಿ ಭಕ್ತರ ಸಂಖ್ಯೆ ಹೆಚ್ಚಿಸುವ ಕುರಿತು ನಿರ್ಧರಿಸಲಾಗುವುದು. ಆನ್‌ಲೈನ್‌ ಮೂಲಕ ನೋಂದಣಿ ಮಾಡಿದ ಭಕ್ತರಿಗಷ್ಟೇ ಭೇಟಿಗೆ ಅವಕಾಶವಿದೆ. ಕೌಂಟರ್ ಬಳಿ ಗೊಂದಲ ತಪ್ಪಿಸುವುದು ಇದರ ಉದ್ದೇಶ’ ಎಂದು ಹೇಳಿದರು.

ಯಾತ್ರಿಗಳು ತಮ್ಮ ಮೊಬೈಲ್ ಫೋನ್ ಗಳಲ್ಲಿ ಆರೋಗ್ಯ ಸೇತು ಅಪ್ಲಿಕೇಷನ್ ಅಳವಡಿಸಿಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯ. ಅಲ್ಲದೆ, ಪ್ರವೇಶದ ವೇಳೆ ಥರ್ಮಲ್ ಸ್ಕ್ಯಾನಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಅವರು ವಿವರಿಸಿದರು.

10 ವರ್ಷ ಕೆಳಗಿನ ಮಕ್ಕಳು, ಗರ್ಭಿಣಿಯರು, 60 ವರ್ಷ ಮೀರಿದವರು, ಅನಾರೋಗ್ಯದಿಂದ ಬಳಲುತ್ತಿರುವವರು ಭೇಟಿಯಿಂದ ದೂರ ಉಳಿಯಲು ಮನವಿ ಮಾಡಲಾಗಿದೆ. ಈ ವರ್ಗದ ಭಕ್ತರು ಪರಿಸ್ಥಿತಿ ಸುಧಾರಿಸಿದ ಬಳಿಕ ಭೇಟಿ ನೀಡಬಹುದು ಎಂದು ತಿಳಿಸಿದರು.

ಕಾತ್ರಾದಿಂದ ಭವನ್ ವರೆಗೂ ಬಂಗಾಂಗ, ಅಧ್ ಕುವರಿ, ಸಂಜಿಛಾತ್ ಮಾರ್ಗವಾಗಿ ಬೆಟ್ಟ ತಲುಪಲು ಹಾಗೂ ಹಿಮಕೋಟಿ ಮಾರ್ಗ-ತಾರಾಕೋಟೆ ಮಾರ್ಗವಾಗಿ ಹಿಂದಿರುಗಲು ಮಾರ್ಗ ನಿಗದಿಪಡಿಸಲಾಗಿದೆ.

ಹೊರಗಿನಿಂದ ಭೇಟಿ ನೀಡುವ ಭಕ್ತರು ಹಾಗೂ ಜಮ್ಮು ಮತ್ತು ಕಾಶ್ಮೀರದ ರೆಡ್ ಝೋನ್ ವಲಯದಿಂದ ಬರುವ ಭಕ್ತರಿಂದ ಕೋವಿಡ್ ನೆಗೆಟಿವ್ ವರದಿಯನ್ನು ದರ್ಶನ್ ದಿಯೋದಿ ಬಳಿಯ ಚೆಕ್ ಪಾಯಿಂಟ್ ಹತ್ತಿರ ಪರಿಶೀಲಿಸಲಾಗುತ್ತದೆ ಎಂದು ಹೇಳಿದರು.

ನೆಗೆಟಿವ ವರದಿ ಇದ್ದವರಿಗಷ್ಟೇ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಲಗೇಜ್ ಕೊಠಡಿ ತೆರೆದಿರಲಿದೆ. ಆದರೆ, ಹೊದಿಕೆ ಸ್ಟೋರ್ ಗಳು ಮುಚ್ಚಿರುತ್ತವೆ. 15 ದಿನಗಳಿಗೊಮ್ಮೆ ಈ ಎಲ್ಲ ನಿಯಮಗಳ ಪರಿಶೀಲನೆ ನಡೆಯಲಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT