ಸೋಮವಾರ, ಜನವರಿ 18, 2021
15 °C
ಆರ್‌ಟಿಐ ಮಾಹಿತಿಯಿಂದ ಬಹಿರಂಗ; ವಸೂಲಿಗೆ ಆಮೆ ವೇಗ

ಪಿಎಂ ಕಿಸಾನ್: ‘ಅನರ್ಹ’ರಿಗೆ ಹೆಚ್ಚು ಹಣ ಪಾವತಿ

ಶೆಮಿನ್ ಜಾಯ್ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಯೋಜನೆಗೆ ಅರ್ಹತೆ ಇಲ್ಲದಿದ್ದರೂ ಸಹ ರೈತರು ಯೋಜನೆಯ ಹೆಚ್ಚು ಹಣವನ್ನು ತಮ್ಮ ಜೇಬಿಗಿಳಿಸಿದ್ದಾರೆ ಎಂದು ಆರ್‌ಟಿಐ ದಾಖಲೆಗಳಿಂದ ಬಹಿರಂಗವಾಗಿದೆ. ಈ ರೀತಿ ಮಾಡಿದ ಅಗ್ರ ಐದು ರಾಜ್ಯಗಳಲ್ಲಿ ಪಂಜಾಬ್, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಮತ್ತು ಕರ್ನಾಟಕದ ರೈತರು ಇದ್ದಾರೆ.

2020 ಜುಲೈ 31ರವರೆಗೆ ಈ ಯೋಜನೆಗೆ ಅರ್ಹತೆ ಇಲ್ಲದ 20.48 ಲಕ್ಷ ರೈತರಿಗೆ ₹1,364.13 ಕೋಟಿ ಹಣವನ್ನು ಸರ್ಕಾರ ವಿತರಿಸಿದೆ. ಈ ಪೈಕಿ ಶೇ 67.92ರಷ್ಟು ಅಥವಾ ₹926.56 ಕೋಟಿ ಹಣವನ್ನು ಈ ಐದು ರಾಜ್ಯಗಳ ಅನರ್ಹ ರೈತರಿಗೆ ಹಂಚಿಕೆ ಮಾಡಲಾಗಿದೆ. ಆರ್‌ಟಿಐ ಕಾರ್ಯಕರ್ತ ವೆಂಕಟೇಶ್ ನಾಯಕ್ ಅವರು ಸಲ್ಲಿಸಿದ ಆರ್‌ಟಿಐ ಅರ್ಜಿಗೆ ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆ ಈ ಪ್ರತಿಕ್ರಿಯೆ ನೀಡಿದೆ.

ಪ್ರಮಾಣವನ್ನು ಪರಿಗಣಿಸುವುದಾದರೆ, ಪಿಎಂ ಕಿಸಾನ್ ಯೋಜನೆಗೆ ಪಂಜಾಬ್‌ನಲ್ಲಿ ನೋಂದಾಯಿಸಿಕೊಂಡ ರೈತರಲ್ಲಿ ಶೇ 19.98ರಷ್ಟು ಅಥವಾ ಪ್ರತಿ ಐವರು ರೈತರಲ್ಲಿ ಒಬ್ಬರು ಅನರ್ಹರು. ‌ಮಹಾರಾಷ್ಟ್ರದಲ್ಲಿ ಶೇ 2.53, ಗುಜರಾತ್‌ನಲ್ಲಿ ಶೇ 2.66, ಉತ್ತರ ಪ್ರದೇಶದಲ್ಲಿ ಶೇ ಶೇ 0.6 ಮತ್ತು ಕರ್ನಾಟಕದಲ್ಲಿ ಶೇ 1.53ರಷ್ಟು ರೈತರು ಯೋಜನೆಗೆ ಅರ್ಹತೆ ಪಡೆದಿಲ್ಲ.

ಅನರ್ಹ ಫಲಾನುಭವಿಗಳ ಸಂಖ್ಯೆ ಸಿಕ್ಕಿಂನಲ್ಲಿ ಅತಿಕಡಿಮೆ ಇದೆ. ಇಲ್ಲಿ ಒಬ್ಬ ಫಲಾನುಭವಿ ಐದು ಕಂತುಗಳಲ್ಲಿ ₹10,000 ಹಣ ಪಡೆದಿದ್ದಾರೆ. ಉಳಿದಂತೆ ಮೇಘಾಲಯದಲ್ಲಿ 21, ಅರುಣಾಚಲ ಪ್ರದೇಶದಲ್ಲಿ 70, ನಾಗಾಲ್ಯಾಂಡ್‌ನಲ್ಲಿ 89 ಅನರ್ಹರು ಯೋಜನೆಯ ಲಾಭ ಪಡೆದಿದ್ದಾರೆ.

ರೈತರಿಗೆ ಮೂರು ಕಂತುಗಳಲ್ಲಿ ವರ್ಷಕ್ಕೆ ₹6,000 ನೀಡುವ ಯೋಜನೆಯನ್ನು 2019ರ ಫೆಬ್ರವರಿಯಲ್ಲಿ ಪ್ರಾರಂಭಿಸಲಾಗಿತ್ತು. ಯೋಜನೆಯ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಆದಾಯ ತೆರಿಗೆ ಪಾವತಿಸುವವರು, ವೃತ್ತಿಪರರು, ಮಾಜಿ ಮತ್ತು ಹಾಲಿ ಸಚಿವರು, ಸಂಸದರು ಮತ್ತು ಶಾಸಕರು, ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು, ಹಾಲಿ ಮತ್ತು ನಿವೃತ್ತ ಅಧಿಕಾರಿಗಳು ಮತ್ತು ₹10,000 ಗಿಂತ ಹೆಚ್ಚಿನ ಪಿಂಚಣಿ ಪಡೆಯುವ ಎಲ್ಲರನ್ನೂ ಯೋಜನೆಯಿಂದ ಹೊರಗಿಡಲಾಗಿದೆ. 

ಯೋಜನೆಗೆ ನೊಂದಣಿ ಮಾಡಿಕೊಳ್ಳಲು ಡಿಜಿಟಲ್ ಸೌಲಭ್ಯ ಇದ್ದರೂ, 20 ಲಕ್ಷಕ್ಕೂ ಹೆಚ್ಚು ಅನರ್ಹ ವ್ಯಕ್ತಿಗಳನ್ನು ಈ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ನಾಯಕ್ ಹೇಳಿದ್ದಾರೆ. ಕೆಲವು ನಿದರ್ಶನಗಳಲ್ಲಿ ಹೊರಗಿಡುವ ಮಾನದಂಡ ತಿಳಿಯುವ ಮುನ್ನವೇ ಕೆಲವರಿಗೆ ಎಲ್ಲ ಕಂತುಗಳನ್ನು ಪಾವತಿಸಲಾಗಿದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಮಾನದಂಡಕ್ಕೆ ಅನುಸಾರವಾಗಿಲ್ಲ ಎಂದು ತಿಳಿದಿದ್ದರೂ ಒಂದೆರೆಡು ಕಂತುಗಳನ್ನು ಪಾವತಿಸಿಲಾಗಿದೆ ಎಂದು ಅವರು ಹೇಳಿದರು.

ಅನರ್ಹರರಿಂದ ಹಣವನ್ನು ವಾಪಸ್ ಪಡೆಯುವ ಬಗ್ಗೆ ವರದಿಗಳಿದ್ದರೂ, ಅದು ಕಷ್ಟ ಎಂದು ನಾಯಕ್ ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ರಾಷ್ಟ್ರವ್ಯಾಪಿ ವಿಧಿಸಲಾದ ಲಾಕ್‌ಡೌನ್‌ನಿಂದಾಗಿ ಕೃಷಿಕ ಸಮುದಾಯದ ಸದಸ್ಯರು ಅನುಭವಿಸಿದ ಆರ್ಥಿಕ ತೊಂದರೆಯು ಈ ಕಾರ್ಯಕ್ಕೆ ಇನ್ನಷ್ಟು ಹಿನ್ನಡೆ ಉಂಟುಮಾಡಿದೆ. ಅನರ್ಹರಿಂದ ಹಣ ವಾಪಸ್ ಪಡೆಯುವ ಡಾಟಾಬೇಸ್‌ ಸಿದ್ಧಪಡಿಸಲು ಅಧಿಕಾರಿಗಳಿಗೆ ಇನ್ನೂ ಸಾಧ್ಯವಾಗಿಲ್ಲ ಎಂಬುದು ಆಂತರಿಕ ಪತ್ರವ್ಯವಹಾರಗಳನ್ನು ಗಮನಿಸಿದಾಗ ತಿಳಿದುಬಂದಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು