ಬುಧವಾರ, ಆಗಸ್ಟ್ 17, 2022
23 °C

ಆರು ವರ್ಷದ ಮಗನಿಂದ ದೂರವಿದ್ದು ಕೋವಿಡ್‌ನಿಂದ ಗುಣಮುಖ: ದಂಪತಿಗೆ ಪ್ರಧಾನಿ ಶ್ಲಾಘನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್-19 ಸೋಂಕು ತಗುಲಿರುವುದು ಪತ್ತೆಯಾದ ಬಳಿಕ ಮಗನಿಂದ ತನ್ನನ್ನು ಪ್ರತ್ಯೇಕಿಸಿಕೊಂಡ ಆರು ವರ್ಷದ ಬಾಲಕನ ತಾಯಿಯ ಧೈರ್ಯ ಮತ್ತು ಸಕಾರಾತ್ಮಕ ಚಿಂತನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಗಾಜಿಯಾಬಾದ್‌ನ ಸೆಕ್ಟರ್ 6ರ ನಿವಾಸಿಯಾಗಿರುವ ಪೂಜಾ ವರ್ಮಾ ಮತ್ತು ಪತಿ ಗಗನ್ ಕೌಶಿಕ್ ಅವರಿಗೆ ಕೋವಿಡ್-19 ಸೋಂಕು ತಗುಲಿತ್ತು.

ಪೂಜಾ ವರ್ಮಾ, ಅವರ ಪತಿ ಮತ್ತು ಆರು ವರ್ಷದ ಮಗ ಮೂರು ಕೋಣೆಗಳುಳ್ಳ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಆದರೆ ಏಪ್ರಿಲ್‌ನಲ್ಲಿ ದಂಪತಿಗಳಿಬ್ಬರಿಗೂ ಕೋವಿಡ್-19 ಸೋಂಕು ತಗುಲಿದ ನಂತರ ಕಠಿಣ ನಿರ್ಧಾರವನ್ನು ತೆಗೆದುಕೊಂಡರು ಮತ್ತು ಮೂವರೂ ಪ್ರತ್ಯೇಕ ಕೋಣೆಗಳಲ್ಲಿ ಐಸೋಲೇಟ್ ಆಗಬೇಕೆಂದು ನಿರ್ಧರಿಸಿದರು.

'ಕೊರೊನಾ ವೈರಸ್ ಎಂದರೇನು ಅಥವಾ ಕೋವಿಡ್ ಸಂಬಂಧಿತ ನಿಯಮಗಳ ಅರ್ಥವೇನು ಮತ್ತು ಈ ಐಸೋಲೇಟ್ ಆಗುವ ಅವಶ್ಯಕತೆ ಏನೆಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ವಯಸ್ಸಿನಲ್ಲಿ ತನ್ನ ಹೆತ್ತವರ ಪ್ರೀತಿಗಾಗಿ ಹಾತೊರೆಯುತ್ತಿದ್ದ ಆರು ವರ್ಷದ ಮಗುವಿಗೆ ಇದು ಸುಲಭವಾಗಿರಲಿಲ್ಲ ಎಂದು ವರ್ಮಾ ಹೇಳಿದರು.

ಹೆತ್ತವರಿಂದ ದೂರವಾಗಿ ಪ್ರತ್ಯೇಕವಾದ ಕೋಣೆಯಲ್ಲಿ ಇರಲು ತಾನೇನು ತಪ್ಪು ಮಾಡಿದ್ದೇನೆ ಎಂದು ಆತ ಆಶ್ಚರ್ಯ ಪಡುತ್ತಿದ್ದ ಎಂದು ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ, ತನ್ನ ಮಗುವಿನಿಂದ ದೂರವಿರಬೇಕಾದ ಸಮಯ ಹೇಗಿತ್ತು ಎಂಬುದನ್ನು ಕವಿತೆಯ ಮೂಲಕ ವಿವರಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರಧಾನಿ ಮೋದಿ ಅವರು ಪತ್ರ ಬರೆದಿದ್ದು, ಕುಟುಂಬದ ಯೋಗಕ್ಷೇಮ ವಿಚಾರಿಸಿದ್ದಾರೆ. 'ಕಷ್ಟದ ಸಂದರ್ಭದಲ್ಲಿಯೂ ಕೂಡ ನೀವು ಮತ್ತು ನಿಮ್ಮ ಕುಟುಂಬ ಧೈರ್ಯದಿಂದ ಕೋವಿಡ್ ನಿಯಮಗಳನ್ನು ಅನುಸರಿಸುವ ಮೂಲಕ ಈ ರೋಗದ ವಿರುದ್ಧ ಹೋರಾಡಿದ್ದಕ್ಕೆ ನನಗೆ ಸಂತೋಷವಾಗಿದೆ' ಎಂದು ಹೇಳಿದ್ದಾರೆ.

ಕಷ್ಟದ ಪರಿಸ್ಥಿತಿಯಲ್ಲಿ ತಾಳ್ಮೆ ಕಳೆದುಕೊಳ್ಳದಂತೆ ಮತ್ತು ಧೈರ್ಯವನ್ನು ಕಾಪಾಡಿಕೊಳ್ಳಲು ಶಾಸ್ತ್ರಗಳು ಕೂಡ ನಮಗೆ ಕಲಿಸಿವೆ ಎಂದ ಅವರು, ಮಹಿಳೆಯ ಕವಿತೆಯನ್ನು ಶ್ಲಾಘಿಸಿದ ಪ್ರಧಾನಿ, ತಾಯಿಯು ತನ್ನ ಮಗುವಿನಿಂದ ದೂರವಿರುವಾಗ ಉಂಟಾಗುವ ಆತಂಕವು ವ್ಯಕ್ತವಾಗಿದೆ ಎಂದಿದ್ದಾರೆ.

ಪೂಜಾ ವರ್ಮಾ ಅವರು, ತಮ್ಮ ಧೈರ್ಯ ಮತ್ತು ಸಕಾರಾತ್ಮಕ ಚಿಂತನೆಯಿಂದ ಮುನ್ನಡೆಯುತ್ತಾರೆ ಮತ್ತು ಜೀವನದಲ್ಲಿ ಬರುವ ಯಾವುದೇ ಸವಾಲನ್ನು ಕೂಡ ಯಶಸ್ವಿಯಾಗಿ ಎದುರಿಸುತ್ತಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಂಪತಿಗಳೊಂದಿಗೆ ಸಂಪರ್ಕ ಮಾಡದಿದ್ದರಿಂದಾಗಿ ಪುತ್ರನಿಗೆ ಕೋವಿಡ್ ಸೋಂಕು ತಗುಲಿಲ್ಲ. ಸದ್ಯ ತಾನು ಮತ್ತು ಹೆಂಡತಿ ಸಂಪೂರ್ಣವಾಗಿ ಗುಣಮುಖರಾಗಿರುವುದಾಗಿ ಕೌಶಿಕ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು