ಮಂಗಳವಾರ, ಡಿಸೆಂಬರ್ 7, 2021
23 °C

ಶೇ 21ರಷ್ಟು ಜನರಿಗಷ್ಟೇ ಲಸಿಕೆ, ದಾರಿ ತಪ್ಪಿಸುತ್ತಿರುವ ಪ್ರಧಾನಿ: ಕಾಂಗ್ರೆಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ದೆಹಲಿ:  ದೇಶದ ಒಟ್ಟು ಜನಸಂಖ್ಯೆಯ ಶೇ 21ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಿದ್ದರೂ, ಪ್ರಧಾನಿ ನರೇಂದ್ರ ಮೋದಿ ಲಸಿಕೆ ವಿಚಾರದಲ್ಲಿ ದೇಶದ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.

ಸರ್ಕಾರವು ವರ್ಷಾಂತ್ಯದ ವೇಳೆಗೆ ಎಲ್ಲಾ ವಯಸ್ಕರಿಗೆ ಲಸಿಕೆ ಹಾಕಲು ಏನು ಮಾಡಲಿದೆ ಎಂಬುದರ ಕುರಿತು ಶ್ವೇತಪತ್ರವನ್ನು ಹೊರತರಲು ವಿರೋಧ ಪಕ್ಷ ಕಾಂಗ್ರೆಸ್‌, ಪ್ರಧಾನ ಮಂತ್ರಿಯವರನ್ನು ಒತ್ತಾಯಿಸಿದೆ.  

‘ಪ್ರಧಾನಿಯವರು ಶುಕ್ರವಾರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದರು. ಆದರೆ, ದೇಶ ಎದುರಿಸುತ್ತಿರುವ ಹಣದುಬ್ಬರ ಮತ್ತು ಭಯೋತ್ಪಾದನೆಯ ವಿಚಾರವನ್ನು ಪ್ರಸ್ತಾಪಿಸಲಿಲ್ಲ’ ಎಂದು ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್ ಅವರು ಆರೋಪಿಸಿದರು.

‘ಕೊರೊನಾ ವೈರಸ್‌ನಿಂದಾಗಿ ಪ್ರಾಣ ಕಳೆದುಕೊಂಡ 4.53 ಲಕ್ಷ ಮಂದಿಯ ಕುಟುಂಬಗಳಿಗೆ ಸಾಂತ್ವನ ಹೇಳಲೊಲ್ಲದ ಪ್ರಧಾನಿ, ಸಂಭ್ರಮಾಚರಣೆ ಮಾಡುತ್ತಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. 

‘ರಾಷ್ಟ್ರವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಧಾನಮಂತ್ರಿ ಮಾತನಾಡಬೇಕು, ಬದಲಾಗಿ ಅವರು 'ಉತ್ಸವ' ಆಚರಿಸುತ್ತಿದ್ದಾರೆ. ವಿಷಯಗಳನ್ನು ಪ್ರಧಾನಿ ತಪ್ಪಾಗಿ ಬಿಂಬಿಸುತ್ತಾರೆ. ತಪ್ಪು ಮಾಹಿತಿಗಳನ್ನು ಹರಡುತ್ತಾರೆ,‘ ಎಂದು ಗೌರವ್ ವಲ್ಲಭ್ ಸುದ್ದಿಗಾರರಿಗೆ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಅರೆಬೆಂದ ಮಾಹಿತಿಗಳನ್ನು ನೀಡುತ್ತಿದ್ದಾರೆ. ಅದು ಅಪಾಯಕಾರಿಯೂ ಹೌದು ಎಂದು ಅವರು ಹೇಳಿದ್ದಾರೆ. 

‘ಜಗತ್ತಿನಲ್ಲಿ 50 ಕೋಟಿ ಮೀರಿದ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಗಳು ಎರಡೇ. 100 ಕೋಟಿಗೂ ಹೆಚ್ಚು ಲಸಿಕೆಗಳನ್ನು ಸಾಧಿಸಿದ ಮೊದಲ ದೇಶ ಭಾರತ ಎಂಬ ಹೇಳಿಕೆ ಸುಳ್ಳು.  ಚೀನಾ ಸೆಪ್ಟೆಂಬರ್‌ನಲ್ಲಿ 216 ಕೋಟಿ ಡೋಸೇಜ್‌ಗಳನ್ನು ನೀಡಿದೆ,‘ ಎಂದು ಅವರು ಹೇಳಿದರು. 

‘ಚೀನಾ ತನ್ನ ಒಟ್ಟಾರೆ ಜನಸಂಖ್ಯೆಯ ಶೇ 80 ರಷ್ಟು ಜನರಿಗೆ ಲಸಿಕೆ ನೀಡಿರುವುದಾಗಿ ಹೇಳಿದೆ. ಆದರೆ, ಭಾರತ ಕೇವಲ ಶೇ 20ಜನರಿಗಷ್ಟೇ ಲಸಿಕೆ ಹಾಕಿದೆ‘ ಎಂದು ಗೌರವ್ ವಲ್ಲಭ್ ಬೇಸರ ವ್ಯಕ್ತಪಡಿಸಿದ್ದಾರೆ.  

ಭಾರತವು ಗುರುವಾರ (ಅ. 21)ದ ಹೊತ್ತಿಗೆ 100 ಕೋಟಿ ಡೋಸ್‌ ಲಸಿಕೆಗಳನ್ನು ನೀಡಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು