ಮಂಗಳವಾರ, ಫೆಬ್ರವರಿ 7, 2023
26 °C

ಚಳಿಗಾಲದ ಅಧಿವೇಶನ ಫಲಪ್ರದಗೊಳಿಸಿ: ಸರ್ವ ಪಕ್ಷಗಳ ನಾಯಕರಿಗೆ ಮೋದಿ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಫಲಪ್ರದಗೊಳಿಸಲು ಸಾಮೂಹಿಕ ಪ್ರಯತ್ನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸರ್ವ ಪಕ್ಷಗಳ ನಾಯಕರಿಗೆ ಕರೆ ನೀಡಿದರು.

ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಸತ್ತಿನಲ್ಲಿ ಪದೇ ಪದೇ ಅಡೆತಡೆ ಉಂಟು ಮಾಡುವುದರಿಂದ ಮತ್ತು ಕಲಾಪ ಮುಂದೂಡುವುದರಿಂದ ಮಾತನಾಡಲು ಅವಕಾಶ ಸಿಗುತ್ತಿಲ್ಲ ಎಂದು ಯುವ ಸಂಸದರು ಹೇಳಿದ್ದಾರೆ. ಹಾಗಾಗಿ ಎಲ್ಲ ಪಕ್ಷಗಳ ನಾಯಕರಿಗೆ ಈ ಮನವಿ ಮಾಡುತ್ತಿರುವುದಾಗಿ ಅವರು ಹೇಳಿದರು.

ಸಂಸತ್ತು ಪ್ರಜಾಪ್ರಭುತ್ವದ ದೊಡ್ಡ ವಿಶ್ವವಿದ್ಯಾಲಯವಾಗಿದೆ ಎಂದು ಯುವ ಸಂಸದರು ಹೇಳುತ್ತಾರೆ. ಆದರೆ, ಕಲಾಪಕ್ಕೆ ಅಡ್ಡಿಪಡಿಸುವುದರಿಂದ ಮತ್ತು ಚರ್ಚೆಗಳು ಸರಿಯಾಗಿ ನಡೆಯದ ಕಾರಣ ಕಲಿಕೆ ಮತ್ತು ಹೊಸ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಯುವ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.

ಯುವ ಸಂಸದರು ತಮಗೆ ಅವಕಾಶಗಳು ಸಿಗುತ್ತಿಲ್ಲ ಎಂದು ಹೇಳುತ್ತಾರೆ. ಇದು ಎಲ್ಲಾ ಪಕ್ಷಗಳ ಯುವ ಸಂಸದರ ಧ್ವನಿಯಾಗಿದೆ ಎಂದರು. ಹೀಗಾಗಿ, ಉಭಯ ಸದನಗಳ ಕಲಾಪ ನಡೆಯುವುದು ಬಹಳ ಮುಖ್ಯ ಎಂದು ಅವರು ಪ್ರತಿಪಾದಿಸಿದರು.

ಭಾರತ ಜಿ–20 ಗುಂಪಿನ ಅಧ್ಯಕ್ಷತೆ ವಹಿಸಿಕೊಂಡಿರುವ ಬಗ್ಗೆ ಇತ್ತೀಚೆಗೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ವಿವಿಧ ಪಕ್ಷಗಳ ನಾಯಕರೊಂದಿಗೆ ಸೌಹಾರ್ದಯುತವಾಗಿ ಚರ್ಚಿಸಿರುವುದಾಗಿ ಅವರು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಮುಂದಿನ ವರ್ಷ ನಡೆಯಲಿರುವ ಜಿ–20 ಶೃಂಗಸಭೆಯ ಆತಿಥ್ಯವನ್ನು ಭಾರತ ವಹಿಸಿರುವುದು ಕೇವಲ ರಾಜತಾಂತ್ರಿಕ ಕಾರ್ಯಕ್ರಮವಲ್ಲ. ದೇಶದ ಸಾಮರ್ಥ್ಯವನ್ನು ಸಮಗ್ರ ರೀತಿಯಲ್ಲಿ ವಿಶ್ವದ ಮುಂದೆ ಪ್ರದರ್ಶಿಸುವ ಅವಕಾಶವಾಗಿದೆ ಎಂದು ಪ್ರಧಾನಿ ಹೇಳಿದರು.

‘ಭಾರತವು ದೊಡ್ಡ ದೇಶವಾಗಿದೆ ಮತ್ತು ಪ್ರಜಾಪ್ರಭುತ್ವದ ತಾಯಿಯಾಗಿದೆ. ಸಾಕಷ್ಟು ವೈವಿಧ್ಯತೆ ಮತ್ತು ಸಾಮರ್ಥ್ಯಗಳನ್ನು ಹೊಂದಿದೆ. ಆದ್ದರಿಂದ, ವಿಶ್ವಕ್ಕೆ ಭಾರತವನ್ನು ತಿಳಿದುಕೊಳ್ಳಲು ಮತ್ತು ಇಡೀ ವಿಶ್ವಕ್ಕೆ ತನ್ನ ಸಾಮರ್ಥ್ಯವನ್ನು ತೋರಿಸಲು ಭಾರತಕ್ಕೆ ಇದು ಒಂದು ದೊಡ್ಡ ಅವಕಾಶವಾಗಿದೆ’ ಎಂದು ಅವರು ಹೇಳಿದರು.

ಪ್ರಸ್ತುತ ಜಾಗತಿಕ ಪರಿಸ್ಥಿತಿಯ ನಡುವೆ ದೇಶವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಧಿವೇಶನದಲ್ಲಿ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು