ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣದಲ್ಲಿ ಯೋಗಿಗೆ ಪ್ರಧಾನಿ ಮೋದಿ ಶ್ಲಾಘನೆ; ಕೆಸಿಆರ್‌ ಮೂಢನಂಬಿಕೆಗೆ ಟೀಕೆ

ಅಕ್ಷರ ಗಾತ್ರ

ಹೈದರಾಬಾದ್‌: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ ತೆಲಂಗಾಣ ಮುಖ್ಯಮಂತ್ರಿ, ಟಿಆರ್‌ಎಸ್‌ ಮುಖಸ್ಥ ಕೆ.ಚಂದ್ರಶೇಖರ್‌ ರಾವ್‌ (ಕೆಸಿಆರ್‌) ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

'ಮೂಢನಂಬಿಕೆಯನ್ನು ಪ್ರೋತ್ಸಾಹಿಸುತ್ತಿರುವ ಜನರಿಂದ ನಾವು ತೆಲಂಗಾಣವನ್ನು ಕಾಪಾಡಿಕೊಳ್ಳಬೇಕು' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮೂಢನಂಬಿಕೆ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಕೆಎಸ್‌ಆರ್‌ ವಿರುದ್ಧ ಹರಿಹಾಯ್ದಿದ್ದಾರೆ. 'ತೆಲಂಗಾಣದ ಈ ನೆಲದಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್‌ ಅವರಿಗೆ ಅಭಿನಂದಿಸುತ್ತಿದ್ದೇನೆ. ಒಂದು ಜಾಗಕ್ಕೆ ಹೋಗದಂತೆ ಯಾರೋ ಒಬ್ಬರು ಅವರಿಗೆ ಹೇಳಿದ್ದರು. ಆದರೆ, ವಿಜ್ಞಾನದಲ್ಲಿ ನಂಬಿಕೆ ಇರುವುದಾಗಿ ಹೇಳಿದ ಯೋಗಿ ಅವರು ಅಲ್ಲಿಗೆ ತೆರಳಿದ್ದರು. ಈಗ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದಾರೆ' ಎಂದಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯ ಸಮಯದಲ್ಲಿ ಮುಖ್ಯಮಂತ್ರಿ ನೋಯ್ಡಾಗೆ ಭೇಟಿ ನೀಡಿದರೆ ಸೋಲು ಕಾಣುವುದು ಖಚಿತ ಎಂಬ ಮೂಢನಂಬಿಕೆಯ ವಿಚಾರದ ಹಿನ್ನೆಲೆಯಲ್ಲಿ ಪ್ರಧಾನಿ ಅವರು ಯೋಗಿ ಆದಿತ್ಯನಾಥ್‌ ಅವರ ಬಗ್ಗೆ ಉಲ್ಲೇಖಿಸಿದ್ದಾರೆ. ಆ 'ಮೌಢ್ಯವನ್ನು' ಯೋಗಿ ಆದಿತ್ಯನಾಥ್‌ ತೊಡೆದು ಹಾಕಿದ್ದಾರೆ. ಅಧಿಕಾರ ಕಳೆದುಕೊಳ್ಳುವ ಭಯದಿಂದ ಈ ಹಿಂದೆ ಹಲವು ಮುಖಂಡರು ನೋಯ್ಡಾ ಭೇಟಿಯಿಂದ ಹಿಂದೆ ಸರಿದಿದ್ದರು.

ವಾಸ್ತು ದೋಷದ ಕಾರಣಗಳಿಂದಾಗಿಯೇ ಕೆಸಿಆರ್‌ ಅವರು 2016ರಲ್ಲಿ ಹೊಸ ಮನೆಗೆ ಸ್ಥಳಾಂತರವಾಗಿದ್ದರ ಬಗ್ಗೆ ವರದಿಯಾಗಿತ್ತು.

ಕೆಸಿಆರ್‌ ಸರ್ಕಾರದ 'ಪರಿವಾರವಾದದ' (ವಂಶಪಾರಂಪರಿಕ ರಾಜಕಾರಣ) ಬಗ್ಗೆ ಪ್ರಧಾನಿ ಟೀಕಿಸಿದ್ದಾರೆ. ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ರಾಜ್ಯವನ್ನು ತಂತ್ರಜ್ಞಾನ ಕೇಂದ್ರವಾಗಿ ರೂಪಿಸಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತೆಲಂಗಾಣಕ್ಕೆ ಭೇಟಿ ನೀಡುವ ವೇಳೆಗೆ ಮುಖ್ಯಮಂತ್ರಿ ಕೆಸಿಆರ್‌ ಬೆಂಗಳೂರಿಗೆ ತೆರಳಿದರು. ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

ಕಳೆದ ನಾಲ್ಕು ತಿಂಗಳಲ್ಲಿ ಎರಡನೇ ಬಾರಿಗೆ ಕೆಸಿಆರ್‌ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯನ್ನು ತಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT