ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ–20 | ಇದು ಯುದ್ಧದ ಯುಗವಲ್ಲ –‘ಬಾಲಿ ಘೋಷಣೆ’ಯಲ್ಲಿ ಮೋದಿ ಹೇಳಿಕೆ ಪ್ರತಿಧ್ವನಿ

Last Updated 16 ನವೆಂಬರ್ 2022, 22:05 IST
ಅಕ್ಷರ ಗಾತ್ರ

ನವದೆಹಲಿ: ‘ಇದು ಯುದ್ಧದ ಯುಗವಲ್ಲ’ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಹೇಳಿದ್ದ ಮಾತುಇಂಡೊನೇಷ್ಯಾದ ಬಾಲಿಯಲ್ಲಿ ಬುಧವಾರ ಮುಕ್ತಾಯವಾದ 17ನೇ ಜಿ–20 ಶೃಂಗಸಭೆಯಲ್ಲಿ ಕೈಗೊಂಡ ‘ಬಾಲಿ ಘೋಷಣೆ’ಯಲ್ಲಿ ಪ್ರತಿಧ್ವನಿಸಿತು.

‘ಇಂದಿನ ಯುಗವು ಯುದ್ಧದಿಂದ ಕೂಡಿರಬಾರದು’ ಎಂದು ಜಿ–20 ನಾಯಕರು ಜಂಟಿ ನಿರ್ಣಯದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದೇ ಸೆಪ್ಟೆಂಬರ್‌ 16ರಂದು ಉಜ್ಬೇಕಿಸ್ತಾನದ ಸಮರ್‌ಖಂಡ್‌ನಲ್ಲಿ ನಡೆದಿದ್ದ ಶಾಂಘೈ ಸಹಕಾರ ಸಂಘ ಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಪುಟಿನ್ ಜೊತೆಗಿನ ದ್ವಿಪಕ್ಷೀಯ ಮಾತುಕತೆಯ ವೇಳೆ ಪ್ರಧಾನಿ ಮೋದಿ ತಳೆದಿದ್ದ ನಿಲುವನ್ನೇ ಬಾಲಿ ಘೋಷಣೆ ಪ್ರತಿಧ್ವನಿಸಿದೆ. ಆದರೆ ಅದಕ್ಕೂ ಮುನ್ನ ಸದಸ್ಯ ರಾಷ್ಟ್ರಗಳು ಯುದ್ಧ ಮತ್ತು ನಿರ್ಬಂಧಗಳ ಮಧ್ಯೆ ಭಿನ್ನ ನಿಲುವು ವ್ಯಕ್ತಪಡಿಸಿದ್ದವು.

ರಷ್ಯಾ–ಉಕ್ರೇನ್‌ ಯುದ್ಧ ಕುರಿತು ತೀವ್ರ ಸಮಾಲೋಚನೆಯ ಬಳಿಕ ಸದಸ್ಯ ದೇಶಗಳು ಬಾಲಿ ಘೋಷಣೆಯನ್ನು ಅಳವಡಿಸಿಕೊಳ್ಳುವ ನಿರ್ಧಾರಕ್ಕೆ ಬಂದವು. ಉಕ್ರೇನ್ ಮೇಲೆ ರಷ್ಯಾ ಸಾರಿರುವ ಸೇನಾ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಲು ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳು ಒಲವು ವ್ಯಕ್ತಪಡಿಸಿದವು. ಆದರೆ ಇದಕ್ಕೆ ರಷ್ಯಾ ತೀವ್ರವಾಗಿ ವಿರೋಧಿಸಿತು. ಸಂಘಟನೆಯ ಪ್ರಾಥಮಿಕ ಉದ್ದೇಶ ಅಂತರರಾಷ್ಟ್ರೀಯ ಆರ್ಥಿಕ ಸಹಕಾರ ಆಗಿದ್ದು, ಅದನ್ನು ಶಾಂತಿ ಮತ್ತು ಭದ್ರತೆ ವಿಚಾರಕ್ಕೆ ಬದಲಿಸುವ ನಿಲುವನ್ನು ರಷ್ಯಾ ವಿರೋಧಿಸಿತು.

ಆದರೆ ರಷ್ಯಾದ ವಾದವನ್ನು ಪ್ರಧಾನಿ ಮೋದಿ ಅವರು ತಿರಸ್ಕರಿಸಿದರು. ‘ಶಾಂತಿ ಮತ್ತು ಭದ್ರತೆ ಸಾಧ್ಯವಾಗ ದಿದ್ದರೆ ನಮ್ಮ ಮುಂದಿನ ಜನಾಂಗವು ಆರ್ಥಿಕ ಪ್ರಗತಿ ಮತ್ತು ತಂತ್ರಜ್ಞಾನದ ಅನುಕೂಲ ಪಡೆಯಲು ಸಾಧ್ಯವಾಗು ವುದಿಲ್ಲ. ಜಿ–20 ಶೃಂಗಸಭೆಯು ಶಾಂತಿ ಮತ್ತು ಸಾಮರಸ್ಯದ ಪ್ರಬಲ ಸಂದೇಶವನ್ನು ಸಾರಲು ಬಯಸುತ್ತದೆ’ ಎಂದು ಪ್ರಧಾನಿ ಹೇಳಿದರು.

ರಷ್ಯಾ–ಉಕ್ರೇನ್ ಯುದ್ಧದ ವಿಚಾರದಲ್ಲಿ ಜಿ–20 ಸದಸ್ಯ ರಾಷ್ಟ್ರಗಳು ಭಿನ್ನ ನಿಲುವು ಹೊಂದಿವೆ ಎಂಬುದನ್ನು ‘ಬಾಲಿ ನಿರ್ಣಯ’ ಬಿಂಬಿಸಿತು. ‘ಬಹುತೇಕ’ ದೇಶಗಳು ಉಕ್ರೇನ್ ಮೇಲಿನ ದಾಳಿಯನ್ನು ಪ್ರಬಲವಾಗಿ ಖಂಡಿಸಿದವು. ಇದರಿಂದ ನಾಗರಿಕರು ಹೆಚ್ಚು ಸಮಸ್ಯೆ ಎದುರಿಸುತ್ತಿದ್ದು, ಜಾಗತಿಕ ಆರ್ಥಿಕ ಸಮಸ್ಯೆ ತಲೆದೋರಿದೆ. ಬೆಳವಣಿಗೆ ದರ ಕುಸಿತ, ಹಣದುಬ್ಬರ ಹೆಚ್ಚಳ, ಪೂರೈಕೆ ಸರಪಳಿಯಲ್ಲಿ ವ್ಯತ್ಯಯ, ಆಹಾರ ಮತ್ತು ಇಂಧನ ಅಭದ್ರತೆ ಹೆಚ್ಚಿದ್ದು, ಹಣಕಾಸು ಸ್ಥಿರತೆಗೆ ಅಪಾಯ ತಂದೊಡ್ಡಿದೆ’ ಎಂಬುದನ್ನು ಬಾಲಿ ಘೋಷಣೆ ಒತ್ತಿ ಹೇಳಿದೆ. ಇತರೆ ಅಭಿಪ್ರಾಯಗಳು, ನಿರ್ಬಂಧಗಳ ಬಗ್ಗೆಯೂ ಘೋಷಣೆಯಲ್ಲಿ ಉಲ್ಲೇಖಿಸಲಾಗಿದೆ.

ಪರಮಾಣು ಅಸ್ತ್ರಗಳ ಬಳಕೆ ಹಾಗೂ ಬಳಸುತ್ತೇವೆ ಎಂಬ ಬೆದರಿಕೆಯನ್ನು ಒಪ್ಪಲಾಗದು ಎಂದು ಸದಸ್ಯರಾಷ್ಟ್ರಗಳು ಹೇಳಿವೆ. ‘ಬಿಕ್ಕಟ್ಟುಗಳ ಸಂದರ್ಭದಲ್ಲಿ ಶಾಂತಿಯುತ ಪರಿಹಾರ, ಸಮಸ್ಯೆಗಳನ್ನು ನಿಭಾಯಿಸುವ ಯತ್ನಗಳು, ಮಾತುಕತೆ ಹಾಗೂ ರಾಜತಾಂತ್ರಿಕ ಕ್ರಮಗಳು ಈ ನಿಟ್ಟಿನಲ್ಲಿ ಅಗತ್ಯವಾಗಿವೆ’ ಎಂದು ಅಭಿಪ್ರಾಯಪಟ್ಟಿವೆ.

‘ಯುದ್ಧ ಈ ಸಮಯಕ್ಕಲ್ಲ. ಮಾತುಕತೆ ಮತ್ತು ರಾಜತಾಂತ್ರಿಕ ಯತ್ನಗಳ ಮೂಲಕ ಇದಕ್ಕೆ ಪರಿಹಾರ ಹುಡುಕಬೇಕು. ಎರಡೂ ಕಡೆಯವರ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಪರಿಹರಿಸಬೇಕು ಎಂದು ಪ್ರಧಾನಿ ಅಭಿಪ್ರಾಯಪಟ್ಟರು’ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಅವರು ಬಾಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಯುದ್ಧ ಸಾರಿರುವ ರಷ್ಯಾದ ನಿಲುವನ್ನು ಖಂಡಿಸಿಲ್ಲ ಎಂಬ ಕಾರಣಕ್ಕೆ ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳಿಂದ ಭಾರತವು ಕೆಲವು ತಿಂಗಳಿನಿಂದ ವಿರೋಧ ಎದುರಿಸುತ್ತಿದೆ. ಇದೇ ಸಂದರ್ಭದಲ್ಲಿ ಇದು ಯುದ್ಧದ ಸಮಯವಲ್ಲ ಎಂದು ಜಾಗತಿಕ ವೇದಿಕೆಯಲ್ಲಿ ಭಾರತ ಹೇಳಿದೆ.

ಭಾರತದ ಅಧ್ಯಕ್ಷತೆಯಲ್ಲಿ2023ರ ಜಿ–20
2023ರ ಜಿ–20 ಅಧ್ಯಕ್ಷತೆಯನ್ನು ಭಾರತಕ್ಕೆ ಇಂಡೊನ್ಯೇಷ್ಯಾ ಬುಧವಾರಹಸ್ತಾಂತರಿಸಿತು. ಬಾಲಿಯಲ್ಲಿ ನಡೆದ ಶೃಂಗಸಭೆಯ ಕೊನೆಯ ದಿನ, ಇಂಡೊನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ ಅವರು ಅಧ್ಯಕ್ಷರ ಗ್ಯಾವೆಲ್ (ಸಣ್ಣಸುತ್ತಿಗೆ) ಅನ್ನು ನರೇಂದ್ರ ಮೋದಿ ಅವರಿಗೆ ನೀಡಿದರು. ಬಳಿಕ ಮಾತನಾಡಿದ ಪ್ರಧಾನಿ, ಇದು ಪ್ರತಿ ಭಾರತೀಯರ ಹೆಮ್ಮೆ ಎಂದರು.

ಜಾಗತಿಕ ಭೌಗೋಳಿಕ ಬಿಕ್ಕಟ್ಟು, ಆರ್ಥಿಕ ಹಿನ್ನಡೆ, ಆಹಾರ ಮತ್ತು ಇಂಧನ ದರ ಸಮಸ್ಯೆಗಳು ಎದುರಾಗಿರುವ ಸಮಯದಲ್ಲಿ ಭಾರತವು ಜಿ–20 ಅಧ್ಯಕ್ಷತೆ ವಹಿಸಿ ಕೊಳ್ಳುತ್ತಿದೆ ಎಂದು ಪ್ರಧಾನಿ ಹೇಳಿದರು. ಭಾರತದ ಅಧ್ಯಕ್ಷತೆಯಲ್ಲಿ ನಡೆಯುವ ಶೃಂಗಸಭೆಯು ಎಲ್ಲರನ್ನೂ ಒಳಗೊಂಡ, ಮಹತ್ವಾಕಾಂಕ್ಷೆಯ, ನಿರ್ಣಯ ತೆಗೆದುಕೊಳ್ಳುವ ಹಾಗೂ ಕ್ರಿಯೆ ಆಧಾರಿತವಾಗಿ ಇರಲಿದೆ ಎಂದು ಹೇಳಿದರು.

ಡಿಜಿಟಲ್ ಕ್ರಾಂತಿ ಒಂದು ಭಾಗಕ್ಕೆ ಮಾತ್ರ ಸೀಮಿತವಾಗದೇ, ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ಲಭ್ಯವಾಗುವಂತೆ ಮುಂದಿನ 10 ವರ್ಷಗಳಲ್ಲಿ ಮಾಡಬೇಕು ಎಂದು ಪ್ರಧಾನಿ ಜಾಗತಿಕ ನಾಯಕರಿಗೆ ಕರೆ ನೀಡಿದರು. ‘ಅಭಿವೃದ್ಧಿಗಾಗಿ ದತ್ತಾಂಶ’ ಎಂಬುದು 2023ರಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆಯ ಲಿರುವ ಜಿ–20 ಶೃಂಗಸಭೆಯ ಮುಖ್ಯ ಭಾಗವಾಗಿರುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT