ಸೋಮವಾರ, ಸೆಪ್ಟೆಂಬರ್ 20, 2021
20 °C

ರಫೇಲ್‌ ವಿಚಾರದಲ್ಲಿ ಕಾಂಗ್ರೆಸ್‌–ಬಿಜೆಪಿ ನಡುವೆ ಮತ್ತೆ ಆರೋಪ, ಪ್ರತ್ಯಾರೋಪ

ಪಿಟಿಐ Updated:

ಅಕ್ಷರ ಗಾತ್ರ : | |

ದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ರಫೇಲ್‌ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಶನಿವಾರ ಹೊಸದಾಗಿ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಪಿಯೂಷ್‌ ಗೊಯೆಲ್‌ ಅವರು, ಇದೇ ರಫೇಲ್‌ ವಿಚಾರವನ್ನಿಟ್ಟುಕೊಂಡು 2024ರ ಚುನಾವಣೆ ಎದುರಿಸುವಂತೆ ರಾಹುಲ್‌ ಗಾಂಧಿ ಅವರಿಗೆ ಸವಾಲು ಎಸೆದರು.

ಯುದ್ಧೋಪಕರಣಗಳ ಖರೀದಿ ಕುರಿತ ವಿದೇಶಿ ಕಂಪನಿಗಳ ಜೊತೆಗಿನ ಒಪ್ಪಂದಗಳಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯವು ಲೆಕ್ಕ ಪರಿಶೋಧಕರು ಮತ್ತು ನಿಯಂತ್ರಕರಿಗೆ (ಸಿಎಜಿ) ವರದಿ ಸಲ್ಲಿಸಿದ್ದು, ಅದರಲ್ಲಿ ರಫೇಲ್‌ ಯುದ್ಧ ವಿಮಾನಗಳ ಖರೀದಿ ಪ್ರಸ್ತಾವವೇ ಇಲ್ಲ ಎಂಬ ಮಾಧ್ಯಮಗಳ ವರದಿ ಉಲ್ಲೇಖಿಸಿ ಟ್ವಿಟರ್‌ನಲ್ಲಿ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ರಫೇಲ್‌ ಒಪ್ಪಂದದ ಮೂಲಕ ಭಾರತದ ಬೊಕ್ಕಸದಿಂದ ಹಣ ಲೂಟಿ ಮಾಡಲಾಗಿದೆ ಎಂದು ವರದಿಯನ್ನು ಉಲ್ಲೇಖಿಸಿ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದರು.

ತಮ್ಮ ಟ್ವೀಟ್‌ನಲ್ಲಿ ಮಹಾತ್ಮಾ ಗಾಂಧೀಜಿ ಅವರ ಉಕ್ತಿಯೊಂದನ್ನೂ ರಾಹುಲ್‌ ಉಲ್ಲೇಖಿಸಿದ್ದಾರೆ. ‘ ಸತ್ಯ ಒಂದು, ಮಾರ್ಗಗಳು ಬೇರೆ ಬೇರೆ,’ ಎಂದು ಅವರು ಬರೆದುಕೊಂಡಿದ್ದಾರೆ.

ರಾಹುಲ್‌ ಗಾಂಧಿ ಅವರ ಆರೋಪಕ್ಕೆ ತೀಕ್ಷ್ಣ ತಿರುಗೇಟು ನೀಡಿರುವ ಕೇಂದ್ರ ರೈಲ್ವೇ ಸಚಿವ ಪಿಯೂಷ್‌ ಗೊಯಲ್‌, ‘ರಫೇಲ್ ಮೇಲಿನ ರಾಹುಲ್‌ ಗಾಂಧಿ ಅವರ ಗೀಳು ಕಾಂಗ್ರೆಸ್‌ಗೆ ಹಾನಿ ಮಾಡುತ್ತಿದೆ ಎಂದು ಹಲವು ಕಾಂಗ್ರೆಸ್‌ ನಾಯಕರು ನಂಬಿದ್ದಾರೆ,’ ಎಂದು ವ್ಯಂಗ್ಯವಾಡಿದರು.

‘ತಮ್ಮ ತಂದೆಯ ಪಾಪಗಳನ್ನು ತೊಳೆದುಕೊಳ್ಳುವ ರಾಹುಲ್‌ ಗಾಂಧಿ ಅವರ ರಫೇಲ್‌ ಗೀಳು ಕಾಂಗ್ರೆಸ್‌ಗೆ ಹಾನಿ ಮಾಡುತ್ತಿದೆ ಎಂದು ಅವರ ಮಿತ್ರರೇ ಹೇಳಿದ್ದಾರೆ. ಆದರೆ, ವ್ಯಕ್ತಿಯೊಬ್ಬ ಸ್ವಯಂ ವಿನಾಶಕ್ಕೆ ದೂಡಿಕೊಂಡಿರುವಾಗ ದೂರಲು ನಾವು ಯಾರು? ರಫೇಲ್‌ ವಿಚಾರದ ಮೇಲೆ 2024ರ ಲೋಕಸಭೆ ಚುನಾವಣೆಯನ್ನು ರಾಹುಲ್‌ ಗಾಂಧಿ ಎದಿರಿಸಲಿ,’ ಎಂದು ಪಿಯೂಷ್‌ ಗೊಯೆಲ್‌ ಸವಾಲು ಹಾಕಿದರು

ರಫೇಲ್‌‌ ಒಪ್ಪಂದದ ವಿಚಾರವಾಗಿ ರಾಹುಲ್‌ ಗಾಂಧಿ ಅವರು 2019ರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಆದರೆ, ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು