ಕೋವಿಡ್ ಹಿನ್ನೆಲೆ: ಸಂಸತ್ ಅಧಿವೇಶನ ಮೊಟಕುಗೊಳಿಸಲು ಮೂರು ಪಕ್ಷಗಳ ಆಗ್ರಹ

ನವದೆಹಲಿ: ಸಂಸದರು, ಸಚಿವರಿಗೆ ಕೋವಿಡ್ ದೃಢಪಡುತ್ತಿರುವ ಕಾರಣ ಈಗ ನಡೆಯುತ್ತಿರುವ ಸಂಸತ್ತಿನ ಮುಂಗಾರು ಅಧಿವೇಶನವನ್ನು ಮೊಟಕುಗೊಳಿಸುವಂತೆ ಮೂರು ಪಕ್ಷಗಳು ಆಗ್ರಹಿಸಿವೆ. ಡಿಎಂಕೆಯ ತಿರುಚ್ಚಿ ಶಿವಾ, ಎನ್‌ಸಿಪಿಯ ಪ್ರಫುಲ್ ಪಟೇಲ್ ಹಾಗೂ ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒಬ್ರಿಯಾನ್ ಅವರು ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ್ ಜೋಷಿ ಅವರಿಗೆ ಮನವಿ ಮಾಡಿದ್ದಾರೆ.
ಆದರೆ ಸರ್ಕಾರ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಪ್ರಸ್ತುತ ಅಧಿವೇಶನವು ಮಹತ್ವದ ಕಾರ್ಯಸೂಚಿಗಳನ್ನು ಒಳಗೊಂಡಿದ್ದು, ಮೊಟಕುಗೊಳಿಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಸರ್ಕಾರ ಹೇಳಿದೆ. ಸೆ.14ರಿಂದ ಆರಂಭವಾಗಿರುವ ಅಧಿವೇಶನ ಅ.1ರಂದು ಕೊನೆಗೊಳ್ಳಬೇಕಿದೆ.
ಒಬ್ರಿಯಾನ್ ಅವರು ಪ್ರಸ್ತಾವವೊಂದನ್ನು ಮುಂದಿಟ್ಟಿದ್ದರು. ‘ಮಂದಿನ ಮೂರು ದಿನಗಳಲ್ಲಿ ಏಳು ಸುಗ್ರೀವಾಜ್ಞೆಗಳ ಜಾಗದಲ್ಲಿ ಹೊಸ ಮಸೂದೆಗಳಿಗೆ ಅನುಮೋದನೆ ಪಡೆಯಲು ಸರ್ಕಾರಕ್ಕೆ ಪ್ರತಿಪಕ್ಷಗಳು ಅಡ್ಡಿಪಡಿಸುವುದಿಲ್ಲ. ಕೃಷಿಗೆ ಸಂಬಂಧಿಸಿದ ಮೂರು ಹಾಗೂ ಬ್ಯಾಂಕಿಂಗ್ ವಲಯದ ವಿವಾದಿತ ಮಸೂದೆಗಳನ್ನು ರಾಜ್ಯಸಭೆಯ ಆಯ್ಕೆ ಸಮಿತಿಗೆ ಕಳುಹಿಸಬೇಕು’ ಎಂಬುದು ಅವರ ಪ್ರಸ್ತಾವವಾಗಿತ್ತು.
ಒಂದು ವೇಳೆ ಸರ್ಕಾರ ಈ ಪ್ರಸ್ತಾವ ಮಂಡಿಸಿದರೆ, ಆರ್ಥಿಕತೆ ಹಾಗೂ ಜಿಎಸ್‌ಟಿ ಕುರಿತ ಚರ್ಚೆಯನ್ನು ಕೈಬಿಡಲು ನಾವು ಸಿದ್ಧರಿದ್ದೇವೆ’ ಎಂಬ ಸಂದೇಶವನ್ನೂ ಅವರು ಕೊಟ್ಟಿದ್ದಾರೆ. ಆದರೆ ಪ್ರತಿಪಕ್ಷದಲ್ಲಿರುವ ಎಲ್ಲ ಪಕ್ಷಗಳೂ ಅಧಿವೇಶನ ಮೊಟಕುಗೊಳಿಸುವುದರ ಪರವಾಗಿ ಇಲ್ಲ.
ಅಧಿವೇಶನದಲ್ಲಿ ಪಾಲ್ಗೊಳ್ಳುವ ಮುನ್ನ ನಡೆದ ತಪಾಸಣೆಯಲ್ಲಿ 40 ಸಂಸದರು ಹಾಗೂ 75ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದೆ.
ಮಸೂದೆಗಳಿಗೆ ಅನುಮೋದನೆ: ಹೋಮಿಯೊಪತಿ ಸೆಂಟ್ರಲ್ ಕೌನ್ಸಿಲ್ (ತಿದ್ದುಪಡಿ) ಮಸೂದೆ 2020 ಹಾಗೂ ಇಂಡಿಯನ್ ಮೆಡಿಸಿನ್ ಸೆಂಟ್ರಲ್ ಕೌನ್ಸಿಲ್ (ತಿದ್ದುಪಡಿ) ಮಸೂದೆ 2020ಕ್ಕೆ ರಾಜ್ಯಸಭೆ ಶುಕ್ರವಾರ ಅನುಮೋದನೆ ನೀಡಿದೆ. ಈ ಎರಡೂ ಮಸೂದೆಗಳಿಗೆ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.