ಸೋಮವಾರ, ಜುಲೈ 4, 2022
24 °C

ಪ್ರಜಾವಾಣಿ ಚರ್ಚೆ: ಈ ದಶಕದ ಅತಿ ಶಕ್ತ ರಾಜಕೀಯ ಸಂಕಥನ

ವಿ. ಸುನಿಲ್‌ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಹಿಂದೊಂದು ಮಾತಿತ್ತು; ‘ದಂಡಂ ದಶಗುಣಂ’. ವ್ಯವಸ್ಥೆಯ ಶಿಸ್ತಿಗೆ ಒಳಪಡದೇ ಇರುವವರನ್ನು ಸರಿದಾರಿಗೆ ತರುವುದಕ್ಕೆ ಬೇಕಾದ ಅನಿವಾರ್ಯ ಅಸ್ತ್ರವಾಗಿ ದಂಡ ಪ್ರಯೋಗ ಮಾಡುವುದು ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ರಾಜರ ಆಡಳಿತ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ನಮ್ಮವರು ಅದನ್ನು ಸಾಮ, ದಾನ, ಭೇದ ನೀತಿಯ ಪ್ರಯೋಗದ ನಂತರ ಅಂತಿಮವಾಗಿ ಬಳಕೆ ಮಾಡುತ್ತಿದ್ದರು. ಯಾರಿಗೂ ಬಗ್ಗದವರು ದಂಡನೀತಿಯ ಎದುರು ಮಂಡಿಯೂರಲೇಬೇಕಲ್ಲವೇ?

ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಕಳೆದ ಐದಾರು ವರ್ಷದಿಂದ ಜಾರಿಯಲ್ಲಿರುವ ‘ಬುಲ್ಡೋಜರ್ ಸರ್ಕಾರ’ ಕೂಡಾ ಯಾರಿಗೂ ಬಗ್ಗದೇ ಇರುವವರನ್ನು ಮಂಡಿಯೂರಿಸುವುದಕ್ಕಾಗಿಯೇ ಸೃಷ್ಟಿಗೊಂಡ ಪದ. ರಾಜಕೀಯ ಪಂಡಿತರ ಲೆಕ್ಕಾಚಾರ, ಜಾಲತಾಣದಲ್ಲಿ ವ್ಯಾಪಕವಾಗಿ ನಡೆದ ನಕಾರಾತ್ಮಕ ಕಾರ್ಯಸೂಚಿ ಹಾಗೂ ಸಂಕಥನ ಸೃಷ್ಟಿಯ ಹೊರತಾಗಿಯೂ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರು ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡ ಬಳಿಕವಂತೂ ‘ಬುಲ್ಡೋಜರ್ ಸರ್ಕಾರ’ದ ವ್ಯಾಪ್ತಿ-ವಿಸ್ತಾರ ಹೆಚ್ಚಾಗಿದೆ. ಬಿಜೆಪಿಯ ಸೈದ್ಧಾಂತಿಕ ವಿರೋಧಿಗಳಿಂದ ಯಥೇಚ್ಛವಾಗಿ ಟೀಕೆಗೆ ಒಳಗಾದರೂ ನನ್ನ ಪ್ರಕಾರ ರಾಜಕೀಯ ಪರಿಭಾಷೆಯಲ್ಲಿ ಬುಲ್ಡೋಜರ್ ಎಂಬ ಪದ ಈ ದಶಕದ ಶಕ್ತ ಸಂಕಥನ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ವಿಷಯಾಧಾರಿತವಾಗಿ ನಾನು ಕೂಡಾ ಅದರ ಪ್ರತಿಪಾದಕ.

ನಿಮಗೆಲ್ಲ ತಿಳಿದಿರುವಂತೆ ಈ ಬುಲ್ಡೋಜರ್ ಸರ್ಕಾರ ವ್ಯವಸ್ಥೆಯನ್ನು ಜಾರಿಗೆ ತಂದವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ. 2017ರಲ್ಲಿ ಮೊದಲ ಬಾರಿಗೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಕಾನೂನು ವ್ಯಾಪ್ತಿಯಲ್ಲೇ ಬುಲ್ಡೋಜರ್ ಅನ್ನು ಅಖಾಡಕ್ಕೆ ಇಳಿಸಿದರು. ಸರ್ಕಾರಿ ಜಮೀನಿನಲ್ಲಿ ಮಾಫಿಯಾಗಳು ಮಾಡಿಕೊಂಡ ಕಾನೂನುಬಾಹಿರ ನಿರ್ಮಾಣಗಳು, ಕೋಮು ದಳ್ಳುರಿಯ ಸೃಷ್ಟಿಕರ್ತರು, ಘೋಷಿತ ಅಪರಾಧಿಗಳು, ಸ್ತ್ರೀಪೀಡಕರು, ಕಾನೂನು-ಸುವ್ಯವಸ್ಥೆಗೆ ಭಂಗ ತರುವ ರೌಡಿ ಪಡೆಗಳ ವಿರುದ್ಧ ಆದಿತ್ಯನಾಥ ಬುಲ್ಡೋಜರ್‌ ಅನ್ನು ಹುರಿಗಟ್ಟಿ ಆಕ್ರಮಣ ನಡೆಸಿಯೇಬಿಟ್ಟರು. ಆದರೆ, ಅದು ಸದುದ್ದೇಶದ ಆಕ್ರಮಣವಾಗಿತ್ತು.

ಉತ್ತರ ಪ್ರದೇಶದ ರಾಜಕೀಯ ಕೋಟೆಯೊಳಗೆ ಗಟ್ಟಿಯಾಗಿ ನೆಲೆಯೂರಿದ್ದ ವಿವೇಕ್ ದುಬೆಯಂಥವರನ್ನು ಮಟ್ಟ ಹಾಕುವುದಕ್ಕೆ ಬಳಕೆಯಾಗಿದ್ದು ಕೂಡಾ ಬುಲ್ಡೋಜರ್. ಅಲ್ಲಿಂದಲೇ ಈ ಪದಕ್ಕೆ ‘ರಾಜಕೀಯ ಮಾನ್ಯತೆ’ ಲಭಿಸಿಬಿಟ್ಟಿತು. ಉತ್ತರ ಪ್ರದೇಶದಲ್ಲಿ ಸುಮಾರು 67,000 ಎಕರೆ ಸರ್ಕಾರಿ ಭೂಮಿಯನ್ನು ಮಾಫಿಯಾ ಹಿಡಿತದಿಂದ ಬಿಡಿಸಿಕೊಂಡಿದ್ದು ಕೂಡಾ ಇದೇ ಬುಲ್ಡೋಜರ್. ಅಷ್ಟರ ಮಟ್ಟಿಗೆ ಸಮಾಜ ವಿರೋಧಿಗಳು ಮಂಡಿಯೂರುವಂತೆ ಮಾಡುವುದಕ್ಕೆ ಬುಲ್ಡೋಜರ್ ಅನ್ನು ಆದಿತ್ಯನಾಥ ಅಸ್ತ್ರವಾಗಿ ಬಳಸಿಕೊಂಡರು. ಈ ಅಸ್ತ್ರ ಈಗ ಉತ್ತರಪ್ರದೇಶವನ್ನು ದಾಟಿ ಬೇರೆ ಬೇರೆ ರಾಜ್ಯಗಳಿಗೂ ಮಾದರಿಯಾಗಿದೆ. ಮಧ್ಯ ಪ್ರದೇಶದಲ್ಲಿ ಸ್ತ್ರೀಪೀಡಕರ ವಿರುದ್ಧ ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್‌ ಚೌಹಾಣ್ ಬುಲ್ಡೋಜರ್‌ ಬಳಕೆ ಮಾಡುತ್ತಿದ್ದಾರೆ.

ಹನುಮ ಜಯಂತಿಯ ದಿನ ಶೋಭಾಯಾತ್ರೆಯ ಮೇಲೆ ಕಲ್ಲು ತೂರುವ ಪ್ರಕರಣ ನಡೆಯಬಹುದೆಂದು ಮೊದಲೇ ಗ್ರಹಿಸಿದ್ದ ಉತ್ತರಾಖಂಡ ಸರ್ಕಾರ ಬುಲ್ಡೋಜರ್‌ ಅನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟಿತ್ತು. ಅದೇ ರೀತಿ ಗುಜರಾತ್ ಹಾಗೂ ದೆಹಲಿಯ ಸ್ಥಳೀಯ ಸರ್ಕಾರಗಳೂ ಬುಲ್ಡೋಜರ್ ಪ್ರಯೋಗಕ್ಕೆ ಮುಂದಾಗಿವೆ. ಕಾನೂನು-ಸುವ್ಯವಸ್ಥೆಯ ದೃಷ್ಟಿಯಿಂದ ಆಯಾ ರಾಜ್ಯದ ಜನರಿಂದಲೂ ಬುಲ್ಡೋಜರ್ ಸರ್ಕಾರ ವ್ಯವಸ್ಥೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಚುನಾವಣಾ ಸಂದರ್ಭದಲ್ಲಿ ತಮ್ಮನ್ನು ‘ಬುಲ್ಡೋಜರ್ ಬಾಬಾ’ ಎಂದು ಟೀಕಿಸಿದ್ದ ಅಖಿಲೇಶ್ ಯಾದವ್ ಅವರಿಗೆ ತಿರುಗೇಟು ಕೊಟ್ಟ ಯೋಗಿಯವರ ಮಾತಿನಲ್ಲೇ ಹೇಳುವುದಾದರೆ ‘ಬುಲ್ಡೋಜರ್ ಹೆದ್ದಾರಿಯನ್ನೂ ನಿರ್ಮಿಸುತ್ತದೆ, ಮಾಫಿಯಾವನ್ನು ಬುಡಮೇಲೂ ಮಾಡುತ್ತದೆ’.

ಇನ್ನು ನಮ್ಮ ರಾಜ್ಯದ ವಿಚಾರಕ್ಕೆ ಬರುವುದಾದರೆ, ರಾಜ್ಯದ ಸಚಿವನಾಗಿ ನಾನು ಮೊದಲ ಬಾರಿಗೆ ‘ಬುಲ್ಡೋಜರ್’ ವಿಚಾರ ಪ್ರಸ್ತಾಪಿಸಿದ್ದೆ. ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ನುಗ್ಗಿದ ಒಂದು ಸಮುದಾಯದ ಜನರು ದಾಂದಲೆ ನಡೆಸಿದಾಗ ‘ನಿಮಗೆ ಶಾಂತಿ ಬೇಕೋ ಅಥವಾ ಬುಲ್ಡೋಜರ್ ಸರ್ಕಾರ ಬೇಕೋ’ ಎಂದು ಆಯ್ಕೆಯ ಸ್ವಾತಂತ್ರ‍್ಯವನ್ನು ಗಲಭೆಕೋರರಿಗೆ ನೀಡಿದ್ದು ಸತ್ಯ. ನಾನು ಆ ಹೇಳಿಕೆ ಕೊಟ್ಟಿದ್ದರ ಹಿಂದಿನ ಔಚಿತ್ಯವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಪೌರತ್ವ ಕಾಯ್ದೆ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾದ ದಿನದಿಂದಲೂ ಒಂದು ವರ್ಗದ ಜನರು ಸಾಮಾಜಿಕವಾಗಿ ನಡೆದುಕೊಳ್ಳುತ್ತಿರುವ ರೀತಿ ಎಲ್ಲರಿಗೂ ಗೊತ್ತು. ಮಂಗಳೂರಿನಲ್ಲಿ ವಿನಾಕಾರಣ ಗಲಭೆ ಸೃಷ್ಟಿಸಿದ ಈ ವ್ಯಕ್ತಿಗಳು ಕೋವಿಡ್ ಸೋಂಕು ವ್ಯಾಪಕವಾಗಿದ್ದಾಗ ಹೇಗೆ ನಡೆದುಕೊಂಡರು ಎಂದು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ಇದಕ್ಕೂ ಮುನ್ನ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆದ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆಯನ್ನು ಯಾರಾದರೂ ಮರೆಯಲು ಸಾಧ್ಯವೇ? ಅದರ ಹಿಂದೆ ಇರುವ ಭಯೋತ್ಪಾದಕ ಮನಸ್ಥಿತಿ ಯಾರದ್ದು ಎಂದು ಪ್ರತ್ಯೇಕವಾಗಿ ವಿವರಿಸಬೇಕೇ?

ಅಷ್ಟೇ ಏಕೆ? ಇತ್ತೀಚೆಗೆ ನಡೆದ ಹಿಜಾಬ್ ವಿವಾದದಲ್ಲಿ ನ್ಯಾಯಾಲಯದ ತೀರ್ಪಿನ ಬಳಿಕವೂ ಕೆಲವರು ನಡೆದುಕೊಂಡ ರೀತಿ, ಶಿವಮೊಗ್ಗದ ಹರ್ಷ ಕೊಲೆ, ಬೆಂಗಳೂರಿನಲ್ಲಿ ಚಂದ್ರು ಹತ್ಯೆ, ನಂತರ ನಡೆದ ಹುಬ್ಬಳ್ಳಿ ಗಲಾಟೆ ಇದೆಲ್ಲದರ ಹಿಂದೆಯೂ ಇರುವುದು ಒಂದೇ ಮನಸ್ಥಿತಿ. ದೇಶದ ಕಾನೂನಿಗೆ ಹಾಗೂ ಸಂವಿಧಾನಕ್ಕೆ ಗೌರವ ಕೊಡದ ವ್ಯಕ್ತಿ, ಸಂಘಟನೆ, ಸಮುದಾಯ ಯಾವುದೇ ಆಗಿರಲಿ, ಅವರಿಗೆ ನಾವು ಕೊಡುವ ಆಯ್ಕೆ ಬುಲ್ಡೋಜರ್. ನನ್ನ ಈ ಹೇಳಿಕೆಯನ್ನು ಕೆಲವರು ತಪ್ಪಾಗಿ ವ್ಯಾಖ್ಯಾನಿಸಿದ್ದಲ್ಲದೇ, ಟೀಕಿಸಿದರು. ಏನೇ ಆಗಲಿ ನಿಂದಕರಿರಬೇಕಲ್ಲವೇ? ಆದರೆ ಒಂದಂತೂ ಸತ್ಯ ಸರ್ಕಾರದ ಭಾಗವಾಗಿ ಅತ್ಯಂತ ಪ್ರಜ್ಞಾಪೂರ್ವಕವಾಗಿಯೇ ನಾನು ಬುಲ್ಡೋಜರ್ ಸರ್ಕಾರದ ಪ್ರತಿಪಾದನೆ ಮಾಡಿದ್ದು. ನೆಲದ ಕಾನೂನು ಪಾಲನೆ ಮಾಡದೇ ಬೀದಿಗೆ ಇಳಿಯುವುದನ್ನು ಯಾವ ಸರ್ಕಾರವೂ ಸಹಿಸಿಕೊಳ್ಳುವುದಿಲ್ಲ. ಕಾನೂನು ವ್ಯಾಪ್ತಿಯಲ್ಲೇ ತೆಗೆದುಕೊಳ್ಳಬಹುದಾದ ಅನಿವಾರ್ಯ ಕ್ರಮದ ಬಗ್ಗೆಯಷ್ಟೇ ನಾನು ಪ್ರತಿಪಾದಿಸಿದ್ದೇನೆ ಮತ್ತು ನಾನದಕ್ಕೆ ಬದ್ಧವಾಗಿಯೂ ಇದ್ದೇನೆ.

ಬುಲ್ಡೋಜರ್ ಸರ್ಕಾರದ ಪ್ರತಿಪಾದಕರಿಗೆ ಕೋಮುವಾದಿಗಳು ಎಂದು ಪಟ್ಟಕಟ್ಟುವ ಪ್ರಯತ್ನ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಆದರೆ ಈ ರೀತಿ ವಾದ ಮಾಡುವವರಿಗೆ ಯೋಗಿಯವರ ಬುಲ್ಡೋಜರ್ ಜಾತಿ-ಧರ್ಮ ನೋಡಿ ಅಬ್ಬರಿಸಿದ್ದಲ್ಲ ಎಂಬುದು ಗೊತ್ತಿರಲಿ. ಯೋಗಿಯವರ ದೃಷ್ಟಿಯಲ್ಲಿ ವಿವೇಕ್ ದುಬೆ, ಮುಕ್ತಾರ್ ಅನ್ಸಾರಿ, ಅತೀಕ್ ಅಹ್ಮದ್, ಶರ್ಮಾ ಸೇರಿದಂತೆ ಕಾನೂನು ಭಂಜಕರ ನಡುವೆ ವ್ಯತ್ಯಾಸವಿಲ್ಲ. ಕಾನೂನು- ಸುವ್ಯವಸ್ಥೆಗೆ ಭಂಗ ತಂದವರನ್ನು ಅವರು ಒಂದೇ ದೃಷ್ಟಿಯಲ್ಲಿ ನೋಡಿದ್ದಾರೆ. ನಮಗೂ ಅಷ್ಟೇ, ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಧ್ವಂಸಗೊಳಿಸಿದವರು, ಬೆಂಗಳೂರಿನ ಕೆ.ಜಿ.ಹಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಇಟ್ಟವರು ಎಲ್ಲ ಒಂದೇ. ಈ ಎಲ್ಲ ವಿಚಾರಗಳನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅತ್ಯಂತ ಸಂಯಮದಿಂದ ನಿಭಾಯಿಸಿದ್ದಾರೆ. ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಬುಲ್ಡೋಜರ್ ಬಳಕೆಯನ್ನು ನಾವು ಪ್ರತಿಪಾದಿಸುತ್ತೇವೆಯೇ ಹೊರತು, ಶಾಂತಿಪ್ರಿಯರ ಮೇಲಲ್ಲ. ‘ಸಾಧುಂಗೆ ಸಾಧು, ಮಾಧುರ‍್ಯಂಗೆ ಮಾಧುರ‍್ಯಂ. ಭಾದಿರ್ಪ ಕಲಿಗೆ ಕಲಿಯುಗ ವಿಪರೀತನ್. ಮಾಧವನೀತನ್ ಪೆರನಲ್ಲ’ ಎಂದು ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದಲ್ಲಿ ಹೇಳಿದ್ದು ಕೂಡಾ ಇದೇ ಅರ್ಥದಲ್ಲಿ. ನಮ್ಮ ಸರ್ಕಾರ ಆಯ್ಕೆ ಮುಂದಿಟ್ಟಿದೆ ಅಷ್ಟೆ.

ಲೇಖಕ: ಕನ್ನಡ ಮತ್ತು ಸಂಸ್ಕೃತಿ, ಇಂಧನ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು