ಶುಕ್ರವಾರ, ಡಿಸೆಂಬರ್ 3, 2021
26 °C

ಆಳ–ಅಗಲ: ವಿಶ್ವದಲ್ಲಿ ಕೋವಿಡ್‌ ಪ್ರಕರಣಗಳ ಏರಿಳಿತದ ಆಟ, ಹೇಳುವ ಪಾಠ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದಲ್ಲಿ ಈಗ ಪ್ರತಿದಿನ ಪತ್ತೆಯಾಗುತ್ತಿರುವ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಇಳಿಕೆಯಾಗುತ್ತಿದೆ. ಆದರೆ ಜಾಗತಿಕ ಮಟ್ಟದಲ್ಲಿ ಪ್ರತಿದಿನ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಿನ ಬದಲಾವಣೆಯೇನೂ ಇಲ್ಲ. ಆದರೆ ಹೊಸ ಪ್ರಕರಣಗಳ ಸಂಖ್ಯೆ ಕೆಲವು ದೇಶಗಳಲ್ಲಿ ಇಳಿಕೆಯಾಗುತ್ತಿದ್ದರೆ, ಕೆಲವು ದೇಶಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಿದೆ. ವಿಶ್ವದ ಎಲ್ಲಾ ದೇಶಗಳಲ್ಲಿ ಪತ್ತೆಯಾದ ಪ್ರಕರಣಗಳನ್ನು ಪರಿಗಣಿಸಿದರೆ, ವಿಶ್ವವು ಈಗ ಕೋವಿಡ್ ಸೋಂಕಿನ ನಾಲ್ಕನೇ ಅಲೆಯತ್ತ ಸಾಗುತ್ತಿದೆ. ಕೆಲವು ದೇಶಗಳಲ್ಲಿ ಈಗಷ್ಟೇ ಮೂರನೇ ಅಲೆ ಆರಂಭವಾಗಿದೆ. ಆದರೆ, ಭಾರತದಲ್ಲಿ ಈಗ ಎರಡನೇ ಅಲೆ ಕೊನೆಯಾಗುತ್ತಿದೆ.

*ವಿಶ್ವದಲ್ಲಿ ಮೊದಲ ಅಲೆ ತೀವ್ರವಾಗುವಾಗ ಭಾರತದಲ್ಲೂ ಮೊದಲ ಅಲೆ ತೀವ್ರತೆ ಪಡೆದಿತ್ತು. ಆದರೆ ಜಾಗತಿಕ ಮಟ್ಟದಲ್ಲಿ ಮೊದಲನೇ ಅಲೆ ಸಂಪೂರ್ಣ ತೀವ್ರವಾಗುವ ಮುನ್ನವೇ, ಮೊದಲನೇ ಅಲೆ ಭಾರತದಲ್ಲಿ ತೀವ್ರತೆ ಕಳೆದುಕೊಂಡಿತ್ತು. ಆದರೆ ಜಾಗತಿಕ ಮಟ್ಟದಲ್ಲಿ ಮೊದಲನೇ ಅಲೆ ಇಳಿಕೆಯಾಗದೆಯೇ ಎರಡನೇ ಅಲೆ ಆರಂಭವಾಯಿತು

* ವಿಶ್ವದಲ್ಲಿ ಎರಡನೇ ಅಲೆ ತೀವ್ರವಾಗಿದ್ದಾಗ, ಭಾರತದಲ್ಲಿ ಪ್ರತಿದಿನ ಪತ್ತೆಯಾಗುತ್ತಿದ್ದ ಸರಾಸರಿ ಹೊಸ ಪ್ರಕರಣಗಳ ಸಂಖ್ಯೆ 15,000ಕ್ಕಿಂತಲೂ ಕಡಿಮೆ ಇತ್ತು. ವಿಶ್ವದಲ್ಲಿ ಮೊದಲ ಅಲೆಯಲ್ಲಿ ಪತ್ತೆಯಾಗುತ್ತಿದ್ದ ಪ್ರಕರಣಗಳಿಗಿಂತ ದುಪ್ಪಟ್ಟು ಪ್ರಕರಣಗಳು ಎರಡನೇ ಅಲೆಯಲ್ಲಿ ಪತ್ತೆಯಾಗುತ್ತಿದ್ದವು. ಆದರೆ ಭಾರತದಲ್ಲಿ ಕೋವಿಡ್‌ ಕೊನೆಯಾಗುತ್ತಿದೆ ಎಂದು ಸರ್ಕಾರವು ಘೋಷಿಸಿತ್ತು

* ವಿಶ್ವದಲ್ಲಿ ಎರಡನೇ ಅಲೆ ತನ್ನ ತೀವ್ರತೆಯನ್ನು ಕಳೆದುಕೊಂಡ ನಂತರ, ಭಾರತದಲ್ಲಿ ಎರಡನೇ ಅಲೆ ತೀವ್ರತೆ ಪಡೆಯಿತು. ಭಾರತದಲ್ಲಿ ಎರಡನೇ ಅಲೆ ತೀವ್ರಗೊಂಡಂತೆ, ವಿಶ್ವದಲ್ಲಿ ಮೂರನೇ ಅಲೆ ತೀವ್ರವಾಯಿತು. ಭಾರತದಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದ ವೇಳೆ ಬ್ರಿಟನ್, ಅಮೆರಿಕ ಮತ್ತು ಬ್ರೆಜಿಲ್‌ನಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾದವು. ವಿಶ್ವದಲ್ಲಿ ಪತ್ತೆಯಾಗುತ್ತಿದ್ದ ಒಟ್ಟು ಪ್ರಕರಣಗಳಲ್ಲಿ, ಭಾರತದ ಪಾಲೇ ಶೇ 45ರಷ್ಟು ಇತ್ತು

* ಈಗ ಭಾರತದಲ್ಲಿ ಎರಡನೇ ಅಲೆ ತೀವ್ರತೆ ಕಳೆದುಕೊಂಡಿದೆ. ಅದರ ಜತೆಯಲ್ಲಿಯೇ ವಿಶ್ವದಲ್ಲಿ ಮೂರನೇ ಅಲೆಯೂ ತೀವ್ರತೆ ಕಳೆದುಕೊಂಡಿದೆ. ಆದರೆ ಈಗ ವಿಶ್ವದಲ್ಲಿ ಈಗ ನಾಲ್ಕನೇ ಅಲೆ ತೀವ್ರತೆ ಪಡೆಯುತ್ತಿದೆ

* ವಿಶ್ವದಲ್ಲಿ ಮೊದಲ ಅಲೆಯ ಗರಿಷ್ಠಮಟ್ಟದಲ್ಲಿ ಪತ್ತೆಯಾಗಿದ್ದ ಪ್ರಕರಣಗಳ ಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆಯ ಪ್ರಕರಣಗಳು, ಎರಡನೇ ಮತ್ತು ಮೂರನೇ ಅಲೆಗಳು ತೀವ್ರತೆ ಕಳೆದುಕೊಂಡಾಗಲೂ ಪತ್ತೆಯಾಗುತ್ತಿವೆ. ಇದು ಕಳವಳಕಾರಿ ಬೆಳವಣಿಗೆ. ಒಟ್ಟಾರೆ ವಿಶ್ವದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿಯೇ ಇದೆ.

ಹಲವೆಡೆ ಏರಿಕೆ: ವೈರಾಣುವಿನ ಹೊಸ ರೂಪಾಂತರಗಳೇ ಮುಖ್ಯ ಕಾರಣ

ಹಲವು ದೇಶಗಳಲ್ಲಿ ಕೋವಿಡ್‌–19 ಹೊಸ ಪ್ರಕರಣಗಳ ಏರಿಕೆಗೆ ಲಸಿಕೆ ಕೊರತೆ, ಲಸಿಕೆ ಹಿಂಜರಿಕೆ ಮತ್ತು ವೈರಾಣುವಿನ ಹೊಸ ರೂಪಾಂತರಗಳೇ ಮುಖ್ಯ ಕಾರಣ ಎನ್ನಲಾಗಿದೆ. 

ಬ್ರಿಟನ್‌ನಲ್ಲಿ ಶೇ 80ಕ್ಕೂ ಹೆಚ್ಚು ಜನರಿಗೆ ಎರಡೂ ಡೋಸ್‌ ಲಸಿಕೆ ಹಾಕಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹೆಚ್ಚಿನ ಜನರಲ್ಲಿ ಡೆಲ್ಟಾ ರೂಪಾಂತರ ಎವೈ.4.2 ವೈರಾಣು ಪತ್ತೆಯಾಗಿದೆ. ಈ ವೈರಾಣುವಿನ ಬಗ್ಗೆ ಅಧ್ಯಯನ ನಡೆಯುತ್ತಿದೆ. ಬ್ರಿಟನ್‌ನಲ್ಲಿ ಪ್ರಕರಣ ಹೆಚ್ಚಳಕ್ಕೆ ಶಾಲೆಗಳು ಆರಂಭವಾಗಿದ್ದು ಒಂದು ಕಾರಣ ಎನ್ನಲಾಗುತ್ತಿದೆ. 18ರ ಒಳಗಿನವರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಹಾಕಲಾಗಿಲ್ಲ. ಈ ವಯೋಮಾನದವರ ಲಸಿಕೆ ಅಭಿಯಾನವು ವೇಗ ಪಡೆದುಕೊಂಡಿಲ್ಲ. 18ರ ಒಳಗಿನವರಲ್ಲಿಯೇ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ಚೀನಾದಲ್ಲಿಯೂ ಡೆಲ್ಟಾ ರೂಪಾಂತರ ತಳಿಯೇ ಹೆಚ್ಚಿನವರಲ್ಲಿ ಕಂಡು ಬಂದಿದೆ. ಪ್ರವಾಸೋದ್ಯಮ ಬಿರುಸು ಪಡೆದುಕೊಂಡಿದ್ದು ಸೋಂಕು ಹರಡಲು ಕಾರಣ ಎನ್ನಲಾಗಿದೆ. 

ರಷ್ಯಾದಲ್ಲಿ ಕೋವಿಡ್‌ ಪ್ರಕರಣಗಳ ಜತೆಗೆ ಸಾವಿನ ಸಂಖ್ಯೆ ತೀವ್ರವಾಗಿ ಏರಿಕೆಯಾಗಿದೆ. ರಷ್ಯಾದಲ್ಲಿ ಸಾವಿನ ಸಂಖ್ಯೆಯು ಕಳೆದ ಕೆಲವು ದಿನಗಳಲ್ಲಿ ಸಾವಿರದ ಆಸುಪಾಸಿನಲ್ಲಿಯೇ ಇದೆ. ಅಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್‌ ರೋಗಿಗಳ ಸಂಖ್ಯೆಯು 2,35,000ಕ್ಕೂ ಹೆಚ್ಚು. ಇವರಲ್ಲಿ ಶೇ 11ರಷ್ಟು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ರಷ್ಯಾದ ಆರೋಗ್ಯ ಸಚಿವ ಮಿಖಾಯಿಲ್‌ ಮುರಾಷ್ಕೊ ಹೇಳಿದ್ದಾರೆ. ಗಂಭೀರ ಪರಿಸ್ಥಿತಿಯಲ್ಲಿರುವ ಯಾರೂ ಲಸಿಕೆ ಹಾಕಿಸಿಕೊಂಡವರಲ್ಲ ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ.

ಆರೋಗ್ಯ ಸೇವೆ, ಶಿಕ್ಷಣ, ಚಿಲ್ಲರೆ ಮಾರಾಟದಂತಹ ಕೆಲವು ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಲಸಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಸಾರ್ವಜನಿಕರಿಗೆ ಲಸಿಕೆ ಕಡ್ಡಾಯ ಅಲ್ಲ. ಕಡ್ಡಾಯಗೊಳಿಸುವ ಚಿಂತನೆಯನ್ನೂ ಸರ್ಕಾರ  ಹೊಂದಿಲ್ಲ. ಜನರಲ್ಲಿ ಲಸಿಕೆಯ ಬಗ್ಗೆ ಹಿಂಜರಿಕೆ ಇದೆ. ಮುಖ್ಯವಾಗಿ, ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್‌–ವಿ ಲಸಿಕೆಯ ಬಗ್ಗೆ ಜನರಿಗೆ ವಿಶ್ವಾಸ ಇಲ್ಲ ಎಂದು ವರದಿಯಾಗಿದೆ. ರಷ್ಯಾದಲ್ಲಿ ಲಸಿಕೆ ಲಭ್ಯ ಇದೆ. ಆದರೆ ಪೂರ್ಣ ಲಸಿಕೆ ಹಾಕಿಸಿಕೊಂಡ ಜನರ ಪ್ರಮಾಣವು ಶೇ 31ರಷ್ಟು ಮಾತ್ರ ಎಂದು ‘ಅವರ್‌ ವರ್ಲ್ಡ್‌ ಇನ್‌ ಡಾಟಾ’ ಹೇಳಿದೆ. 2020ರ ಆಗಸ್ಟ್‌ನಲ್ಲಿ ಜಗತ್ತಿನಲ್ಲಿಯೇ ಮೊದಲನೆಯದಾಗಿ ಕೋವಿಡ್‌ ಲಸಿಕೆ ಸ್ಪುಟ್ನಿಕ್‌–ವಿಗೆ ರಷ್ಯಾ ಅನುಮೋದನೆ ನೀಡಿತ್ತು. ಈ ಲಸಿಕೆಯು ಶೇ 91ಕ್ಕೂ ಹೆಚ್ಚು ಪರಿಣಾಮಕಾರಿ ಎಂದೂ ಅಧ್ಯಯನಗಳು ಹೇಳಿದ್ದವು. ಹಾಗಿದ್ದರೂ ಶೇ 62ರಷ್ಟು ಜನರು ಲಸಿಕೆ ಪಡೆದುಕೊಳ್ಳಲು ಬಯಸಿಲ್ಲ ಎಂದು ಸಮೀಕ್ಷೆಯಲ್ಲಿ ಹೇಳಿದ್ದಾರೆ ಎಂದು ಸಿಎನ್‌ಬಿಸಿ ವರದಿ ಮಾಡಿದೆ. ಲಸಿಕೆ ಹಿಂಜರಿಕೆಯೇ ರಷ್ಯಾದ ಬಹುದೊಡ್ಡ ಸವಾಲಾಗಿದೆ. 

242 ದಿನಗಳಲ್ಲೇ ಕಡಿಮೆ ಪ್ರಕರಣ

ಹಲವು ದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆ ಆಗುತ್ತಿದ್ದರೂ ಭಾರತದಲ್ಲಿ ಸಾಂಕ್ರಾಮಿಕವು ಇಳಿಕೆಯ ಹಾದಿಯಲ್ಲಿದೆ. ಮಂಗಳವಾರ ಬೆಳಿಗ್ಗೆಯಿಂದ ಬುಧವಾರ ಬೆಳಿಗ್ಗೆ ವರೆಗಿನ 24 ತಾಸುಗಳಲ್ಲಿ ವರದಿಯಾದ ಹೊಸ ಪ್ರಕರಣಗಳ ಸಂಖ್ಯೆ 13,451 ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಇದು 242 ದಿನಗಳಲ್ಲಿಯೇ ಅತ್ಯಂತ ಕಡಿಮೆ ಏರಿಕೆ ಎಂದು ದಾಖಲಾಗಿದೆ. 

ಹಾಗಿದ್ದರೂ ಕಳವಳಕ್ಕೆ ಕಾರಣವಾಗುವ ಅಂಶಗಳೂ ಕಳೆದ ಕೆಲವು ದಿನಗಳಲ್ಲಿ ವರಿದಯಾಗಿವೆ. ಕೋವಿಡ್‌–19 ಮೊದಲ ಅಲೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸಿದ್ದ ಕೇರಳದಲ್ಲಿ ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಬುಧವಾರವೂ ಇಲ್ಲಿ ಏಳು ಸಾವಿರಕ್ಕೂ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ.  ದಸರಾ ಹಬ್ಬದ ನಂತರ, ಪಶ್ಚಿಮ ಬಂಗಾಳದಲ್ಲಿ ಪ‍್ರಕರಣಗಳ ಏರಿಕೆ ಕಳವಳ ಮೂಡಿಸಿದೆ. ಅ.13ರಿಂದ 26ರ ಅವಧಿಯಲ್ಲಿ ಪಶ್ಚಿಮ ಬಂಗಾಳದಲ್ಲಿ 10,355 ಪ್ರಕರಣಗಳು ವರದಿಯಾಗಿವೆ. ಹಬ್ಬದ ಸಂದರ್ಭದಲ್ಲಿ ನಿರ್ಬಂಧಗಳ ಸಡಿಲಿಕೆಯೇ ಪ್ರಕರಣಗಳ ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. 

ಶೇ 80ರಷ್ಟು ಜನರಿಗೆ ಲಸಿಕೆ  ಹಾಕಿಸಿರುವ ಬ್ರಿಟನ್‌ನಲ್ಲಿ ಪ್ರಕರಣಗಳು ಏರಿಕೆ ಆಗಿವೆ. ಮಕ್ಕಳಲ್ಲಿಯೇ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಶಾಲೆಗಳು ಆರಂಭವಾಗಿದ್ದು ಮತ್ತು 18ರ ಒಳಗಿನವರ ಲಸಿಕೆ ಅಭಿಯಾನ ನಿಧಾನವಾಗಿರುವುದು ಇದಕ್ಕೆ ಕಾರಣ. ಭಾರತದಲ್ಲಿಯೂ ಅದೇ ಪರಿಸ್ಥಿತಿ ಇದೆ. ಬ್ರಿಟನ್‌, ಚೀನಾ ಮತ್ತು ಇತರ ದೇಶಗಳಲ್ಲಿ ಎ.ವೈ. 4.2 ಎಂಬ  ಹೆಸರಿನ ಡೆಲ್ಟಾ ರೂಪಾಂತರ ವೈರಸ್‌, ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿಯೂ ಈ ವೈರಾಣು ಪತ್ತೆ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು