ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗ ನಜೀರ್‌ ಆಂಧ್ರ ರಾಜ್ಯಪಾಲ

ರಾಷ್ಟ್ರಪತಿ ಮುರ್ಮು ಆದೇಶ: ಆರು ಹೊಸ ಮುಖಗಳಿಗೆ ಹೊಣೆ–ಕೆಲವರ ವರ್ಗಾವಣೆ
Last Updated 12 ಫೆಬ್ರುವರಿ 2023, 16:12 IST
ಅಕ್ಷರ ಗಾತ್ರ

ನವದೆಹಲಿ: ಕನ್ನಡಿಗ ಹಾಗೂ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಮೂಡುಬಿದಿರೆಯ ಸೈಯದ್‌ ಅಬ್ದುಲ್‌ ನಜೀರ್‌ ಅವರು ಆಂಧ್ರಪ್ರದೇಶದ ರಾಜ್ಯಪಾಲರಾಗಿ ಭಾನುವಾರ ನೇಮಕಗೊಂಡಿದ್ದಾರೆ. ಇದಕ್ಕೆ ವಿವಿಧ ರಾಜಕೀಯ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಿಜೆಪಿಯ ನಾಲ್ವರು ಮುಖಂಡರು ಸೇರಿದಂತೆ ಒಟ್ಟು ಆರು ಮಂದಿ ಹೊಸಬರನ್ನು ಈ ಹುದ್ದೆಗೆ ನೇಮಿಸಿದ್ದಾರೆ.

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ 65 ವರ್ಷದ ನಜೀರ್‌ ಅವರು 2017ರ ಫೆಬ್ರುವರಿ 17ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು. ಈ ವರ್ಷದ ಜನವರಿ 4ರಂದು ಅವರು ನಿವೃತ್ತರಾಗಿದ್ದರು.

ನಜೀರ್‌ ಅವರು ಹಲವು ಸಾಂವಿಧಾನಿಕ ‍ಪೀಠಗಳ ಭಾಗವಾಗಿದ್ದರು. ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿ ಹಾಗೂ ಬಾಬರಿ ಮಸೀದಿಗೆ ಸಂಬಂಧಿಸಿದ ವಿವಾದದ ಕುರಿತು 2019ರಲ್ಲಿ ಸುಪ್ರೀಂ ಕೋರ್ಟ್‌ ಚಾರಿತ್ರಿಕ ತೀರ್ಪು ಪ್ರಕಟಿಸಿತ್ತು. ಆಗಿನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಐವರು ಸದಸ್ಯರನ್ನೊಳಗೊಂಡ ಸಾಂವಿಧಾನಿಕ ನ್ಯಾಯಪೀಠದಲ್ಲಿ ನಜೀರ್‌ ಅವರೂ ಇದ್ದರು. ತ್ರಿವಳಿ ತಲಾಖ್‌, ಖಾಸಗಿತನದ ಹಕ್ಕು ಕೂಡ ಮೂಲಭೂತ ಹಕ್ಕು, ದಾಖಲಾತಿ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಮರಾಠರಿಗೆ ಮೀಸಲಾತಿ ಕಲ್ಪಿಸಿ ತೀರ್ಪು ಪ್ರಕಟಿಸಿದ್ದ ಸುಪ್ರೀಂ ಕೋರ್ಟ್‌ನ ನ್ಯಾಯಪೀಠಗಳಲ್ಲೂ ಅವರಿದ್ದರು.

₹500 ಹಾಗೂ ₹1,000 ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಕಾನೂನುಬದ್ಧವಾಗಿದೆ ಎಂದು ಈ ವರ್ಷ ತೀರ್ಪು ನೀಡಿದ್ದ ಸಾಂವಿಧಾನಿಕ ಪೀಠದ ನೇತೃತ್ವವನ್ನು ನಜೀರ್‌ ಅವರು ವಹಿಸಿದ್ದರು.

ಇತರ ರಾಜ್ಯಪಾಲರು: ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಕೈವಲ್ಯ ತ್ರಿವಿಕ್ರಮ ಪರ್‌ನಾಯಕ್‌ ಅವರನ್ನು ಅರುಣಾಚಲಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಪರ್‌ನಾಯಕ್‌ ಅವರು ಸೇನೆಯ ಉತ್ತರ ಕಮಾಂಡ್‌ನ ಕಮಾಂಡರ್‌ ಆಗಿ ಕೆಲಸ ಮಾಡಿದ್ದರು. ಇವರ ಕಾಲಾವಧಿಯಲ್ಲಿ ಪಾಕಿಸ್ತಾನದ ಸೇನೆಯು ಪೂಂಚ್‌ ಸೆಕ್ಟರ್‌ನಲ್ಲಿ ಭಾರತದ ಇಬ್ಬರು ಸೈನಿಕರನ್ನು ಹತ್ಯೆ ಮಾಡಿ ಅವರ ಮೃತದೇಹಗಳನ್ನು ವಿರೂಪಗೊಳಿಸಿತ್ತು.

ಬಿಜೆಪಿ ಮುಖಂಡರಾದ ಲಕ್ಷ್ಮಣ ಪ್ರಸಾದ್‌ ಆಚಾರ್ಯ, ಸಿ.ಪಿ.ರಾಧಾಕೃಷ್ಣನ್‌, ಶಿವಪ್ರತಾಪ್‌ ಶುಕ್ಲಾ ಮತ್ತು ಗುಲಾಬ್‌ಚಂದ್‌ ಕಟಾರಿಯಾ ಅವರನ್ನು ಕ್ರಮವಾಗಿ ಸಿಕ್ಕಿಂ, ಜಾರ್ಖಂಡ್‌, ಹಿಮಾಚಲಪ್ರದೇಶ ಮತ್ತು ಅಸ್ಸಾಂ ರಾಜ್ಯ‍ಪಾಲರನ್ನಾಗಿ ನೇಮಕ ಮಾಡಲಾಗಿದೆ.

ಆಚಾರ್ಯ ಅವರು ಉತ್ತರಪ್ರದೇಶ ವಿಧಾನಪರಿಷತ್‌ನ ಸದಸ್ಯರಾಗಿದ್ದರು. ರಾಧಾಕೃಷ್ಣನ್‌ ಅವರು ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡು ಬಾರಿ ಗೆದ್ದಿದ್ದರು.

ಕೇಂದ್ರ ಹಣಕಾಸು ರಾಜ್ಯ ಖಾತೆ ಸಚಿವರಾಗಿದ್ದ ಶುಕ್ಲಾ ಅವರು ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರಾಗಿದ್ದರು. 2022ರಲ್ಲಿ ಅವರು ನಿವೃತ್ತರಾಗಿದ್ದರು. ಕಟಾರಿಯಾ ಅವರು ರಾಜಸ್ಥಾನ ವಿಧಾನಸಭೆಯಲ್ಲಿ ಹಾಲಿ ವಿರೋಧ ಪಕ್ಷದ ನಾಯಕರಾಗಿದ್ದರು. ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೃಹ ಸಚಿವರಾಗಿ ಕೆಲಸ ಮಾಡಿದ್ದರು.

ರಾಜಸ್ಥಾನದಲ್ಲಿ ಈ ವರ್ಷದ ನವೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಒಂದೊಮ್ಮೆ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಗಾದಿಯ ಸ್ಪರ್ಧೆಯಲ್ಲಿ ಕಟಾರಿಯಾ ಹೆಸರು ಕೇಳಿಬರಬಹುದು. ಆಗ ಆಂತರಿಕ ಬೇಗುದಿ ಉಂಟಾಗುವುದನ್ನು ತಪ್ಪಿಸಲು ಹೈಕಮಾಂಡ್‌ ಕಟಾರಿಯಾ ಅವರನ್ನು ರಾಜ್ಯಪಾಲರ ಹುದ್ದೆಗೆ ನೇಮಿಸುವ ನಿರ್ಧಾರ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗಿದೆ.

ಹಲವರು ವರ್ಗಾವಣೆ: ಆಂಧ್ರಪ್ರದೇಶ ರಾಜ್ಯಪಾಲರಾಗಿದ್ದ ವಿಶ್ವಭೂಷಣ್‌ ಹರಿಚಂದನ್‌ ಅವರನ್ನು ಛತ್ತೀಸಗಢಕ್ಕೆ, ಜಾರ್ಖಂಡ್‌ ರಾಜ್ಯಪಾಲರಾಗಿದ್ದ ರಮೇಶ್‌ ಬೈಸ್‌ ಅವರನ್ನು ಮಹಾರಾಷ್ಟ್ರಕ್ಕೆ, ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ನಿವೃತ್ತ ಬ್ರಿಗೇಡಿಯರ್‌ ಬಿ.ಡಿ.ಮಿಶ್ರಾ ಅವರನ್ನು ಲಡಾಖ್‌ನ ಲೆಫ್ಟಿನೆಂಟ್‌ ಗವರ್ನರ್‌ ಆಗಿ ವರ್ಗಾಯಿಸಲಾಗಿದೆ.

ಅನುಸೂಯಿಯಾ ಉಯಿಕೆ ಅವರನ್ನು ಛತ್ತೀಸಗಢದಿಂದ ಮಣಿಪುರಕ್ಕೆ, ಲಾ ಗಣೇಶನ್‌ ಅವರನ್ನು ಮಣಿಪುರದಿಂದ ನಾಗಾಲ್ಯಾಂಡ್‌ಗೆ, ಫಗು ಚೌಹಾಣ್‌ ಅವರನ್ನು ಬಿಹಾರದಿಂದ ಮೇಘಾಲಯಕ್ಕೆ ಮತ್ತು ರಾಜೇಂದ್ರ ವಿಶ್ವನಾಥ್‌ ಅರಳೇಕರ್‌ ಅವರನ್ನು ಹಿಮಾಚಲ ಪ್ರದೇಶದಿಂದ ಬಿಹಾರಕ್ಕೆ ವರ್ಗಾವಣೆ ಮಾಡಲಾಗಿದೆ.

ಇದೇ ಮೊದಲಲ್ಲ

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದ್ದವರು ರಾಜ್ಯಪಾಲರ ಹುದ್ದೆಗೆ ಏರಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೆಲವರು ಈ ಹುದ್ದೆಗೆ ನೇಮಕಗೊಂಡಿದ್ದರು.

ನಿವೃತ್ತ ನ್ಯಾಯಮೂರ್ತಿ ಎಸ್‌.ಫಜಲ್‌ ಅಲಿ ಅವರು ಒಡಿಶಾ (1952–54) ಮತ್ತು ಅಸ್ಸಾಂ (1956–59) ರಾಜ್ಯಪಾಲರಾಗಿ ಕೆಲಸ ಮಾಡಿದ್ದರು. ನಿವೃತ್ತ ನ್ಯಾಯಮೂರ್ತಿ ಫಾತಿಮಾ ಬೀವಿ ಅವರು 1997ರಲ್ಲಿ ತಮಿಳುನಾಡು ರಾಜ್ಯಪಾಲರಾಗಿ ನೇಮಕಗೊಂಡಿದ್ದರು. ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ಅವರು 2014ರ ಸೆಪ್ಟೆಂಬರ್‌ನಿಂದ 2019ರವರೆಗೆ ಕೇರಳ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು.

**

ಕೋಶಿಯಾರಿ, ಮಾಥುರ್‌ ರಾಜೀನಾಮೆ

ಮುಂಬೈ: ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಹಾಗೂ ಲಡಾಖ್‌ನ ಲೆಫ್ಟಿನೆಂಟ್‌ ಗವರ್ನರ್‌ ಆರ್‌.ಕೆ.ಮಾಥುರ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದನ್ನು ರಾಷ್ಟ್ರಪತಿ ಅಂಗೀಕರಿಸಿದ್ದಾರೆ.

80 ವರ್ಷದ ಕೋಶಿಯಾರಿ ಅವರು ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಘಾಡಿ ಸರ್ಕಾರದ ಜೊತೆಗಿನ ಸಂಘರ್ಷದಿಂದಲೇ ಸದಾ ಸುದ್ದಿಯಲ್ಲಿದ್ದರು.

‘ಛತ್ರಪತಿ ಶಿವಾಜಿ ಮಹಾರಾಜ ಹಳೆಯ ಕಾಲದ ಐಕಾನ್’ ಎಂದು ಅವರು ಇತ್ತೀಚೆಗೆ ಹೇಳಿದ್ದರು. ಈ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿತ್ತು. ಅವರನ್ನು ರಾಜ್ಯಪಾಲರ ಸ್ಥಾನದಿಂದ ಕೆಳಗಿಳಿಸುವಂತೆ ವಿರೋಧ ಪಕ್ಷಗಳ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರಿದ್ದರು. ಅವರ ಹೇಳಿಕೆಯಿಂದ ಏಕನಾಥ ಶಿಂದೆ– ದೇವೇಂದ್ರ ಫಡಣವೀಸ್‌ ಅವರ ಸರ್ಕಾರವೂ ಮುಜುಗರಕ್ಕೀಡಾಗಿತ್ತು.

ಮಾಥುರ್‌ ಅವರು ಇತ್ತೀಚೆಗೆ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದ್ದರು. ಶಿಕ್ಷಣ ಸುಧಾರಕ ಸೋನಮ್‌ ವಾಂಗ್‌ಚುಕ್‌ ಅವರು ಮಾಥುರ್‌ ವಿರುದ್ಧ ಕಿಡಿಕಾರಿದ್ದರು.

***

ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ನಜೀರ್‌ ಅವರಿಗೆ ಸ್ವಾಗತ. ನಿಮ್ಮೊಂದಿಗೆ ಕೆಲಸ ಮಾಡಲು ಕಾತರನಾಗಿದ್ದೇನೆ–

– ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ, ಆಂಧ್ರಪ್ರದೇಶ ಮುಖ್ಯಮಂತ್ರಿ

ನಜೀರ್‌ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಿರುವುದು ಈ ದೇಶದ ಸಾಂವಿಧಾನಿಕ ಮೌಲ್ಯಕ್ಕೆ ವಿರುದ್ಧವಾದುದು. ಇದು ಖಂಡನಾರ್ಹ ನಡೆ. ನಜೀರ್‌ ಅವರು ಈ ಅವಕಾಶ ತಿರಸ್ಕರಿಸಲಿ

–ಎ.ಎ.ರಹೀಂ, ರಾಜ್ಯಸಭೆ ಸದಸ್ಯ, ಸಿಪಿಎಂ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT