ಗುರುವಾರ , ಆಗಸ್ಟ್ 18, 2022
23 °C

ನದಿಗೆ ಶವ ಎಸೆತ ತಡೆಗೆ ರಾಜ್ಯಗಳಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಗಂಗಾ ನದಿಗೆ ಮೃತದೇಹಗಳನ್ನು ಎಸೆಯುವುದನ್ನು ತಡೆಗಟ್ಟಲು ಮತ್ತು ಅವುಗಳ ಸುರಕ್ಷಿತ ವಿಲೇವಾರಿಗೆ ಗಮನಹರಿಸಿ, ಗೌರವಯುತ ಅಂತ್ಯಕ್ರಿಯೆಗೆ ಏರ್ಪಾಡು ಮಾಡುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಭಾನುವಾರ ನಿರ್ದೇಶಿಸಿದೆ.

ಮೃತದೇಹಗಳನ್ನು ಎಸೆಯುವುದನ್ನು ತಡೆಗಟ್ಟುವುದು, ಅವುಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು ಮತ್ತು ನೀರಿನ ಗುಣಮಟ್ಟವನ್ನು ರಕ್ಷಿಸುವ ಕೆಲಸಗಳನ್ನು ಯುದ್ಧೋಪಾದಿಯಲ್ಲಿ ನಡೆಸಬೇಕಿದೆ ಎಂದು ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ತಿಳಿಸಿದರು.

ಉತ್ತರ ಪ್ರದೇಶ ಮತ್ತು ಬಿಹಾರದ ಮೂಲಕ ಹರಿಯುವ ಗಂಗಾ ನದಿಯಲ್ಲಿ ಮೃತ ದೇಹಗಳು ಮತ್ತು ಭಾಗಶಃ ಸುಟ್ಟ ಶವಗಳು ಹೆಚ್ಚಿನ ಪ್ರಮಾಣದಲ್ಲಿ ತೇಲುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರವು ಈ ಸೂಚನೆಗಳನ್ನು ನೀಡಿದೆ. ಸಚಿವಾಲಯದ ಕಾರ್ಯದರ್ಶಿ ಪಂಕಜ್ ಕುಮಾರ್ ಅವರು ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ರಾಜ್ಯಗಳಿಗೆ ಸೂಚನೆಗಳನ್ನು ರವಾನಿಸಿದರು.

ಈ ದಿಸೆಯಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಎಂದು ತಿಳಿಸಿದ ಅವರು, ಗಂಗಾ ಮತ್ತು ಇತರ ನದಿಗಳ ಉದ್ದಕ್ಕೂ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಘಟನೆಗಳಿಗೆ ಸಮಾನ ಗಮನ ನೀಡುವ ಅಗತ್ಯವಿದೆ ಎಂದು ಒತ್ತಿಹೇಳಿದರು.

ರಾಜ್ಯಗಳ ಪ್ರಗತಿಯನ್ನು ತಿಳಿದ ನಂತರ, ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ), ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಸಹ ತಮ್ಮ ಪ್ರತಿಕ್ರಿಯೆ ಮತ್ತು ಕ್ರಿಯಾ ಯೋಜನೆಗಳನ್ನು ನೀಡಲಿವೆ ಎಂದು ಅವರು ಹೇಳಿದರು.

ಕೋವಿಡ್‌ ವಿರುದ್ಧ ದೇವರಿಗೆ ಮೊರೆ

ಲಖನೌ: ಉತ್ತರ ಪ್ರದೇಶದ ಗ್ರಾಮೀಣ ಭಾಗದಲ್ಲಿ ಕೋವಿಡ್‌ ವಿಪರೀತವಾಗಿ ಪಸರಿಸುತ್ತಿದ್ದಂತೆಯೇ ರೋಗ ತಡೆಗಾಗಿ ಜನರು ಅತಿಮಾನುಷ ಶಕ್ತಿಗಳ ಮೊರೆಹೋಗಲು ಆರಂಭಿಸಿದ್ದಾರೆ.

ವಾರಾಣಸಿ, ಖುಷಿನಗರ್‌, ಮವು ಮುಂತಾದ ಜಿಲ್ಲೆಗಳಲ್ಲಿ ಜನರು ಸಾಮೂಹಿಕ ಭಜನೆ, ವಿಶೇಷ ಪೂಜೆ, ಹೋಮ–ಹವನಗಳನ್ನು ನಡೆಸುತ್ತಿದ್ದಾರೆ. ಮವು ಜಿಲ್ಲೆಯಲ್ಲಿ ಮಹಿಳೆಯರು ದೀಹ್ ಬಾಬಾ ಮಂದಿರ, ಕಾಳಿ ಮಂದಿರಗಳಲ್ಲಿ ವಿಶೇಷ ಅಭಿಷೇಕ (ಧಾರ್‌) ನಡೆಸುತ್ತಿದ್ದಾರೆ. ವಾರಾಣಸಿಯ ಘಾಟ್‌ಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ಇವುಗಳಲ್ಲಿ ಸುತ್ತಮುತ್ತಲಿನ ಪ್ರದೇಶಗಳ ನೂರಾರು ಮಹಿಳೆಯರು ಪಾಲ್ಗೊಳ್ಳುತ್ತಿದ್ದಾರೆ.

‘ದೀಹ ಬಾಬಾ ಅವರು ಕೋವಿಡ್‌ನಿಂದ ನಮ್ಮ ಗ್ರಾಮವನ್ನು ರಕ್ಷಿಸುತ್ತಾರೆ ಎಂಬ ನಂಬಿಕೆ ಈ ಭಾಗದ ಜನರಲ್ಲಿ ಇದೆ’ ಎಂದು ಸ್ಥಳೀಯರಾದ ಬ್ರಹ್ಮಾನಂದ ಪಾಂಡೆ ಹೇಳಿದ್ದಾರೆ.

ದುಮರಿ ಮಾಳವಾ ಗ್ರಾಮದ ದೇವಸ್ಥಾನಗಳಲ್ಲಿ ನೂರಾರು ಮಹಿಳೆಯರು ವಿಶೇಷ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿರುವುದು ವರದಿಯಾಗಿದೆ. ಆದರೆ ಅವರಲ್ಲಿ ಯಾರೊಬ್ಬರೂ ಮಾಸ್ಕ್‌ ಧರಿಸುವುದಾಗಲಿ, ಅಂತರ ಕಾಪಾಡುವುದಾಗಲಿ ಮಾಡಲಿಲ್ಲ. ಇದರಿಂದಾಗಿ ಇಂಥ ಧಾರ್ಮಿಕ ಕಾರ್ಯಕ್ರಮಗಳಿಂದಲೇ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌ ಇನ್ನಷ್ಟು ಪಸರಿಸಬಹುದೆಂಬ ಭೀತಿ ಎದುರಾಗಿದೆ.

‘ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಕೋವಿಡ್‌ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು