ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಅಗ್ನಿಪಥ' ವಿರೋಧಿಸಿ ಬಿಹಾರದಲ್ಲಿ ಪ್ರತಿಭಟನೆ; ರಸ್ತೆಗಿಳಿದ ಉದ್ಯೋಗಾಕಾಂಕ್ಷಿಗಳು

ಅಕ್ಷರ ಗಾತ್ರ

ನವದೆಹಲಿ: 'ಅಗ್ನಿಪಥ' ಯೋಜನೆ ಅಡಿಯಲ್ಲಿ ಸೇನೆಗೆ 'ಅಗ್ನಿವೀರರ' (ಯೋಧರು) ನೇಮಕಾತಿ ನಡೆಸುವುದಾಗಿ ಕೇಂದ್ರ ಸರ್ಕಾರವು ಎರಡು ದಿನಗಳ ಹಿಂದಷ್ಟೇ ಪ್ರಕಟಿಸಿದ್ದು, ಅದಕ್ಕೆ ಬಿಹಾರ ಮತ್ತು ರಾಜಸ್ಥಾನದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಉದ್ಯೋಗ ಭದ್ರತೆ ಮತ್ತು ಪಿಂಚಣಿ ವಿಚಾರವಾಗಿ ಕಳವಳ ವ್ಯಕ್ತಪಡಿಸಿರುವ ಉದ್ಯೋಗಾಕಾಂಕ್ಷಿಗಳು ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ.

ದೇಶದ ಸಶಸ್ತ್ರ ಪಡೆಗಳು ತಾರುಣ್ಯಯುತವಾಗಿ ಇರುವಂತೆ ನೋಡಿಕೊಳ್ಳುವುದುಹೊಸ ಯೋಜನೆಯ ಉದ್ದೇಶ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ನಾಲ್ಕು ವರ್ಷಗಳ ಕರ್ತವ್ಯ ಅವಧಿಯ ಮಿತಿ ಮತ್ತು ಬಳಿಕ ಶೇಕಡ 25ರಷ್ಟು ಯೋಧರಿಗೆ ಮಾತ್ರ ಪೂರ್ಣಾವಧಿ ಸೇವೆಗೆ ಅವಕಾಶ ಕಲ್ಪಿಸುವ ಕ್ರಮದ ವಿರುದ್ಧ ಸೇನೆ ಸೇರುವ ಹಂಬಲವಿರುವ ಅಭ್ಯರ್ಥಿಗಳು ದನಿ ಎತ್ತಿದ್ದಾರೆ.

ನಾಲ್ಕು ವರ್ಷಗಳ ಕರ್ತವ್ಯದ ಬಳಿಕ ಪ್ರತಿ ಅಗ್ನಿವೀರನಿಗೆ ಸುಮಾರು ₹11.71 ಲಕ್ಷದ ನಿಧಿಯು ದೊರೆಯಲಿದೆ. ಅವರಿಗೆ ಪಿಂಚಣಿ ವ್ಯವಸ್ಥೆ ಇರುವುದಿಲ್ಲ. ಮೊದಲ ವರ್ಷದಲ್ಲಿ 46 ಸಾವಿರ ಯುವಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಸರ್ಕಾರ ಹೇಳಿದೆ.

'ನಾಲ್ಕು ವರ್ಷದ ನಂತರ ಕಾಯಂ ನೇಮಕಾತಿಯಲ್ಲಿ ಅವಕಾಶ ಪಡೆಯಲು ಸಾಧ್ಯವಾಗದಿದ್ದರೆ, ಅವರಭವಿಷ್ಯದ ಗತಿ ಏನು?' ಎಂದು ಪ್ರಶ್ನಿಸಿರುವ ಉದ್ಯೋಗಾಕಾಂಕ್ಷಿಗಳು, ಸರ್ಕಾರದ ಈ ಯೋಜನೆಯನ್ನು ಟೀಕಿಸಿದ್ದಾರೆ.

ಬಿಹಾರದ ಆರಾ ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ. ಯುವಜನರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.ರೈಲಿನ ಬೋಗಿಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿರುವುದಾಗಿಯೂ ವರದಿಯಾಗಿದೆ.

'ಸೇನಾ ಪಡೆಗಳಿಗೆಸೇರಲು ನಾವು ಸಾಕಷ್ಟು ಶ್ರಮವಹಿಸಿರುತ್ತೇವೆ. ಆದರೆ, ಹಲವು ತಿಂಗಳ ತರಬೇತಿ ಮತ್ತು ರಜೆಗಳ ನಡುವೆ ಸೇವೆಯ ಅವಧಿಯನ್ನು ಕೇವಲ ನಾಲ್ಕು ವರ್ಷಗಳಿಗೆ ಮಿತಿಗೊಳಿಸಿರುವುದು ಹೇಗೆ? ಸರ್ಕಾರವು ಈ ಯೋಜನೆಯನ್ನು ಹಿಂಪಡೆಯಬೇಕು' ಎಂದು ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ.

'ಕೇವಲ ನಾಲ್ಕು ವರ್ಷಗಳ ಕರ್ತವ್ಯದ ಬಳಿಕನಾವು ಎಲ್ಲಿಗೆ ಹೋಗುವುದು? ನಾಲ್ಕು ವರ್ಷಗಳ ಸೇವೆಯ ನಂತರ ನಾವು ನಿರಾಶ್ರಿತರಾಗುತ್ತೇವೆ. ಹಾಗಾಗಿಯೇ ನಾವು ರಸ್ತೆ ತಡೆ ನಡೆಸಿದ್ದೇವೆ; ದೇಶದ ಮುಖಂಡರಿಗೆ ಈ ಮೂಲಕ ಜನರು ಜಾಗೃತರಾಗಿರುವುದು ತಿಳಿಯುತ್ತದೆ' ಎಂದು ಬಿಹಾರದ ಮತ್ತೊಬ್ಬ ಪ್ರತಿಭಟನಾಕಾರ ಪ್ರತಿಕ್ರಿಯಿಸಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ಟ್ವೀಟಿಸಿದೆ.

ಸೇನೆಗೆ ಸೇರಲು ಬಯಸಿರುವ ಅಭ್ಯರ್ಥಿಗಳು ಮುಜಾಫರ್‌ಪುರದಲ್ಲಿ ಒಂದು ಕಡೆ ಪ್ರತಿಭಟನೆ ನಡೆಸಿದ್ದಾರೆ. ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸುವ 'ಚಕ್ಕರ್‌ ಮೈದಾನದಲ್ಲಿ' ನೂರಾರು ಮಂದಿ ಉದ್ಯೋಗಾಕಾಂಕ್ಷಿಗಳು ಸೇರಿ, ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಕಡೆ ಬಸ್‌ ಹಾಗೂ ಇತರೆ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿರುವುದು ವರದಿಯಾಗಿದೆ.

ಬಕ್ಸರ್‌ನಲ್ಲಿ ರೈಲು ತಡೆ....

ಬಿಹಾರದ ಬಕ್ಸರ್‌ ಜಿಲ್ಲೆಯಲ್ಲಿ ನೂರಾರು ಮಂದಿ ಯುವಕರು ರೈಲ್ವೆ ನಿಲ್ದಾಣಕ್ಕೆ ಬಂದು, ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಪಟನಾದಿಂದ ಹೊರಟ ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲನ್ನು 30 ನಿಮಿಷ ತಡೆದರು. ಅಗ್ನಿಪಥ ಯೋಜನೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.

ಅಜ್ಮೀರ್–ದೆಹಲಿ ಹೆದ್ದಾರಿ ತಡೆ

ರಾಜಸ್ಥಾನದ ಜೈಪುರದಲ್ಲಿ ಸುಮಾರು 150 ಮಂದಿ ಅಜ್ಮೀರ್‌–ದೆಹಲಿ ಹೆದ್ದಾರಿ ತಡೆ ನಡೆಸುವ ಮೂಲಕ ಬುಧವಾರ ಪ್ರತಿಭಟನೆ ನಡೆಸಿದ್ದರು.

ಪ್ರಸ್ತುತ ಜಾರಿಯಲ್ಲಿರುವ ನೇಮಕಾತಿ ಕ್ರಮವನ್ನೇ ಅನುಸರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದರು. ಪೊಲೀಸರು ಪ್ರತಿಭಟನಾಕಾರರನ್ನು ಸ್ಥಳದಿಂದ ತೆರವುಗೊಳಿಸಿದ್ದು, 10 ಮಂದಿಯನ್ನು ಬಂಧಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಅಗ್ನಿವೀರರಿಗೆ ಮೂರು ವರ್ಷಗಳ ಪದವಿ

ಕೇಂದ್ರ ಸರ್ಕಾರದ 'ಅಗ್ನಿಪಥ' ಯೋಜನೆ ಅಡಿಯಲ್ಲಿ ಸೇನೆಗೆ ಸೇರುವ ಅಗ್ನಿವೀರರಿಗೆ ಕೌಶಲ ಆಧಾರಿತ ಮೂರು ವರ್ಷಗಳ ವಿಶೇಷ ಪದವಿ ಕೋರ್ಸ್‌ ಅನ್ನು ಕೇಂದ್ರ ಶಿಕ್ಷಣ ಸಚಿವಾಲಯ ಆರಂಭಿಸಲಿದೆ. ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ ಈ ಪದವಿ ಕೋರ್ಸ್‌ ಅನ್ನು ಆರಂಭಿಸಲಿದ್ದು, ಇದಕ್ಕೆ ಭಾರತ ಮತ್ತು ವಿದೇಶಗಳಲ್ಲಿ ಮಾನ್ಯತೆ ದೊರೆಯಲಿದೆ.

ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಈ ಕಾರ್ಯಕ್ರಮ ಜಾರಿಗೆ ಇಗ್ನೊ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಿವೆ. ಅಗ್ನಿವೀರರು ಪಡೆಯುವ ಸೇವಾ ತರಬೇತಿಯನ್ನು ಪದವಿ ಕೋರ್ಸ್‌ನಲ್ಲಿ ಕ್ರೆಡಿಟ್‌ಗಳಾಗಿ ಗುರುತಿಸಲಾಗುತ್ತದೆ. ಈ ಮೂಲಕ ಅವರು ತಮ್ಮ ಭವಿಷ್ಯದಲ್ಲಿ ತಮಗಿಷ್ಟವಾದ ನಾಗರಿಕ ವೃತ್ತಿಜೀವನ ಆಯ್ಕೆ ಮಾಡಿಕೊಳ್ಳಲು ಅವಕಾಶ ದೊರೆಯುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT