ಶನಿವಾರ, ಫೆಬ್ರವರಿ 27, 2021
30 °C

ಹಿಂಸಾಚಾರ ಪರಿಣಾಮ| ರೈತ ಚಳವಳಿಯಲ್ಲಿ ಬಿರುಕು, 2 ಸಂಘಟನೆಗಳು ಹಿಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ರೈತ ಗಣರಾಜ್ಯೋತ್ಸವ’ದ ಟ್ರ್ಯಾಕ್ಟರ್‌ ರ‍್ಯಾಲಿಯಲ್ಲಿನ ಹಿಂಸಾಚಾರವು ರೈತ ಸಂಘಟನೆಗಳ ನಡುವೆ ಬಿರುಕಿಗೆ ಕಾರಣವಾಗಿದೆ. ಕೇಂದ್ರದ ಮೂರು ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದ ಭಾರತೀಯ ಕಿಸಾನ್‌ ಯೂನಿಯನ್‌ (ಭಾನು) ಮತ್ತು ಕಿಸಾನ್‌ ಸಂಘರ್ಷ ಸಮಿತಿಯು ಹೋರಾಟದಿಂದ ಹಿಂದೆ ಸರಿಯಲು ನಿರ್ಧರಿಸಿವೆ. 

ಟ್ರ್ಯಾಕ್ಟರ್‌ ರ್‍ಯಾಲಿಯಲ್ಲಿ ಆಗಿರುವ ಹಿಂಸಾಚಾರದಿಂದ ಬಹಳ ನೋವಾಗಿದೆ. ಹಾಗಾಗಿ, ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವುದಾಗಿ ಭಾರತೀಯ ಕಿಸಾನ್‌ ಯೂನಿಯನ್‌ನ (ಭಾನು) ಅಧ್ಯಕ್ಷ ಠಾಕೂರ್‌ ಭಾನು ಪ್ರತಾಪ್‌ ಸಿಂಗ್‌ ಹೇಳಿದ್ದಾರೆ. ಈ ಸಂಘಟನೆಯು ದೆಹಲಿಯ ಚಿಲ್ಲಾ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ. 

‘ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಕೆಲವರ ದಿಕ್ಕು ಬೇರೆ ಎಂಬುದು ತಿಳಿದ ಮೇಲೆ ಹೋರಾಟದಲ್ಲಿ ಮುಂದುವರಿಯಲಾಗದು’ ಎಂದು ಕಿಸಾನ್‌ ಸಂಘರ್ಷ ಸಮಿತಿಯ ವಿ.ಎಂ. ಸಿಂಗ್‌ ಹೇಳಿದ್ದಾರೆ. 

ಆದರೆ, 41 ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್‌ ಮೋರ್ಚಾವು ಕಿಸಾನ್‌ ಸಂಘರ್ಷ ಸಮಿತಿಯ ಬಗ್ಗೆ ಹರಿಹಾಯ್ದಿದೆ. ಶಾಂತಿಯುತ ಪ್ರತಿಭಟನೆಯನ್ನು ಹಾಳುಗೆಡವಲು ಈ ಸಂಘಟನೆಯು ಪಿತೂರಿ ನಡೆಸಿದೆ ಎಂದು ಹೇಳಿದೆ. ಪ್ರತಿಭಟನೆಯಿಂದ ಹಿಂದಕ್ಕೆ ಸರಿದಿರುವ ಎರಡೂ ಸಂಘಟನೆಗಳು ಸರ್ಕಾರದ ಪರವಾದ ನಿಲುವು ಹೊಂದಿವೆ ಎಂಬ ಆರೋಪವನ್ನೂ ಮಾಡಲಾಗಿದೆ. 

ರೈತರ ಶಾಂತಿಯುತ ಪ್ರತಿಭಟನೆಯು ಕೇಂದ್ರ ಸರ್ಕಾರವನ್ನು ಹತಾಶಗೊಳಿಸಿತ್ತು. ಹಾಗಾಗಿ, ಕಿಸಾನ್‌ ಸಂಘರ್ಷ ಸಮಿತಿಯು ದೀಪ್‌ ಸಿಧು ಅವರಂತಹ ಸಮಾಜಘಾತುಕ ವ್ಯಕ್ತಿಗಳ ಜತೆಗೆ ಸೇರಿಕೊಂಡು, ಪ್ರತಿಭಟನೆಗೆ ಕೆಟ್ಟ ಹೆಸರು ತರುವ ಷಡ್ಯಂತ್ರ ನಡೆಸಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಆಪಾದಿಸಿದೆ. 

ರೈತರು ದೆಹಲಿ ಗಡಿಗಳಲ್ಲಿ ಪ್ರತಿಭಟನೆ ಆರಂಭಿಸಿದಾಗ ಕಿಸಾನ್‌ ಸಂಘರ್ಷ ಸಮಿತಿಯು ಅದರ ಭಾಗವಾಗಿ ಇರಲಿಲ್ಲ. ಪ್ರತಿಭಟನೆ ಆರಂಭಗೊಂಡು 15 ದಿನಗಳ ಬಳಿಕ ಈ ಸಂಘಟನೆಯು ಸೇರಿಕೊಂಡಿತು. ‘ಹೊರ ವರ್ತುಲ ರಸ್ತೆಯಲ್ಲಿ ಸಾಗಿ, ಕೆಂಪು ಕೋಟೆಗೆ ಹೋಗಿ ಧ್ವಜಾರೋಹಣ ನಡೆಸುವುದಾಗಿ ಕಿಸಾನ್‌ ಸಂಘರ್ಷ ಸಮಿತಿಯು ಹೇಳಿತ್ತು. ಅದಕ್ಕೆ ಪೂರಕವಾಗಿ, ಈ ಸಂಘಟನೆಯ ಸದಸ್ಯರು ನಿಗದಿತ ಸಮಯಕ್ಕಿಂತ ಎರಡು ತಾಸು ಮೊದಲೇ ಮೆರವಣಿಗೆ ಆರಂಭಿಸಿದ್ದರು. ಶಾಂತ ಮತ್ತು ಪ್ರಬಲವಾಗಿದ್ದ ರೈತರ ಪ್ರತಿಭಟನೆಯನ್ನು ದುರ್ಬಲಗೊಳಿಸುವ ಬಹುದೊಡ್ಡ ಸಂಚು ಇದರ ಹಿಂದೆ ಇತ್ತು’ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿದೆ. 

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಆಯೋಗ ರಚಿಸಿ ಹಿಂಸಾಚಾರದ ಬಗ್ಗೆ ತನಿಖೆ ನಡೆಸಬೇಕು ಮತ್ತು ರೈತರನ್ನು ‘ಭಯೋತ್ಪಾದಕರು’ ಎಂದು ಬಿಂಬಿಸದಂತೆ ಮಾಧ್ಯಮಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಎರಡು ಅರ್ಜಿಗಳು ಸಲ್ಲಿಕೆಯಾಗಿವೆ.  

ಕಠಿಣ ಕ್ರಮಕ್ಕೆ ಮುಂದಾದ ಸರ್ಕಾರ

ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ದೆಹಲಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್‌ ರ್‍ಯಾಲಿಯ ಹಿಂಸಾಚಾರ ಪ್ರಕರಣವನ್ನು ಕಠಿಣವಾಗಿ ನಿರ್ವಹಿಸುವ ಸೂಚನೆಗಳನ್ನು ಕೇಂದ್ರ ಸರ್ಕಾರ ನೀಡಿದೆ. ರೈತರ ಚಳವಳಿಯ ಪ್ರಮುಖ ನಾಯಕರೂ ಸೇರಿದಂತೆ ಹಲವು ಮಂದಿಯ ವಿರುದ್ಧ 22 ದೂರುಗಳನ್ನು ದಾಖಲಿಸಲಾಗಿದೆ.

ಸಂಸತ್‌ ಚಲೋ ಅನುಮಾನ

ಕೇಂದ್ರ ಬಜೆಟ್ ಮಂಡನೆಯ ದಿನವಾದ ಫೆ.1ರಂದು ಸಂಸತ್ತಿನವರೆಗೆ ಬರಿಗಾಲ ಮೆರವಣಿಗೆ (ಸಂಸತ್‌ ಚಲೋ) ನಡೆಸಲು ರೈತ ಸಂಘಟನೆಗಳ ನಾಯಕರು ಯೋಜನೆ ಹಾಕಿಕೊಂಡಿದ್ದರು. ಆದರೆ, ಹಿಂಸಾಚಾರದ ಕಾರಣದಿಂದ ಈ ಮೆರವಣಿಗೆಯನ್ನು ಮುಂದೂಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್‌ ಮೋರ್ಚಾವು ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಸಹಜ ಸ್ಥಿತಿಗೆ ಸಿಂಘು ಗಡಿ

ಟ್ರ್ಯಾಕ್ಟರ್‌ ರ್‍ಯಾಲಿಯಲ್ಲಿ ಹಿಂಸಾಚಾರ ನಡೆದ ಮರುದಿನವಾದ ಬುಧವಾರವೂ ಸಿಂಘು ಗಡಿಯಲ್ಲಿನ ಪ್ರತಿಭಟನೆ ಎಂದಿನಂತೆ ಸಾಗಿದೆ. ಕೆಲವರು ಸಾಮೂಹಿಕ ಅಡುಗೆ ಮನೆಯ ಕೆಲಸಗಳಲ್ಲಿ ನಿರತರಾದರೆ, ಇನ್ನು ಕೆಲವರು ಮುಖಂಡರ ಭಾಷಣಗಳನ್ನು ಆಲಿಸಿದರು. ಎಲ್ಲೆಡೆಯೂ ಹಿಂಸಾಚಾರದ ಬಗ್ಗೆಯೇ ಮಾತು ಕೇಳಿ ಬರುತ್ತಿತ್ತು. 

‘ಮಂಗಳವಾರ ದೆಹಲಿಯಲ್ಲಿ ಆಗಿದ್ದರ ಹೆಸರಿನಲ್ಲಿ ನಮ್ಮ ಚಳವಳಿಗೆ ಏಕೆ ಮಸಿ ಬಳಿಯಬೇಕು. ಬಿಜೆಪಿ ಸರ್ಕಾರದ ಏಜೆಂಟರು ಈ ಹಿಂಸಾಚಾರದ ಹಿಂದೆ ಇದ್ದಾರೆ. ನಿಗದಿತ ಮಾರ್ಗವನ್ನು ಬಿಟ್ಟು ಹೋಗಲೇಬಾರದು ಎಂದು ನಮ್ಮ ಮುಖಂಡರು ಸ್ಪಷ್ಟವಾಗಿಯೇ ಹೇಳಿದ್ದರು. ಆದರೆ, ಕೆಲವರು ಉದ್ದೇಶಪೂರ್ವಕವಾಗಿಯೇ ನಿಗದಿತ ಮಾರ್ಗ ಬಿಟ್ಟುಹೋದರು’ ಎಂದು ಲೂಧಿಯಾನದ ರೈತ ಬಲವಿಂದರ್‌ ಸಿಂಗ್‌ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು