ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರಿಂದರ್ ಸಿಂಗ್ ರಾಜೀನಾಮೆ: ಪಂಜಾಬ್ ಸಿಎಲ್‌ಪಿ ಸಭೆ ಮುಂದಕ್ಕೆ

Last Updated 19 ಸೆಪ್ಟೆಂಬರ್ 2021, 7:15 IST
ಅಕ್ಷರ ಗಾತ್ರ

ಚಂಡೀಗಡ: ಪಂಜಾಬ್‌ ಕಾಂಗ್ರೆಸ್‌ನ ಕ್ಯಾಪ್ಟನ್ ಅಮರಿಂದರ್ ಸಿಂಗ್ ಶನಿವಾರ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನೂತನ ಮುಖ್ಯಮಂತ್ರಿಯ ಆಯ್ಕೆ ಸಂಬಂಧ ಭಾನುವಾರ ಬೆಳಿಗ್ಗೆ 11 ಗಂಟೆಗೆ ನಡೆಯಬೇಕಿದ್ದ ಪಂಜಾಬ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಮುಂದೂಡಲಾಗಿದೆ.

ಹೊಸ ನಾಯಕನ ಆಯ್ಕೆಯಲ್ಲಿ ಇನ್ನೂಒಮ್ಮತ ಮೂಡಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯನ್ನು ಮುಂದೂಡಲಾಗಿದೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಸುನೀಲ್ ಜಾಖಡ್, ಪ್ರಸ್ತುತ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ತೃಪ್ತ್‌ ರಾಜಿಂದರ್ ಸಿಂಗ್ ಬಾಜ್ವಾ ಮತ್ತು ಸುಖಜಿಂದರ್ ಸಿಂಗ್ ರಾಂಧವ ಅವರ ಹೆಸರುಗಳು ಮುಖ್ಯಮಂತ್ರಿ ಸ್ಥಾನಕ್ಕೆ ಹರಿದಾಡುತ್ತಿವೆ.

'ಪಕ್ಷದ ನಾಯಕತ್ವ ಏನೇ ನಿರ್ಧರಿಸಿದರೂ ನಾವು ಅದನ್ನು ಪಾಲಿಸುತ್ತೇವೆ' ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಪಂಜಾಬ್ ವ್ಯವಹಾರಗಳ ಉಸ್ತುವಾರಿ ಹರೀಶ್ ರಾವತ್ ಮತ್ತು ಪಕ್ಷದ ಕೇಂದ್ರ ವೀಕ್ಷಕರಾದ ಅಜಯ್ ಮಾಕನ್‌ ಮತ್ತು ಹರೀಶ್ ಚೌಧರಿ ಸದ್ಯ ರಾಜ್ಯದಲ್ಲಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಪಂಜಾಬ್‌ನ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿ ಎಂದು ಪಂಜಾಬ್ ಕಾಂಗ್ರೆಸ್‌ ಶಾಸಕಾಂಗ ಪಕ್ಷವು ಶನಿವಾರ ನಿರ್ಣಯ ಅಂಗೀಕರಿಸಿತ್ತು.

ಪಂಜಾಬ್‌ ವಿಧಾನಸಭೆಗೆ ನಾಲ್ಕೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಇದೇ ವೇಳೆ ಶನಿವಾರ ಸಂಜೆ 5 ಗಂಟೆಗೆ ನಡೆಯಬೇಕಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಕೆಲವೇ ನಿಮಿಷಗಳ ಮೊದಲು 79 ವರ್ಷದ ಅಮರಿಂದರ್ ಸಿಂಗ್ ರಾಜೀನಾಮೆ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಅಧಿಕಾರದ ಸಂಬಂಧ ಪಕ್ಷವು ಮೂರು ಬಾರಿ ಶಾಸಕಾಂಗ ಸಭೆ ಕರೆದಿದೆ. ನನ್ನ ಮೇಲಿನ ಅಪನಂಬಿಕೆಯಿಂದಲೇ ಹೀಗೆ ಮಾಡಲಾಗಿದೆ. ನನಗೆ ಅವಮಾನವಾಗಿದೆ. ಹೀಗಾಗಿ ರಾಜೀನಾಮೆ ನೀಡಿದೆ' ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT