ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗ್‌ಗೆ ಸಿಎಂ ಪಟ್ಟ, ಸಿಧುಗೆ ಪಕ್ಷದ ಚುಕ್ಕಾಣಿ: ಪಂಜಾಬ್‌ ಕಾಂಗ್ರೆಸ್‌ ಸೂತ್ರ

ಅಕ್ಷರ ಗಾತ್ರ

ನವದೆಹಲಿ: ಪಂಜಾಬ್‌ ಕಾಂಗ್ರೆಸ್‌ನ ಆಂತರಿಕ ಬಿಕ್ಕಟ್ಟು ಶಮನಗೊಳಿಸುವ ನಿಟ್ಟಿನಲ್ಲಿ ನವಜೋತ್‌ ಸಿಂಗ್‌ ಸಿಧು ಅವರಿಗೆ ಪಕ್ಷದ ರಾಜ್ಯ ಘಟಕದ ಚುಕ್ಕಾಣಿ ನೀಡಲು ಹೈಕಮಾಂಡ್ ನಿರ್ಧರಿಸಿದೆ. ಇದೇ ವೇಳೆ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸುವ ಒಮ್ಮತದ ತಂತ್ರವನ್ನು ಅನುಸರಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಪಂಜಾಬ್‌ ವಿಧಾನಸಭೆ ಸ್ಥಾನಗಳಿಗೆ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಪಕ್ಷದೊಳಗಿನ ಬಿಕ್ಕಟ್ಟು ಶಮನಗೊಳಿಸಲು ಕಾಂಗ್ರೆಸ್‌ ತಿಂಗಳಿಂದ ಹಲವು ಸಭೆಗಳನ್ನು ನಡೆಸಿತ್ತು. ಇತ್ತೀಚೆಗೆ ನವಜೋತ್‌ ಸಿಂಗ್‌ ದೆಹಲಿಯಲ್ಲಿ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಿದ್ದರು. ಅಮರಿಂದರ್‌ಸಿಂಗ್ ಅವರು ಸೋನಿಯಾ ಅವರನ್ನು ಭೇಟಿಯಾಗಿ 90 ನಿಮಿಷ ಚರ್ಚಿಸಿದ್ದರು. ಎರಡು ದಿನಗಳ ಹಿಂದೆ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ ಸಹ ರಾಹುಲ್‌ ಅವರೊಂದಿಗೆ ಮಾತುಕತೆ ನಡೆಸಿದ್ದರು. ಇದೀಗ ಹೈಕಮಾಂಡ್‌ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿದು ಬಂದಿದೆ.

ಅಮರಿಂದರ್‌ ಮತ್ತು ಸಿಧು ಜೊತೆಯಾಗಿ ಕಾರ್ಯಾಚರಣೆ ಮುಂದುವರಿಸಲಿದ್ದಾರೆ ಎಂದು ಪಂಜಾಬ್‌ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹರೀಶ್‌ ರಾವತ್‌ ಗುರುವಾರ ಹೇಳಿದ್ದಾರೆ.

'ಕಳೆದ ನಾಲ್ಕೂವರೆ ವರ್ಷಗಳಿಂದ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರು ನಮ್ಮ ಮುಖ್ಯಮಂತ್ರಿಯಾಗಿದ್ದಾರೆ, ಅವರ ನೇತೃತ್ವದಲ್ಲಿಯೇ ನಾವು ಚುನಾವಣೆ ಎದುರಿಸಲಿದ್ದೇವೆ' ಎಂದು ರಾವತ್‌ ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌, ಪಂಜಾಬ್‌ ಕಾಂಗ್ರೆಸ್‌ನ (ಪಿಸಿಸಿ) ಅಧ್ಯಕ್ಷರಾಗಿ ನವಜೋತ್‌ ಸಿಂಗ್‌ ಸಿಧು ಹಾಗೂ ಕಾಂಗ್ರೆಸ್‌ ಪಂಜಾಬ್‌ ಘಟಕವು ಹಿಂದೂ ಮತ್ತು ದಲಿತ ಸಮುದಾಯಗಳಿಂದ ಕಾರ್ಯಾಧ್ಯಕ್ಷರನ್ನು ಒಳಗೊಂಡಿರಲಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

'ಪಕ್ಷದ ನಿರ್ಧಾರಕ್ಕೆ ಬದ್ಧರಿರುವುದಾಗಿ ಅಮರಿಂದರ್‌ ಸಿಂಗ್‌ ಹೇಳಿದ್ದಾರೆ. ಸಿಧು ರಾಜ್ಯದ ಭವಿಷ್ಯ, ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಅಥವಾ ಹೇಳಿಕೆ ನೀಡುವಾಗ ಅವರು ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಉಭಯ ನಾಯಕರು ಜೊತೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಎರಡು–ಮೂರು ದಿನಗಳಲ್ಲಿ ಪಕ್ಷದ ನಿರ್ಧಾರ ಹೊರಬರಲಿದೆ' ಎಂದು ಹರೀಶ್‌ ರಾವತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT