ಬುಧವಾರ, ನವೆಂಬರ್ 25, 2020
21 °C

ಕಾಂಗ್ರೆಸ್‌ ಮುಖಂಡ ಕಮಲನಾಥ್‌ 'ಐಟಂ' ಹೇಳಿಕೆಗೆ ರಾಹುಲ್‌ ಗಾಂಧಿ ಆಕ್ಷೇಪ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ

ತಿರುವನಂತಪುರಂ: ಬಿಜೆಪಿ ನಾಯಕಿ ಇಮಾರ್ತಿ ದೇವಿ ಅವರ ಬಗ್ಗೆ ಕಾಂಗ್ರೆಸ್‌ ಮುಖಂಡ ಕಮಲನಾಥ್‌ ಗೇಲಿ ಮಾಡಿರುವ ವಿಚಾರ ಪ್ರಸ್ತಾಪಿಸಿದ ರಾಹುಲ್‌ ಗಾಂಧಿ, ಇದೊಂದು ದುರದೃಷ್ಟಕರ ಸಂಗತಿ ಎಂದಿದ್ದಾರೆ.

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, 'ಕಮಲನಾಥ್‌ ಅವರು ನಮ್ಮದೇ ಪಕ್ಷದವರು, ಆದರೆ ವೈಯಕ್ತಿವಾಗಿ ಅವರು ಮಾಡಿರುವ ಪದ ಬಹಳಕೆಯ ಬಗ್ಗೆ ನನಗೆ ಆಕ್ಷೇಪವಿದೆ. ಅವರು ಯಾರೇ ಆಗಿದ್ದರೂ ಅಂಥ ಮಾತುಗಳನ್ನು ನಾನು ಒಪ್ಪುವುದಿಲ್ಲ. ಇದು ದುರದೃಷ್ಟಕರವಾದುದು' ಎಂದಿದ್ದಾರೆ.

ದೇಶದಾದ್ಯಂತ ಟೀಕೆ ವ್ಯಕ್ತವಾಗುತ್ತಿದ್ದಂತೆ ಮಧ್ಯ ಪ್ರದೇಶ ಕಾಂಗ್ರೆಸ್‌ ಮುಖಂಡ, ಮಾಜಿ ಮುಖ್ಯಮಂತ್ರಿ ಕಮಲನಾಥ್‌ ಅವರು, 'ನಾನು ಅಗೌರವ ತರುವ ಯಾವುದೇ ಮಾತುಗಳನ್ನು ಆಡಿಲ್ಲ. ನಾನು ಮಹಿಳೆಯರನ್ನು ಗೌರವಿಸುತ್ತೇನೆ. ಯಾರಾದರೂ ಇದು ಅಗೌರವಯುತ ಎಂದು ಭಾವಿಸಿದರೆ, ನಾನು ವಿಷಾದಿಸುತ್ತೇನೆ' ಎಂದು ಸೋಮವಾರ ಪ್ರತಿಕ್ರಿಯಿಸಿದ್ದರು.

ದಬ್ರಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯ ಪರ ಭಾನುವಾರ ಪ್ರಚಾರ ಕೈಗೊಂಡಿದ್ದ ಕಮಲನಾಥ್‌, 'ನಮ್ಮ ಅಭ್ಯರ್ಥಿ ಅತ್ಯಂತ ಸರಳ ವ್ಯಕ್ತಿ. ಅವರಂತೆ (ಇಮಾರ್ತಿ ದೇವಿ) ಐಟಂ' ಅಲ್ಲ ಎಂದು ಗೇಲಿ ಮಾಡಿದ್ದರು. ಈ ಕ್ಷೇತ್ರದಲ್ಲಿ ಇಮಾರ್ತಿ ದೇವಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. 'ಐಟಂ' ಹೇಳಿಯ ಬಗ್ಗೆ ಬಿಜೆಪಿ ನಾಯಕರು ಹಾಗೂ ಮಹಿಳಾ ಆಯೋಗದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ದೇಶದಲ್ಲಿ ಸಾಮಾನ್ಯವಾಗಿಯೇ ಮಹಿಳೆಯರು ಅಭದ್ರ ಸ್ಥಿತಿ ಅನುಭವಿಸುತ್ತಿದ್ದಾರೆ, ಅದನ್ನು ಪರಿಹರಿಸಬೇಕಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಇದೇ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತೂ ಮಾತನಾಡಿರುವ ಅವರು, 'ಯಾವಾಗ ಚೀನೀಯರು ನಮ್ಮ ದೇಶವನ್ನು ಬಿಟ್ಟು ಹೋಗಲಿದ್ದಾರೆ ಎಂಬುದನ್ನು ಪ್ರಧಾನಿ ಮೋದಿ ಅವರಿಂದ ತಿಳಿಯಲು ಬಯಸುತ್ತೇನೆ. ಜಗತ್ತಿನಲ್ಲಿ ಯಾವುದೇ ರಾಷ್ಟ್ರ ಹೀಗೆ ಯಾವುದೇ ಕ್ರಮಕೈಗೊಳ್ಳದೆ ಇರುವುದೆಂದು ನನಗೆ ಅನಿಸುವುದಿಲ್ಲ. ಈ ಕುರಿತು ಪ್ರಧಾನಿ ಮೋದಿ ಮಾತನಾಡಲೆಂದು ಬಯಸುತ್ತೇನೆ, ಆದರೆ ನಾನು ನಿಮಗೆ ಭರವಸೆ ನೀಡುತ್ತೇನೆ ಅವರು ಚೀನಾ ಪದವನ್ನು ಬಳಕೆ ಮಾಡುವುದೇ ಇಲ್ಲ' ಎಂದಿದ್ದಾರೆ. ದೇಶವನ್ನು ಉದ್ದೇಶಿ ಪ್ರಧಾನಿ ಮೋದಿ ಮಂಗಳವಾರ ಸಂಜೆ 6 ಗಂಟೆಗೆ ಮಾತನಾಡಲಿದ್ದಾರೆ.

ಲಡಾಖ್‌ನಲ್ಲಿ ಚೀನಾ ಸೇನೆಯೊಂದಿಗೆ ನಡೆಯುತ್ತಿರುವ ಘರ್ಷಣೆ ಮತ್ತು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿ ಮೋದಿ ಅವರ ವಿರುದ್ಧ ರಾಹುಲ್‌ ಆಗಾಗ್ಗೆ ಟೀಕಿಸಿದ್ದಾರೆ. ಪಂಜಾಬ್‌ನಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್‌ ರ್‍ಯಾಲಿಯಲ್ಲಿ ರಾಹುಲ್‌, 'ಕಾಂಗ್ರೆಸ್‌ ಅಧಿಕಾರದಲ್ಲಿ ಇದ್ದಿದ್ದರೆ, ಭಾರತದ ಭೂಭಾಗದಿಂದ ಚೀನಾವನ್ನು 15 ನಿಮಿಷಗಳಲ್ಲಿ ಹೊರಹಾಕುತ್ತಿದ್ದೆವು' ಎಂದಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು