ಗೋವಾದಲ್ಲಿ ರಸ್ತೆ, ರೈಲು ಯೋಜನೆ: ಕಾಳಿ ಹುಲಿ ಸಂರಕ್ಷಿತಾರಣ್ಯಕ್ಕೆ ಧಕ್ಕೆ ಆತಂಕ

ಪಣಜಿ: ಕೇಂದ್ರ ಸರ್ಕಾರ ಗೋವಾದಲ್ಲಿ ಅನುಷ್ಠಾನಗೊಳಿಸುತ್ತಿರುವ ರಸ್ತೆ, ರೈಲು ಅಭಿವೃದ್ದಿ ಹಾಗೂ ವಿದ್ಯುತ್ ಯೋಜನೆಗಳಿಂದಾಗಿ ನೆರೆಯ ಕರ್ನಾಟಕದ ಕಾಳಿ ಹುಲಿ ಸಂರಕ್ಷಿತಾರಣ್ಯಕ್ಕೆ ಧಕ್ಕೆ ಉಂಟಾಗಲಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಗಳ ಅನುಷ್ಠಾನದಿಂದ ಪರಿಸರ ಮತ್ತು ಹುಲಿಗಳ ಚಲನವಲನದ ಮೇಲಾಗಬಹುದಾದ ಪರಿಣಾಮ ಕುರಿತು 30 ಜನ ಪರಿಸರವಾದಿಗಳು ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನ ವರದಿಯನ್ನು ಸಂಶೋಧನೆ ಮತ್ತು ವಿಜ್ಞಾನ ಪ್ರಸಾರ ಕಾರ್ಯದಲ್ಲಿ ಸಂಘಟನೆಗಳು ಪ್ರಕಟಿಸಿವೆ.
ಬೆಂಗಳೂರು ಮೂಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್, ಅಜೀಂ ಪ್ರೇಮ್ಜಿ ಯೂನಿವರ್ಸಿಸಿ ಸೇರಿದಂತೆ ಕರ್ನಾಟಕದ 6 ಸಂಸ್ಥೆಗಳು ಈ ಅಧ್ಯಯನ ತಂಡದಲ್ಲಿವೆ.
ನೈರುತ್ಯ ರೈಲ್ವೆಯಿಂದ ಜೋಡಿ ರೈಲುಮಾರ್ಗ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ–4ರ ಅಭಿವೃದ್ಧಿ ಹಾಗೂ ಕರ್ನಾಟಕ–ಗೋವಾ ನಡುವೆ ವಿದ್ಯುತ್ ಮಾರ್ಗ ನಿರ್ಮಾಣ ಯೋಜನೆಗಳಿಂದಾಗುವ ಪರಿಣಾಮ ಕುರಿತು ಅಧ್ಯಯನ ನಡೆಸಲಾಗಿದೆ.
ಗೋವಾ ಗಡಿಗೆ ಹೊಂದಿಕೊಂಡಿರುವ ಅರಣ್ಯ, ಭೂಪ್ರದೇಶಗಳು ಇತರ ಅರಣ್ಯಗಳಿಗೆ ಸಂಪರ್ಕ ಕಲ್ಪಿಸುವ ಜೊತೆಗೆ ಕಾಳಿ ಹುಲಿ ಸಂರಕ್ಷಿತಾರಣ್ಯಕ್ಕೂ ಸಂಪರ್ಕ ಕಲ್ಪಿಸುತ್ತವೆ ಎಂದು ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.
ವಿದ್ಯುತ್ ಮಾರ್ಗ ನಿರ್ಮಾಣದಿಂದ ಗೋವಾದಲ್ಲಿ 43,456 ಮರಗಳು ಹಾಗೂ ಕರ್ನಾಟಕದಲ್ಲಿ 62,289 ಮರಗಳನ್ನು ಕಡಿಯಬೇಕಾಗುತ್ತದೆ. ಕಾಳಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯ 30,412 ಹೆಕ್ಟೇರ್ ಪ್ರದೇಶವು ಸಹ ಈ ಯೋಜನೆಗೆ ಬಳಕೆಯಾಗಲಿದೆ ಎಂದೂ ವಿವರಿಸಲಾಗಿದೆ.
ಜೋಡಿ ರೈಲು ಮಾರ್ಗ ನಿರ್ಮಾಣ ಯೋಜನೆಯಿಂದ ಗೋವಾದಲ್ಲಿನ ಭಗವಾನ್ ಮಹಾವೀರ ವನ್ಯಜೀವಿ ಧಾಮಕ್ಕೆ ಧಕ್ಕೆಯುಂಟಾಗುವುದು. ಪಶ್ಚಿಮ ಘಟ್ಟ ಪ್ರದೇಶಕ್ಕೂ ಹಾನಿ ತಪ್ಪಿದ್ದಲ್ಲ ಎಂಬ ಆತಂಕವನ್ನು ಪರಿಸರವಾದಿಗಳು ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಉಕ್ಕು ಕಾರ್ಖಾನೆಗಳಿಗೆ ಕಬ್ಬಿಣದ ಅದಿರು ಸಾಗಿಸಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಈ ಯೋಜನೆಗಳನ್ನು ನಿರ್ಮಿಸಲಾಗುತ್ತಿದೆ ಎಂದೂ ಪರಿಸರವಾದಿಗಳು ಆರೋಪಿಸುತ್ತಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.