ಮಂಗಳವಾರ, ಜುಲೈ 5, 2022
21 °C
ಗೆಹಲೋತ್‌ ನೇತೃತ್ವದ ಸಂಪುಟಕ್ಕೆ 12 ಮಂದಿ ಸೇರ್ಪಡೆ: ಮೂವರಿಗೆ ಬಡ್ತಿ, ಮೂವರಿಗೆ ಕೊಕ್‌

ರಾಜಸ್ಥಾನ: ಪೈಲಟ್‌ ನಿಷ್ಠರಿಗೆ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ನೇತೃತ್ವದ ಸಚಿವ ಸಂ‍ಪುಟಕ್ಕೆ 12 ಮಂದಿಯನ್ನು ಸೇರಿಸಿಕೊಳ್ಳಲಾಗಿದೆ, ರಾಜ್ಯ ಖಾತೆಯ ಸಚಿವರಾಗಿದ್ದ ಮೂವರಿಗೆ ಸಂಪುಟ ದರ್ಜೆಗೆ ಬಡ್ತಿ ನೀಡಲಾಗಿದೆ ಮತ್ತು ಸಚಿವ ಸಂಪುಟದಲ್ಲಿದ್ದ ಮೂವರನ್ನು ಕೈಬಿಡಲಾಗಿದೆ. ಗೆಹಲೋತ್‌ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ನಡುವೆ ಬದಲಾವಣೆಗಳಿಗೆ ಸಂಬಂಧಿಸಿ ಸಹಮತ ಮೂಡಿದ ಬಳಿಕ ಭಾನುವಾರ ಸಚಿವ ಸಂ‍ಪುಟ ವಿಸ್ತರಣೆ ನಡೆಯಿತು. 

ಹೊಸದಾಗಿ ಸೇರ್ಪಡೆಯಾದ 12 ಮಂದಿ ಮತ್ತು ಬಡ್ತಿ ಪಡೆದ ಮೂವರಿಗೆ ರಾಜ್ಯಪಾಲ ಕಲ್‌ರಾಜ್‌ ಮಿಶ್ರಾ ಅವರು ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣವಚನ ಬೋಧಿಸಿದರು.  

ಸೇರ್ಪಡೆಯಾದ 12 ಸಚಿವರಲ್ಲಿ ಐವರು ಪೈಲಟ್‌ ಅವರ ನಿಷ್ಠರು. 2020ರಲ್ಲಿ ಪೈಲಟ್‌ ಅವರೊಂದಿಗೆ ಸಂಪುಟದಿಂದ ಕೈಬಿಡಲಾಗಿದ್ದ ವಿಶ್ವೇಂದ್ರ ಸಿಂಗ್‌ ಮತ್ತು ರಮೇಶ್‌ ಮೀನಾ ಅವರು ಸಚಿವ ಸಂಪುಟಕ್ಕೆ ಮರಳಿದ್ದಾರೆ. ಗೆಹಲೋತ್‌ ಅವರ ಪದಚ್ಯುತಿಗೆ ಯತ್ನಿಸಿದ ಕಾರಣಕ್ಕೆ ಪೈಲಟ್‌ ಮತ್ತು ಅವರ ನಿಷ್ಠರನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಗಿತ್ತು. 

ಗೋವಿಂದ್‌ ಸಿಂಗ್‌ ಡೋಟಾಸ್ರ, ಹರೀಶ್‌ ಚೌಧರಿ ಮತ್ತು ರಘು ಶರ್ಮಾ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ. ‘ಒಬ್ಬ ವ್ಯಕ್ತಿಗೆ ಒಂದು ಹುದ್ದೆ’ ಎಂಬ ಪಕ್ಷದ ನಿಯಮದಂತೆ ಇವರನ್ನು ಕೈಬಿಡಲಾಗಿದೆ. ಡೋಟಾಸ್ರ ಅವರು ರಾಜಸ್ಥಾನ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿದ್ದಾರೆ. ಚೌಧರಿ ಅವರಿಗೆ ಚುನಾವಣೆ ಸಮೀಪಿಸುತ್ತಿರುವ ರಾಜ್ಯವಾದ ಪಂಜಾಬ್‌ನ ಉಸ್ತುವಾರಿ ಹೊಣೆಯನ್ನು ಇತ್ತೀಚೆಗೆ ವಹಿಸಲಾಗಿದೆ. ಉತ್ತರಾಖಂಡ ಚುನಾವಣೆ ಮೇಲೆ ಗಮನ ಕೇಂದ್ರೀಕರಿಸಬೇಕಿರುವ ಕಾರಣ, ಪಂಜಾಬ್‌ ಉಸ್ತುವಾರಿಯಾಗಿದ್ದ ಹರೀಶ್‌ ರಾವತ್‌ ಅವರನ್ನು ಈ ಹೊಣೆಯಿಂದ ಬಿಡುಗಡೆ ಮಾಡಲಾಗಿದೆ. ಗುಜರಾತ್‌ ಉಸ್ತುವಾರಿಯಾಗಿದ್ದ ರಾಜೀವ್‌ ಸತಾವ್‌ ಅವರ ಮರಣದಿಂದಾಗಿ ಆ ಹುದ್ದೆ ತೆರವಾಗಿತ್ತು. ಹಾಗಾಗಿ, ಈ ಹುದ್ದೆಗೆ ಶರ್ಮಾ ಅವರನ್ನು ನೇಮಿಸಲಾಗಿದೆ. 

ಸಂಪುಟ ಪುನರ್‌ ರಚನೆಗೆ ಅವಕಾಶ ಕೊಡುವುದಕ್ಕಾಗಿ ಎಲ್ಲ ಸಚಿವರು ತಮ್ಮ ರಾಜೀನಾಮೆಗಳನ್ನು ಗೆಹಲೋತ್‌ ಅವರಿಗೆ ಶನಿವಾರವೇ ಸಲ್ಲಿಸಿದ್ದರು. ಕೇಂದ್ರದ ನಾಯಕರ ಜತೆಗೆ ಚರ್ಚಿಸಿದ ಬಳಿಕ, ಮೂವರು ಸಚಿವರ ರಾಜೀನಾಮೆ ಪತ್ರಗಳನ್ನು ಮಾತ್ರ ರಾಜ್ಯಪಾಲರ ಅಂಗೀಕಾರಕ್ಕೆ ಕಳುಹಿಸಲು ಗೆಹಲೋತ್‌ ನಿರ್ಧರಿಸಿದರು. 

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್‌ ಮುಖಂಡರಾದ ಪ್ರಿಯಾಂಕಾ ಗಾಂಧಿ ವಾದ್ರಾ, ಕೆ.ಸಿ. ವೇಣುಗೋಪಾಲ್‌ ಮತ್ತು ಅಜಯ್‌ ಮಾಕನ್‌ ಅವರನ್ನು ಗೆಹಲೋತ್‌ ಮತ್ತು ಪೈಲಟ್‌ ಅವರು ಪ್ರತ್ಯೇಕವಾಗಿ ಇತ್ತೀಚೆಗೆ ಭೇಟಿಯಾಗಿ ಸಂಪುಟ ಪುನರ್‌ ರಚನೆಯ ಬಗ್ಗೆ ಚರ್ಚೆ ನಡೆಸಿದ್ದರು. 

ಪೈಲಟ್‌ ಅವರು ಕೆಲವು ಶಾಸಕರನ್ನು ಕಳೆದ ವರ್ಷ ದೆಹಲಿ ಮತ್ತು ಇತರ ಸ್ಥಳಗಳಿಗೆ ಕರೆದೊಯ್ದಿದ್ದರು. ಗೆಹಲೋತ್‌ ನೇತೃತ್ವದ ಸರ್ಕಾರವನ್ನು ಬಿಜೆಪಿ ನೆರವಿನಿಂದ ಪತನಗೊಳಿಸುವ ಯತ್ನ ಇದು ಎಂದು ಆಗ ಹೇಳಲಾಗಿತ್ತು. ಆದರೆ, ಅತ್ಯಂತ ಚುರುಕಾಗಿ ಕಾರ್ಯನಿರ್ವಹಿಸಿದ್ದ ಗೆಹಲೋತ್‌, ಸರ್ಕಾರ ಉರುಳದಂತೆ ನೋಡಿಕೊಂಡಿದ್ದರು. 

ಬಿಕ್ಕಟ್ಟು ಸುಮಾರು ಒಂದು ತಿಂಗಳು ಮುಂದುವರಿದಿತ್ತು. ಇದರಿಂದಾಗಿ, ಸರ್ಕಾರ ಉರುಳಿಸುವ ಯತ್ನದಲ್ಲಿ ಯಶಸ್ಸು ಸಿಗುವ ಬಗ್ಗೆ ಪೈಲಟ್‌ ಬೆಂಬಲಕ್ಕಿದ್ದ ಶಾಸಕರಿಗೆ ಅನುಮಾನ ಉಂಟಾಗಿತ್ತು. 
 

ಪಕ್ಷೇತರರಿಗಿಲ್ಲ ಮಣೆ

13 ಪಕ್ಷೇತರ ಶಾಸಕರ ಪೈಕಿ 12 ಮಂದಿ ಸರ್ಕಾರವನ್ನು ಬೆಂಬಲಿಸಿದ್ದಾರೆ. ಆದರೆ, ಅವರಲ್ಲಿ ಯಾರೊಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಬಿಎಸ್‌ಪಿ ತೊರೆದು ಕಾಂಗ್ರೆಸ್‌ ಸೇರಿದ್ದ ಆರು ಶಾಸಕರ ಪೈಕಿ ರಾಜೇಂದ್ರ ಗುದ್ಧ ಅವರನ್ನು ರಾಜ್ಯ ಸಚಿವರನ್ನಾಗಿ ಮಾಡಲಾಗಿದೆ. 200 ಸದಸ್ಯರ ವಿಧಾನಸಭೆಯಲ್ಲಿ 108 ಕಾಂಗ್ರೆಸ್ ಶಾಸಕರಿದ್ದಾರೆ. 

ಪಕ್ಷೇತರ ಶಾಸಕರು ಮತ್ತು ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದ ಕಾಂಗ್ರೆಸ್‌ ಶಾಸಕರಿಗೆ ರಾಜಕೀಯ ನೇಮಕಗಳ ಮೂಲಕ ಸ್ಥಾನ ಒದಗಿಸಲಾಗುವುದು. 15 ಮಂದಿ ಸಂಸದೀಯ ಕಾರ್ಯದರ್ಶಿಗಳ ನೇಮಕ ಆಗಲಿದೆ. ಹಾಗೆಯೇ, ಮುಖ್ಯಮಂತ್ರಿಯ ಸಲಹೆಗಾರರನ್ನಾಗಿ ಏಳು ಮಂದಿಯನ್ನು ನೇಮಿಸಲಾಗುವುದು ಎಂದು ಮೂಲಗಳು ಹೇಳಿವೆ. 

ಅಲ್ಪ ಅಪಸ್ವರ

ಸಂ‍ಪುಟ ಪುನರ್‌ರಚನೆಯು ಹೆಚ್ಚಿನ ಅತೃಪ್ತಿ ಅಥವಾ ಪ್ರತಿಭಟನೆಗೆ ಕಾರಣವಾಗಿಲ್ಲ. ಟೀಕಾರಾಂ ಜಲ್ಲಿ ಅವರಿಗೆ ರಾಜ್ಯ ದರ್ಜೆಯಿಂದ ಸಂ‍ಪುಟ ದರ್ಜೆಗೆ ಬಡ್ತಿ ನೀಡಿದ್ದಕ್ಕೆ ಕಾಂಗ್ರೆಸ್‌ ಶಾಸಕ ಜೊಹಾರಿ ಲಾಲ್‌ ಮೀನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಅವರನ್ನು ರಾಜ್ಯ ದರ್ಜೆಯ ಸಚಿವ ಸ್ಥಾನದಿಂದಲೂ ಕೈಬಿಡಬೇಕು ಎಂದು ಪಕ್ಷದ ನಾಯಕರನ್ನು ಕೋರಿದ್ದೆ. ಅದರ ಬದಲಿಗೆ ಅವರಿಗೆ ಬಡ್ತಿ ನೀಡಲಾಗಿದೆ’ ಎಂದು ಅವರು ಹೇಳಿದ್ದಾರೆ.

ಕೆಟ್ಟ ಹೆಸರು ಇದ್ದವರನ್ನು ಕೈಬಿಟ್ಟಿದ್ದರೆ ಸಚಿವ ಸಂಪುಟವು ಇನ್ನಷ್ಟು ಚೆನ್ನಾಗಿರುತ್ತಿತ್ತು. ‘ಒಟ್ಟಾರೆಯಾಗಿ, ಸಚಿವ ಸಂಪುಟವು ಉತ್ತಮ ಸಂದೇಶವನ್ನೇನೂ ನೀಡುತ್ತಿಲ್ಲ. ಮಹಿಳೆಯರಿಗೆ ಶೇ 33ರಷ್ಟು ಪ್ರಾತಿನಿಧ್ಯ ಸಿಕ್ಕಿಲ್ಲ’ ಎಂದು ಶಾಸಕಿ ಶಫಿಯಾ ಝುಬೈರ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು