ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷಗಳಿಂದ ಗದ್ದಲ: ದಿನದ ಮಟ್ಟಿಗೆ ರಾಜ್ಯಸಭೆ ಕಲಾಪ ಮುಂದೂಡಿಕೆ

Last Updated 6 ಡಿಸೆಂಬರ್ 2021, 13:25 IST
ಅಕ್ಷರ ಗಾತ್ರ

ನವದೆಹಲಿ : 12 ಮಂದಿ ಸಂಸದ ಅಮಾನತು ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಪಕ್ಷಗಳ ನಡೆಸಿದ ಪ್ರತಿಭಟನೆಯ ನಡುವೆ ರಾಜ್ಯಸಭೆಯ ಕಲಾಪವನ್ನು ಮಂಗಳವಾರದವರೆಗೆ ಮುಂದೂಡಲಾಯಿತು.

ಸೋಮವಾರ ನಾಲ್ಕು ಬಾರಿ ಸದನವನ್ನು ಮುಂದೂಡಲಾಯಿತು. ಸಂಜೆ 4 ಗಂಟೆಗೆ ಸದನ ಆರಂಭವಾಗುತ್ತಿದ್ದಂತೆ 12 ಸದಸ್ಯರ ಅಮಾನತು ಆದೇಶವನ್ನು ಹಿಂದಕ್ಕೆ ಪಡೆದು, ಅವರಿಗೂ ಸದನದೊಳಗೆ ಬರಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷಗಳ ಸದಸ್ಯರು ಸಭಾಪತಿಗಳ ಪೀಠದ ಎದುರು ಗದ್ದಲ ಆರಂಭಿಸಿದರು.

ಗದ್ದಲದ ನಡುವೆಯೇ, ನಾಗಾಲ್ಯಾಂಡ್‌ ಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡುವಂತೆ ಗೃಹ ಸಚಿವ ಅಮಿತ್‌ ಶಾ ಅವರಿಗೆ ಉಪ ಸಭಾಪತಿ ಹರಿವಂಶ್ ಅವರು ಸೂಚನೆ ನೀಡಿದರು. ನಾಗಾಲ್ಯಾಂಡ್‌ ಹತ್ಯೆ ಪ್ರಕರಣ ಖಂಡಿಸಿದ ವಿರೋಧ ಪಕ್ಷಗಳು ಪ್ರತಿಭಟನೆಯನ್ನು ಮುಂದುವರಿಸಿದವು.

ಸಚಿವರು ಹೇಳಿಕೆ ನೀಡುತ್ತಿದ್ದಂತೆಯೇ ಪ್ರತಿಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಹಿಂದೆ ಲೋಕಸಭೆಯಲ್ಲಿ ಶಾ ಇದೇ ಹೇಳಿಕೆ ನೀಡಿದ್ದರು. ಶಾ ಅವರು ಹೇಳಿಕೆಯನ್ನು ಮುಗಿಸಿದ ತಕ್ಷಣ, 12 ಸಂಸದರ ಅಮಾನತು ಕುರಿತು ಪ್ರತಿಪಕ್ಷಗಳ ಸದಸ್ಯರು ಪಟ್ಟುಹಿಡಿದು ಗದ್ದಲವನ್ನು ಮುಂದುವರೆಸಿದ್ದರಿಂದ ಉಪಸಭಾಪತಿಯವರು ಸದನವನ್ನು ದಿನಕ್ಕೆ ಮುಂದೂಡಿದರು.

ಇದಕ್ಕೂ ಮುನ್ನ ಮೂರನೇ ಬಾರಿಗೆ ಸದನವನ್ನು ಮುಂದೂಡಿದ ನಂತರ ಮಧ್ಯಾಹ್ನ 3ಕ್ಕೆ ಸದನದ ಕಾರ್ಯಕಲಾಪ ಆರಂಭವಾಯಿತು. ಸಭಾಪತಿಗಳ ಸ್ಥಾನದಲ್ಲಿದ್ದ ಸುಶ್ಮಿತ್‌ ಪಾತ್ರಾ ಅವರು, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಸೇರಿದಂತೆ ಹಣದುಬ್ಬರದಿಂದ ದೇಶದ ಪರಿಸ್ಥಿತಿ ಕುರಿತು ಅಲ್ಪಾವಧಿಯ ಚರ್ಚೆಗೆ ಅವಕಾಶ ನೀಡಿ, ಈ ವಿಷಯದ ಬಗ್ಗೆ ಮಾತನಾಡುವಂತೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೂಚಿಸಿದರು.

‘ಪ್ರಜಾಪ್ರಭುತ್ವದಲ್ಲಿ 12 ಸದಸ್ಯರನ್ನು ಅಮಾನತುಗೊಳಿಸಿ ಸದನ ನಡೆಸುವುದು, ಚರ್ಚೆ ಆರಂಭಿಸುವುದು ಅಪರಾಧ. ಆದ್ದರಿಂದ ಮೊದಲು 12 ಸದಸ್ಯರ ಅಮಾನತು ಹಿಂಪಡೆದು ಅವರಿಗೆ ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು’ ಎಂದು ಸಭಾಪತಿಯವರಲ್ಲಿ ಮನವಿ ಮಾಡಿದರು.

ಆದರೆ, ಈ ಮನವಿಗೆ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ವಿರೋಧ ಪಕ್ಷಗಳ ಸದಸ್ಯರು ಗದ್ದಲ ಮುಂದುವರಿಸಿದರು. ಸದನವನ್ನು ಮುಂದೂಡಿ, ಸಂಜೆ 4ಕ್ಕೆ ಆರಂಭಿಸಿದ ನಂತರವೂ ಗಲಾಟೆ ಮುಂದುವರಿದಿದ್ದರಿಂದ ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT