ಸೋಮವಾರ, ಮಾರ್ಚ್ 27, 2023
29 °C

ರಾಮಾಯಣ ಯಾತ್ರಾ ಸರಣಿ ಇಂದಿನಿಂದ: ಐಆರ್‌ಸಿಟಿಸಿಯಿಂದ ವಿಶೇಷ ರೈಲು ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ನವದೆಹಲಿ: ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಭಾರತೀಯ ರೈಲ್ವೆ ಕೇಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಆರಂಭಿಸಲಿರುವ ‘ರಾಮಾಯಣ ಯಾತ್ರಾ’ ಪ್ರವಾಸ ಸರಣಿಯು ಭಾನುವಾರ ಇಲ್ಲಿನ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಆರಂಭವಾಗಲಿದೆ.

ಕೊರೊನಾ ಸಾಂಕ್ರಾಮಿಕ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ರೈಲುಗಳ ಮೂಲಕ ದೇಶೀ ಪ್ರವಾಸೋದ್ಯಮ ಉತ್ತೇಜಿಸುವ ಕಾರ್ಯಕ್ರಮವನ್ನು ಪುನರಾರಂಭಿಸಲು ಈ ಸರಣಿ ನೆರವಿಗೆ ಬರಲಿದೆ.

13ರಿಂದ 17 ದಿನಗಳ ಸುದೀರ್ಘ ಪ್ರಯಾಣದ ಈ ಯಾತ್ರಾ ಸರಣಿಯಲ್ಲಿ ಪ್ರವಾಸಿಗರನ್ನು ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆ ಒಳಗೊಂಡಂತೆ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳಿಗೆ ಕರೆದೊಯ್ಯಲಾಗುತ್ತದೆ.

ದಕ್ಷಿಣ ಹಾಗೂ ಉತ್ತರ ಭಾರತದ ಯಾತ್ರಿಕರ ಅವಶ್ಯಕತೆ ಪೂರೈಸಲು ಸ್ಲೀಪರ್ ಕ್ಲಾಸ್ ಕೋಚ್‌ಗಳನ್ನು ಒಳಗೊಂಡ ವಿಶೇಷ ರೈಲು ಸೌಲಭ್ಯವನ್ನು ಒದಗಿಸಲಾಗಿದೆ. ಮಧುರೆವರೆಗಿನ 13 ದಿನಗಳ ಪ್ರಯಾಣದ ಈ ವಿಶೇಷ ಪ್ಯಾಕೇಜ್‌ ಪ್ರವಾಸವು ನವೆಂಬರ್ 16ರಂದು ಆರಂಭವಾಗಲಿದೆ.

ತಮಿಳುನಾಡಿನ ಮಧುರೆಯಿಂದ ಹೊರಡುವ ರೈಲು ದಿಂಡಿಗಲ್, ತಿರುಚಿರಾಪಳ್ಳಿ, ಕರೂರ್, ಈರೋಡ್, ಸೇಲಂ, ಜೋಲಾರ್‌ ಪೇಟೆ, ಕಟ್ಪಾಡಿ, ಚೆನ್ನೈ, ರೇಣಿಗುಂಟಾ, ಕಡಪ, ಹಂಪಿ, ನಾಸಿಕ್, ಚಿತ್ರಕೂಟ, ಅಲಹಾಬಾದ್ ಹಾಗೂ ವಾರಾಣಸಿ ಮೂಲಕ ಮಧುರೆಗೆ ವಾಪಸಾಗಲಿದೆ.

17 ದಿನಗಳ ಪ್ರಯಾಣ ಅವಧಿಯ ಪ್ಯಾಕೇಜ್‌ ಒಳಗೊಂಡ ಮತ್ತೊಂದು ‘ರಾಮಾಯಣ ಯಾತ್ರಾ ಎಕ್ಸ್‌ಪ್ರೆಸ್’ ರೈಲು ನವೆಂಬರ್ 25ರಂದು ಗಂಗಾನಗರದಿಂದ ಹೊರಡಲಿದೆ. ಭಟಿಂಡಾ, ಬರ್ನಾಲಾ, ಪಟಿಯಾಲಾ, ರಾಜ್‌ಪುರ, ಅಂಬಾಲಾ ಕ್ಯಾಂಟ್, ಕುರುಕ್ಷೇತ್ರ, ಕರ್ನಾಲ್, ಪಾಣಿಪತ್, ದೆಹಲಿ ಕ್ಯಾಂಟ್, ಗುರುಗ್ರಾಮ, ರೆವಾರಿ, ಅಲ್ವಾರ್, ಜೈಪುರ, ಆಗ್ರಾ ಫೋರ್ಟ್, ಇಟಾವಾ ಮತ್ತು ಕಾನ್ಪುರ ಮೂಲಕ ಸಂಚರಿಸುವ ರೈಲು, ಅಯೋಧ್ಯೆ, ಸೀತಾಮಾರಿ, ಜನಕ್‌ಪುರ, ವಾರಾಣಸಿ, ಪ್ರಯಾಗ್‌ರಾಜ್, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರ, ಕಾಂಚಿಪುರಕ್ಕೆ ತೆರಳಿ ಗಂಗಾನಗರಕ್ಕೆ ಹಿಂತಿರುಗಲಿದೆ ಎಂದು ಐಆರ್‌ಸಿಟಿಸಿ ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು