ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡದ ಸಿ.ಎಂ ರಾಜೀನಾಮೆ

4 ತಿಂಗಳಲ್ಲಿ ಅಧಿಕಾರ ತ್ಯಜಿಸಿದ ತೀರಥ್‌ ಸಿಂಗ್‌ ರಾವತ್‌
Last Updated 2 ಜುಲೈ 2021, 20:44 IST
ಅಕ್ಷರ ಗಾತ್ರ

ಡೆಹ್ರಾಡೂನ್‌: ಉತ್ತರಾಖಂಡದ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರು ಶುಕ್ರವಾರ ರಾತ್ರಿ 11 ಗಂಟೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಕೇವಲ ನಾಲ್ಕು ತಿಂಗಳಾಗಿತ್ತು.

ಕೆಲ ದಿನಗಳಿಂದ ಉತ್ತರಾಖಂಡದ ನಾಯಕತ್ವ ಬದಲಾವಣೆ ಕುರಿತ ಚಟುವಟಿಕೆಗಳು ಗರಿಗೆದರಿದ್ದವು. ಮುಖ್ಯಮಂತ್ರಿ ತೀರಥ್‌ ಸಿಂಗ್‌ ಅವರು ಶುಕ್ರವಾರ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿದ್ದರು. ಪಕ್ಷವು ರಾವತ್‌ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ ಬೆನ್ನಲ್ಲೆ, ಅವರು ರಾಜ್ಯಪಾಲರಾದಬೇಬಿ ರಾಣಿ ಮೌರ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು.

ಉತ್ತರಾಖಂಡದ ಬಿಜೆಪಿ ಶಾಸಕರು ಶನಿವಾರ ಸಭೆ ಸೇರಲಿದ್ದು, ಹೊಸ ನಾಯಕನನ್ನು ಆಯ್ಕೆ ಮಾಡಲಿದ್ದಾರೆ.ರಾವತ್‌ ಅವರು ಮಾರ್ಚ್‌ನಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಮುಂದಿನ ವರ್ಷವೇ ಉತ್ತರಾಖಂಡದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಪ್ರಸ್ತುತ ಲೋಕಸಭಾ ಸದಸ್ಯರಾಗಿರುವ ರಾವತ್‌, ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಬೇಕಿದ್ದರೆ ಸೆಪ್ಟೆಂಬರ್‌ 10ರೊಳಗೆ ಶಾಸಕರಾಗಿ ಆಯ್ಕೆಯಾಗಬೇಕಿತ್ತು.ಆದರೆ, ಚುನಾವಣಾ ಆಯೋಗವು ರಾಜ್ಯದಲ್ಲಿ ತೆರವಾಗಿರುವ ಎರಡು (ಗಂಗೋತ್ರಿ ಮತ್ತು ಹಲ್ದವಾನಿ) ಕ್ಷೇತ್ರಗಳಿಗೆ ಕೋವಿಡ್‌–19ರ ಕಾರಣಕ್ಕೆ ಉಪಚುನಾವಣೆ ನಡೆಸುವ ಸಾಧ್ಯತೆಗಳು ಕಡಿಮೆಯಾಗಿರುವುದರಿಂದ ನಾಯಕತ್ವ ಬದಲಾವಣೆ ಅನಿವಾರ್ಯ ಎನ್ನುವ ಪರಿಸ್ಥಿತಿ ಸೃಷ್ಟಿಯಾಗಿತ್ತು.

ಪ್ರಸ್ತುತ ವಿಧಾನಸಭೆಯ ಅವಧಿ ಮುಂದಿನ ಮಾರ್ಚ್‌ನಲ್ಲಿ ಮುಕ್ತಾಯವಾಗಲಿದೆ. ಹೀಗಿರುವಾಗ ಚುನಾವಣಾ ಆಯೋಗ ಉಪಚುನಾವಣೆ ನಡೆಸುವ ಸಾಧ್ಯತೆಗಳು ಕ್ಷೀಣ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು.

ಜತೆಗೆ, ಸಾಂಕ್ರಾಮಿಕ ಕಾಯಿಲೆ ಸಂದರ್ಭದಲ್ಲಿ ಈ ಹಿಂದೆ ಚುನಾವಣೆ ನಡೆಸಿದ ಕಾರಣಕ್ಕೆ ಆಯೋಗವನ್ನು ನ್ಯಾಯಾಲಯಗಳು ತರಾಟೆಗೆ ತೆಗೆದುಕೊಂಡಿವೆ. ಆದ್ದರಿಂದ, ಆಯೋಗವು ಚುನಾವಣೆ ನಡೆಸಲು ಅವಸರ ಮಾಡುವುದಿಲ್ಲ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿತ್ತು.

ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್‌ 151 ‘ಎ’ ಅನ್ವಯ ಸಂಸತ್‌ ಅಥವಾ ರಾಜ್ಯ ವಿಧಾನಸಭೆಗಳ ಖಾಲಿ ಉಳಿದಿರುವ ಸ್ಥಾನಗಳನ್ನು ಆರು ತಿಂಗಳ ಒಳಗೆ ಉಪಚುನಾವಣೆ ಮೂಲಕ ಭರ್ತಿ ಮಾಡಬೇಕು. ಆದರೆ, ಆಯ್ಕೆಯಾಗುವ ಹೊಸ ಸದಸ್ಯರ ಅವಧಿಯು ಒಂದು ವರ್ಷ ಅಥವಾ ಅದಕ್ಕೂ ಹೆಚ್ಚು ಇರಬೇಕು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT