ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ಮೇಲಿನ ಎಕ್ಸೈಸ್‌ ಸುಂಕ ಇಳಿಕೆನಿರೀಕ್ಷಿತ ಮಟ್ಟದಲ್ಲಿಲ್ಲ: ಕಾಂಗ್ರೆಸ್‌ ಟೀಕೆ

Last Updated 6 ನವೆಂಬರ್ 2021, 14:38 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರ ಈಚೆಗೆ ಇಳಿಸಿದ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದೆ. ಇದೇ ಸಂದರ್ಭದಲ್ಲಿ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲೂ ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಪ್ರಮಾಣವನ್ನು ಇಳಿಸಲು ಚಿಂತನೆ ನಡೆದಿದೆ ಎಂದೂ ಹೇಳಿದೆ.

ಕೋವಿಡ್ ಅವಧಿಯಲ್ಲಿ ಏರಿಸಲಾಗಿದ್ದ ಪೆಟ್ರೋಲ್‌ ಮೇಲಿನ ₹ 13, ಡೀಸೆಲ್‌ ಮೇಲಿನ ₹ 16 ಎಕ್ಸೈಸ್‌ ಸುಂಕವನ್ನು ಕೇಂದ್ರ ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ. ಜಿಎಸ್‌ಟಿ ಸಂಗ್ರಹವು ಸಹಜ ಸ್ಥಿತಿಗೆ ಮರಳಿದೆ ಎಂದು ಸರ್ಕಾರವೇ ಹೇಳಿಕೊಳ್ಳುತ್ತಿರುವುದರಿಂದ ಇದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದೆ.

ಭಾರತದ ಶ್ರೇಣಿಯು ಕುಸಿದಿರುವ ಜಾಗತಿಕ ಹಸಿವು ಸೂಚ್ಯಂಕದ ಅಂಕಿ ಅಂಶವನ್ನು ಉಲ್ಲೇಖಿಸಿರುವ ಕಾಂಗ್ರೆಸ್‌ ಪಕ್ಷವು, ಕಡುಬಡವರಿಗೆ ಪಡಿತರವನ್ನು ವಿತರಿಸುವ ಉದ್ದೇಶದ ಗರೀಬ್‌ ಕಲ್ಯಾಣ ಅನ್ನ ಯೋಜನೆಯನ್ನು ಈಗಾಗಲೇ ಪ್ರಕಟಿಸಿರುವಂತೆ 2022ರ ಮಾರ್ಚ್‌ 31ರವರೆಗೂ ವಿಸ್ತರಿಸಬೇಕು ಎಂದು ಆಗ್ರಹಪಡಿಸಿದೆ.

ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳಲ್ಲೂ ಇಂಧನದ ಮೇಲಿನ ತೆರಿಗೆ ಇಳಿಯವುದೇ ಎಂಬ ಪ್ರಶ್ನೆಗೆ ಪಕ್ಷದ ವಕ್ತಾರ ಪವನ್‌ ಖೇರಾ ಅವರು, ಇಂಧನದ ಮೇಲಿನ ಕೇಂದ್ರದ ತೆರಿಗೆ ಶೇ 80ಕ್ಕೂ ಹೆಚ್ಚಿದೆ. ಕಾಂಗ್ರೆಸ್‌ ಪಕ್ಷ ಛತ್ತೀಸಗಡ, ರಾಜಸ್ಥಾನ, ಪಂಜಾಬ್‌ ರಾಜ್ಯಗಳಲ್ಲಷ್ಟೇ ಅಧಿಕಾರದಲ್ಲಿದೆ ಎಂದಿದ್ದಾರೆ.

ಇಂಧನ ದರ ಏರಿಕೆಗೂ ತನಗೂ ಸಂಬಂಧವಿಲ್ಲ ಎಂದು ಕೇಂದ್ರ ಸರ್ಕಾರ ಎರಡು ವರ್ಷಗಳಿಂದ ಹೇಳುತ್ತಿತ್ತು. ಈಗ ಉಪಚುನಾವಣೆ ಸೋಲಿನ ಹಿಂದೆಯೇ ತೆರಿಗೆ ಇಳಿಸಿದೆ. ಎಕ್ಸೈಸ್‌ ಸುಂಕವು ಯುಪಿಎ ಆಡಳಿತವಿದ್ದಾಗ ಪೆಟ್ರೋಲ್‌ ಮೇಲೆ ₹ 9.48 ಇದ್ದರೆ, ಡೀಸೆಲ್‌ ಮೇಲೆ ₹ 3.56 ಇತ್ತು. ಇದನ್ನು ಕ್ರಮವಾಗಿ ₹ 32, ₹ 31ಕ್ಕೆ ಏರಿಸಿತ್ತು. ಈಗ ಕ್ರಮವಾಗಿ ₹ 5 ಮತ್ತು ₹ 10 ಅನ್ನು ಇಳಿಸಲಾಗಿದೆ. ಪಕ್ಷವು ಕೇಂದ್ರದ ಜೊತೆಗೆ ಹೋಲಿಸಿಕೊಳ್ಳಲು ಬಯಸುವುದಿಲ್ಲ. ಆದರೆ, ತನ್ನ ಆಡಳಿತವಿರುವ ಕಡೆಯೂ ತೆರಿಗೆ ಇಳಿಕೆ ಚಿಂತನೆ ನಡೆಸಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT