ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಮಿತಿ ತೆರವು, ಜಾತಿ ಗಣತಿಗೆ ಒತ್ತಾಯ

Last Updated 11 ಆಗಸ್ಟ್ 2021, 19:31 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):ಸಂವಿಧಾನವು ನೀಡಿರುವ ಸೌಲಭ್ಯಗಳ ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಜಾತಿ ಗಣತಿ ನಡೆಸುವುದು ಮತ್ತು ಮೀಸಲಾತಿ ಮೇಲಿನ ಶೇ 50ರ ಮಿತಿಯನ್ನು ತೆಗೆದುಹಾಕುವ ಅಗತ್ಯವಿದೆ ಎಂದು ರಾಜ್ಯಸಭಾ ಸದಸ್ಯರು ಬುಧವಾರ ಹೇಳಿದರು.

ಸಂವಿಧಾನದ 127ನೇ ತಿದ್ದುಪಡಿ ಮಸೂದೆಯುರಾಜ್ಯಗಳಿಗೆ ತಮ್ಮ ವ್ಯಾಪ್ತಿಯಲ್ಲಿರುವ ಒಬಿಸಿಗಳ ಪಟ್ಟಿಯನ್ನು ತಿದ್ದುಪಡಿ ಮಾಡುವ ಅಧಿಕಾರವನ್ನು ಒದಗಿಸುತ್ತದೆ.

ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಎಸ್‌ಪಿ ನಾಯಕ ರಾಮ್ ಗೋಪಾಲ್ ಯಾದವ್, ‘ಒಬಿಸಿಗಳ ಪಟ್ಟಿಯನ್ನು ತಿದ್ದುಪಡಿ ಮಾಡುವ ಹಕ್ಕನ್ನು ರಾಜ್ಯವು ಪಡೆಯುತ್ತದೆ. ಆದರೆ ಮೀಸಲಾತಿಯ ಮೇಲಿನ ಶೇ 50ರ ಮಿತಿಯನ್ನು ತೆಗೆದುಹಾಕಿದಾಗ ಮಾತ್ರ ಈ ತಿದ್ದುಪಡಿಯ ಗರಿಷ್ಠ ಲಾಭ ಪಡೆಯಲು ಸಾಧ್ಯವಾಗುತ್ತದೆ’ ಎಂದು ಪ್ರತಿಪಾದಿಸಿದರು.

ವಂಚಿತ ವರ್ಗಗಳಿಗೆ ಈ ತಿದ್ದುಪಡಿಯ ಲಾಭ ದೊರೆಯಬೇಕಾದರೆ,ಜಾತಿ– ಆರ್ಥಿಕ ಗಣತಿ ನಡೆಸುವ ಅಗತ್ಯವಿದೆ ಎಂದು ಅವರು ಹೇಳಿದರು. ವಂಚಿತ ಸಮುದಾಯದ ಜನರ ಶಿಕ್ಷಣ, ಮನೆಯ ಸ್ಥಿತಿಗತಿಯು ಗಣತಿಯಿಂದ ಲಭ್ಯವಾಗಲಿದ್ದು, ಅವರಿಗಾಗಿ ಸರ್ಕಾರಿ ನೀತಿಗಳು ಮತ್ತು ಯೋಜನೆಗಳನ್ನು ತಯಾರಿಸಲು ಸಾಧ್ಯವಾಗುತ್ತದೆ ಎಂದರು. ಮಸೂದೆಯನ್ನು ಅಂಗೀಕರಿಸಿದ ನಂತರ,ಉತ್ತರ ಪ್ರದೇಶದ ಒಬಿಸಿಗಳ ಪಟ್ಟಿಯಿಂದಯಾದವರು, ಕುರ್ಮಿಗಳು ಮತ್ತು ಗುಜ್ಜಾರ್ ಸಮುದಾಯಗಳನ್ನು ತೆಗೆದುಹಾಕಲಾಗುತ್ತದೆ ಎಂಬ ಭೀತಿ ಇದೆ ಎಂದು ಅವರ ಸದನದ ಗಮನ ಸೆಳೆದರು.

ಆರ್‌ಜೆಡಿಯ ಮನೋಜ್ ಕುಮಾರ್ ಝಾ ಅವರು ಮಸೂದೆಯನ್ನು ಬೆಂಬಲಿಸಿದರು. ಆದರೆ ಜಾತಿ–ಆರ್ಥಿಕ ಗಣತಿಯ ಅಗತ್ಯವಿದೆ ಎಂದು ಒತ್ತಾಯಿಸಿದರು. ಸರ್ಕಾರವು ಈ ಮಸೂದೆಯನ್ನು ಬಲವಂತದಿಂದ ತಂದಿದೆ ಎಂದ ಸಿಪಿಎಂ ನಾಯಕ ಎಲಮರಂ ಕರೀಮ್‌ ಅವರು,ಮೀಸಲಾತಿಯ ಅಡಿಯಲ್ಲಿ ಕ್ರೈಸ್ತ ದಲಿತರನ್ನು ಒಳಗೊಳ್ಳದಿರುವ ವಿಷಯ ಪ್ರಸ್ತಾಪಿಸಿದರು.

ಮಸೂದೆಯನ್ನು ಬೆಂಬಲಿಸಿ ಕಾಂಗ್ರೆಸ್ ಸಂಸದೆ ರಾಜಮಣಿ ಪಟೇಲ್ ಮಾತನಾಡಿ, ದೇಶವು ಶೇ 52ರಷ್ಟು ಒಬಿಸಿ ಜನಸಂಖ್ಯೆ ಹೊಂದಿದ್ದು,ಮೀಸಲಾತಿ ನೀಡುವ ಸರ್ಕಾರದ ಉದ್ದೇಶವನ್ನು ಪ್ರಶ್ನಿಸಿದರು. ಜಾತಿ ಆಧಾರಿತ ಜನಗಣತಿ ಮಾಡುವಂತೆ ಒತ್ತಾಯಿಸಿದರು.

ಶೈಕ್ಷಣಿಕ ಮತ್ತು ಸಾಮಾಜಿಕ ರಚನೆಯಿಂದ ಹಿಂದುಳಿದ ಜನರಿಗೆ ಆಗಿರುವ ಅನ್ಯಾಯಕ್ಕೆ ಪರಿಹಾರ ಒದಗಿಸಲು ಈ ಮಸೂದೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೆರವಾಗುತ್ತದೆ ಎಂದುಬಿಜೆಪಿ ನಾಯಕ ಹರನಾಥ್ ಸಿಂಗ್ ಯಾದವ್ ಅವರು ಹೇಳಿದರು.

‘ಸಂಸತ್ತು ಎಲ್ಲರಿಗೂ ಅಧಿಕಾರವನ್ನು ನೀಡಿದೆ. ಈ ಮಸೂದೆಯಲ್ಲಿ ಯಾವುದೇ ಅಸ್ಪಷ್ಟತೆ ಇಲ್ಲ ಮತ್ತು ಸರ್ಕಾರವು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ’ ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹೇಳಿದರು.

‘ತಮಿಳುನಾಡಿನಲ್ಲಿ ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ವರ್ಗದ ಎಲ್ಲ ಸಮುದಾಯಗಳಿಗೆ ಶೇ 69ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ ಅದನ್ನು ಉಳಿಸಿಕೊಳ್ಳಬೇಕು.ಶೇ 50ರಷ್ಟು ಮೀಸಲಾತಿ ದಾಟಲು ಸಾಧ್ಯವಿಲ್ಲ ಎಂಬ ನಿಯಮವಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು‘ ಎಂದುಎಐಡಿಎಂಕೆ ಸದಸ್ಯ ಎಂ.ತಂಬಿದೊರೈ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT