ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲ್ಯಾಟ್ ಹೊಂದಿದ ಕುಟುಂಬಗಳಿಗೆ 4–5ಕಾರು ಖರೀದಿಗೆ ಅನುಮತಿ ಬೇಡ: ಬಾಂಬೆ ಹೈಕೋರ್ಟ್

ವಾಹನಗಳ ದಟ್ಟಣೆ
Last Updated 13 ಆಗಸ್ಟ್ 2021, 8:10 IST
ಅಕ್ಷರ ಗಾತ್ರ

ಮುಂಬೈ: ವಾಹನಗಳ ಪಾರ್ಕಿಂಗ್‌ಗೆ ಸಂಬಂಧಿಸಿಮಹಾರಾಷ್ಟ್ರದಲ್ಲಿ ಏಕರೂಪ ನೀತಿ ಇಲ್ಲ ಎಂದು ಬಾಂಬೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ, ಪಾರ್ಕಿಂಗ್‌ಗಾಗಿ ಅಗತ್ಯವಿರುವಷ್ಟು ಸ್ಥಳ ಇರದವರು ಹಲವು ವಾಹನಗಳನ್ನು ಹೊಂದಲು ಸರ್ಕಾರ ಅನುಮತಿ ನೀಡಬಾರದು ಎಂದೂ ಅಭಿಪ್ರಾಯಪಟ್ಟಿದೆ.

‘ಕೇವಲ ಒಂದು ಫ್ಲ್ಯಾಟ್‌ ಹೊಂದಿರುವ ಕುಟುಂಬಗಳು ಪಾರ್ಕಿಂಗ್‌ಗಾಗಿ ಸಾಕಷ್ಟು ಸ್ಥಳ ಹೊಂದಿರದಿದ್ದರೆ, ಅಂಥ ಕುಟುಂಬಗಳು 4–5 ವಾಹನಗಳನ್ನು ಹೊಂದಲು ಅನುಮತಿ ನೀಡಬಾರದು’ ಎಂದು ಮುಖ್ಯನ್ಯಾಯಮೂರ್ತಿ ದೀಪಂಕರ್‌ ದತ್ತ ಹಾಗೂ ನ್ಯಾಯಮೂರ್ತಿ ಜಿ.ಎಸ್‌.ಕುಲಕರ್ಣಿ ಅವರಿರುವ ನ್ಯಾಯಪೀಠ ಹೇಳಿತು.

ನವಿಮುಂಬೈ ನಿವಾಸಿ ಹಾಗೂ ಸಾಮಾಜಿಕ ಕಾರ್ಯಕರ್ತ ಸಂದೀಪ್‌ ಠಾಕೂರ್ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಕಾರುಗಳ ಪಾರ್ಕಿಂಗ್‌ ಸ್ಥಳವನ್ನು ಕಡಿಮೆಗೊಳಿಸಲು ಡೆವಲೆಪರ್‌ಗಳಿಗೆ ಅನುಮತಿ ನೀಡುವ ‘ಯುನಿಫೈಡ್‌ ಡೆವಲೆಪ್‌ಮೆಂಟ್‌ ಕಂಟ್ರೋಲ್ ಆ್ಯಂಡ್‌ ಪ್ರಮೋಷನ್‌ ರೆಗ್ಯುಲೇಷನ್ಸ್‌ ರೂಲ್ಸ್‌’ಗೆ ತಿದ್ದುಪಡಿ ತಂದು, ಅಧಿಸೂಚನೆ ಹೊರಡಿಸಿದ್ದ ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಅವರು ಪಿಐಎಲ್‌ ಸಲ್ಲಿಸಿದ್ದಾರೆ.

‘ಖರೀದಿಸುವ ಸಾಮರ್ಥ್ಯ ಇದೆ ಎಂಬ ಕಾರಣಕ್ಕೆ, ಒಂದು ಕುಟುಂಬ 4–5 ಕಾರುಗಳನ್ನು ಖರೀದಿಸಲು ಅನುಮತಿ ನೀಡಬಾರದು. ತಾನು ಹೊಂದಿರುವ ವಾಹನಗಳ ಪಾರ್ಕಿಂಗ್‌ಗೆ ಕುಟುಂಬಕ್ಕೆ ಅಗತ್ಯ ಸ್ಥಳಾವಕಾಶ ಇದೆಯೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು’ ಎಂದೂ ನ್ಯಾಯಪೀಠ ಹೇಳಿತು.

‘ವಾಹನಗಳ ಪಾರ್ಕಿಂಗ್‌ಗೆ ಸಂಬಂಧಿಸಿ ಸೂಕ್ತ ನೀತಿಯನ್ನು ಜಾರಿಗೊಳಿಸದಿದ್ದರೆ, ಸಾಕಷ್ಟು ಗೊಂದಲ ನಿರ್ಮಾಣವಾಗುವುದು. ಎಲ್ಲ ರಸ್ತೆಗಳು ವಾಹನಗಳಿಂದ ತುಂಬಲಿದ್ದು, ರಸ್ತೆಯ ಶೇ 30ರಷ್ಟು ಜಾಗ ವಾಹನಗಳ ಪಾರ್ಕಿಂಗ್‌ಗೆ ಬಳಕೆಯಾಗುವುದು’ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು.

ಈ ಬಗ್ಗೆ ಎರಡು ವಾರಗಳ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಸರ್ಕಾರದ ಪರ ವಕೀಲ ಮನೀಷ್‌ ಪಾಬ್ಲೆ ಅವರಿಗೆ ನ್ಯಾಯಪೀಠ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT