ಮಂಗಳವಾರ, ಫೆಬ್ರವರಿ 7, 2023
26 °C

ಆರ್‌ಎಸ್‌ಎಸ್‌ ರ‍್ಯಾಲಿಗೆ ನಿರ್ಬಂಧ: ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಹಮ್ಮಿಕೊಂಡಿದ್ದ ಪಥಸಂಚಲನ ಮತ್ತು ಸಾರ್ವಜನಿಕ ಸಭೆಯನ್ನು ಸಭಾಭವನ ಅಥವಾ ಮೈದಾನದಲ್ಲಿ ಮಾತ್ರ ಹಮ್ಮಿಕೊಳ್ಳಲು ಅನುಮತಿ ನೀಡಿ ನ್ಯಾಯಮೂರ್ತಿ ಜೆ.ಕೆ. ಇಳಂತಿರೈಯನ್‌ ಅವರು ನವೆಂಬರ್‌ 4ರಂದು ಹೊರಡಿಸಿದ್ದ ಆದೇಶದ ವಿರುದ್ಧ ಸಂಘವು ಮದ್ರಾಸ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. 

ಜೊತೆಗೆ, ಅಕ್ಟೋಬರ್‌ 2 ರಂದು ಪಥಸಂಚಲನ ನಡೆಸಲು ಅನುಮತಿ ನೀಡಿ ಕೋರ್ಟ್‌ ಹೊರಡಿಸಿದ್ದ ಆದೇಶ ಪಾಲಿಸದಿದ್ದಕ್ಕಾಗಿ ತಮಿಳುನಾಡು ಸರ್ಕಾರದ ಅಧಿಕಾರಿಗಳು ಮತ್ತು ಪೊಲೀಸ್‌ ಸಿಬ್ಬಂದಿಯನ್ನು ಶಿಕ್ಷೆಗೆ ಗುರಿ ಮಾಡುವಂತೆ ಕೂಡಾ ಆರ್‌ಎಸ್‌ಎಸ್‌ ಮನವಿ ಸಲ್ಲಿಸಿದೆ.

ಜಮ್ಮು ಮತ್ತು ಕಾಶ್ಮೀರ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಪಥಸಂಚಲನ ಮತ್ತು ಸಾರ್ವಜನಿಕ ಸಭೆಗಳು ಅಕ್ಟೋಬರ್‌ 2ರಂದೇ ನಡೆದವು. ಆದರೆ ತಮಿಳುನಾಡಿನಲ್ಲಿ ಮಾತ್ರ ಅನುಮತಿ ನಿರಾಕರಿಸಲಾಯಿತು ಎಂದು ಆರ್‌ಎಸ್‌ಎಸ್‌ ಪರ ಅರ್ಜಿದಾರ ಬಿ. ರಾಬು ಮನೋಹರ್‌ ಅವರು ಸುದ್ದಿಸಂಸ್ಥೆಗೆ ಹೇಳಿದರು. ಮುಂದಿನ ದಿನಗಳಲ್ಲಿ ಇದೇ ರೀತಿಯ 40 ಅರ್ಜಿಗಳನ್ನು ಸಲ್ಲಿಸಲಾಗುವುದು ಎಂದರು.

ಅ.2ರಂದು ಆಯೋಜಿಸಿದ್ದ ಆರ್‌ಎಸ್‌ಎಸ್‌ ಪಥಸಂಚಲನವನ್ನು ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ತಮಿಳುನಾಡು ಸರ್ಕಾರ ರದ್ದುಪಡಿಸಿತ್ತು. ನ.6ರಂದು ಪಥಸಂಚಲನ ಮತ್ತು ರ‍್ಯಾಲಿ ನಡೆಸಲು ಆರ್‌ಎಸ್‌ಎಸ್‌ ನಿರ್ಧರಿಸಿತ್ತು. ನ.4ರಂದು ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಕೆ.ಇಳಂತಿರೈಯನ್‌ ಅವರು ರ‍್ಯಾಲಿ ನಡೆಸಲು ಕೆಲವು ನಿರ್ಭಂಧಗಳನ್ನು ವಿಧಿಸಿದ್ದರು. ಬಳಿಕ ಆರ್‌ಎಸ್‌ಎಸ್‌ ಈ ರ‍್ಯಾಲಿಯನ್ನು ರದ್ದುಪಡಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು