ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾದಲ್ಲಿ ಬಾಂಬ್ ದಾಳಿ; ಬಿಜೆಪಿ ಮುಖಂಡನಿಗೆ ಗಂಭೀರ ಗಾಯ

Last Updated 29 ಮಾರ್ಚ್ 2021, 3:14 IST
ಅಕ್ಷರ ಗಾತ್ರ

ಜೈಪುರ: ಒಡಿಶಾದ ಜಾಜ್‌ಪುರ ಜಿಲ್ಲೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರಾಗಿಯೂ ಗುರುತಿಸಿಕೊಂಡಿರುವ ಮಾಹಿತಿ ಹಕ್ಕು (ಆರ್‌ಟಿಐ) ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳು ಬಾಂಬ್ ಎಸೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ರಾತ್ರಿ ಇಮಾಮ್ ನಗರದ ಬಳಿ ನಡೆದ ದಾಳಿಯ ನಂತರ ಸರ್ಬೇಶ್ವರ ಬೆಹುರಿಯಾ ಅವರನ್ನು ಚಿಕಿತ್ಸೆಗಾಗಿ ಧರ್ಮಶಾಲಾ ಸಿಎಚ್‌ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅವರ ಸ್ಥಿತಿ ಗಂಭೀರವಾಗಿದ್ದರಿಂದಾಗಿ ಕಟಕ್‌ನ ಎಸ್‌ಸಿಬಿ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಅವರು ಹೇಳಿದರು.

ಬೆಹುರಿಯಾ ಅವರು ಸಹವರ್ತಿಯೊಂದಿಗೆ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಇಬ್ಬರು ವ್ಯಕ್ತಿಗಳು ವಾಹನವನ್ನು ತಡೆದು ಬಾಂಬ್‌ಗಳನ್ನು ಎಸೆದು ಪರಾರಿಯಾಗಿದ್ದಾರೆ. 'ಬೆಹುರಿಯಾ ಅವರೇ ಕಾರು ಚಾಲನೆ ಮಾಡುತ್ತಿದ್ದರಿಂದಾಗಿ ಅವರಿಗೆ ಗಂಭೀರ ಗಾಯಗಳಾಗಿವೆ. ಅವರ ಸಹಾಯಕರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಧರ್ಮಶಾಲಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸರೋಜ್ ಕುಮಾರ್ ಸಾಹು ಹೇಳಿದ್ದಾರೆ.

ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಾಳಿಯ ಹಿಂದೆ ಧರ್ಮಶಾಲಾದ ಬಿಜೆಡಿ ಶಾಸಕ ಪ್ರಣಬ್ ಬಲಬಂತರೇ ಅವರ ಕೈಚಳಕ ಇದೆ ಎಂದು ಶಂಕಿಸಿ ಬೆಹುರಿಯಾ ಅವರ ಪತ್ನಿ ರಿಲು ಅವರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ಈಮಧ್ಯೆ, ಪ್ರತಿಪಕ್ಷ ಬಿಜೆಪಿ, ಬೆಹುರಿಯಾ ತನ್ನ ಪಕ್ಷದ ಸದಸ್ಯನೆಂದು ಹೇಳಿಕೊಂಡಿದೆ ಮತ್ತು ಬಲಬಂತರೇ ಅವರ ಕಡೆಗೆ ಬೆರಳು ಮಾಡಿ ತೋರಿಸಿದೆ.

ಬೆಹುರಿಯಾ ಅವರ ಪತ್ನಿ ಸಲ್ಲಿಸಿದ ಎಫ್‌ಐಆರ್‌ನಲ್ಲಿ ಶಾಸಕರ ಹೆಸರನ್ನು ಉಲ್ಲೇಖಿಸಿದ ನಂತರವೂ ಅವರನ್ನು ಬಂಧಿಸದಿದ್ದಲ್ಲಿ ಪಕ್ಷವು ಹೋರಾಟವನ್ನು ಪ್ರಾರಂಭಿಸುತ್ತದೆ ಎಂದಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಭ್ರುಗು ಬಕ್ಸಿಪಾತ್ರ, 'ಒಡಿಶಾದಲ್ಲಿ ಬಿಜೆಪಿ ಕಾರ್ಯಕರ್ತರನ್ನು ನಿರ್ಮೂಲನೆ ಮಾಡಲು ಇದು ಬಿಜೆಡಿಯ 18 ನೇ ಪ್ರಯತ್ನವಾಗಿದೆ. ಇದು ಬೆಹುರಿಯಾ ಮೇಲೆ ನಡೆದಿರುವ ಮೊದಲ ದಾಳಿ ಯತ್ನವಲ್ಲ. 2-3 ವರ್ಷಗಳ ಹಿಂದೆ ಅವರು ಮತ್ತೊಂದು ದಾಳಿಯಿಂದ ಬದುಕುಳಿದಿದ್ದರು' ಎಂದಿದ್ದಾರೆ.

ಈ ಘಟನೆಯ ಬಗ್ಗೆ ಬಲಬಂತರೇ ಪ್ರತಿಕ್ರಿಯಿಸದಿದ್ದರೂ, ಬಿಜೆಡಿ ವಕ್ತಾರ ಲೆನಿನ್ ಮೊಹಂತಿ, 'ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ರಾಜಕೀಯಗೊಳಿಸುವುದು ಬಿಜೆಪಿಗೆ ಅಭ್ಯಾಸವಾಗಿದೆ. ನಿಜವಾದ ಅಪರಾಧಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ನಾವು ನಂಬಿದ್ದೇವೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT