ಶುಕ್ರವಾರ, ಸೆಪ್ಟೆಂಬರ್ 25, 2020
22 °C

ರಾಜಸ್ಥಾನಕ್ಕೆ ಮರಳಿದ ಸಚಿನ್ ಪೈಲಟ್ ಪರ ‘ಐ ಲವ್ ಯೂ’ ಘೋಷಣೆ ಕೂಗಿದ ಬೆಂಬಲಿಗರು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಜೈಪುರ: ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರೊಂದಿಗಿನ ಭಿನ್ನಮತದಿಂದಾಗಿ ಕೆಲ ದಿನಗಳಿಂದ ದೆಹಲಿಯಲ್ಲಿ ಉಳಿದಿದ್ದ ಮಾಜಿ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌‌ ಅವರು ಇಂದು ರಾಜಸ್ಥಾನಕ್ಕೆ ಮರಳಿದರು. ಬಂಡಾಯ ಶಮನದ ಬಳಿಕ ರಾಜ್ಯಕ್ಕೆ ವಾಪಸ್‌ ಆದ ನಾಯಕನನ್ನು ‘ಐ ಲವ್‌ ಯೂ’, ‘ಸಚಿನ್‌ ಪೈಲಟ್‌ ಜಿಂದಾಬಾದ್‌’ ಘೋಷಣೆಗಳೊಂದಿಗೆ ಬೆಂಬಲಿಗರು ಬರಮಾಡಿಕೊಂಡರು.

ಪೈಲಟ್‌ ಅವರು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ದೆಹಲಿಯಲ್ಲಿ ಸೋಮವಾರ ಭೇಟಿಯಾಗಿದ್ದರು. ಮುಖ್ಯಮಂತ್ರಿ ಗೆಹ್ಲೋಟ್‌ ಸರ್ಕಾರದ ವಿರುದ್ಧ ಪೈಲಟ್‌ ಬೆಂಬಲಿಗರು ಎತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಮೂರು ಸದಸ್ಯರ ಸಮಿತಿ ರಚಿಸಲಾಗಿದೆ. ಇದರೊಂದಿಗೆ ಭಿನ್ನಮತಕ್ಕೆ ತೆರೆಬಿದ್ದಿದೆ.

ರಾಹುಲ್‌ ಭೇಟಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿನ್‌, ಮಾತುಕತೆ ವೇಳೆ ಯಾವುದೇ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿಲ್ಲ. ಆಡಳಿತ, ಕಾರ್ಯಾಚರಣೆ ಮತ್ತು ಕಾರ್ಯಕರ್ತರನ್ನು ಗೌರವಿಸುವುದಕ್ಕೆ ಸಂಬಂಧಿಸಿದ ವಿಚಾರಗಳನ್ನಷ್ಟೇ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ ರಾಜಕೀಯ; ಸಚಿನ್‌ ಪೈಲಟ್‌ ಬಂಡಾಯ ಶಮನ

‘ಅನರ್ಹತೆಯ ನೋಟಿಸ್‌ ನೀಡಿದ ರೀತಿಯ ಬಗ್ಗೆ ದುಃಖವಾಗಿದೆ ಮತ್ತು ಅದನ್ನು 25 ದಿನಗಳ ಬಳಿಕ ಹಿಂಪಡೆಯಲಾಗಿದೆ. ನಾವು ನ್ಯಾಯಾಲಯಕ್ಕೆ ಹೋಗಿದ್ದೆವು. ಸಾಕಷ್ಟು ಪ್ರಕರಣಗಳೂ ದಾಖಲಾಗಿವೆ. ಈ ಕ್ರಮಗಳನ್ನು ತಪ್ಪಿಸಬಹುದಿತ್ತು. ನಾನು ನನ್ನ ಸಮಸ್ಯೆಗಳನ್ನು ಎತ್ತಿದ್ದೇನೆ. ಇದು ದ್ವೇಷ ರಾಜಕಾರಣವಲ್ಲ. ನಾನು ಯಾವುದೇ ಹುದ್ದೆಗಾಗಿ ಬೇಡಿಕೆಯನ್ನು ಇರಿಸಿಲ್ಲ. ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧನಿದ್ದೇನೆ’ ಎಂದು ತಿಳಿಸಿದ್ದಾರೆ.

‘ನಾವು ನಮ್ಮ ಪಕ್ಷದ ನಾಯಕತ್ವದ ಬಗ್ಗೆ, ಪಕ್ಷದ ಬಗ್ಗೆ, ಅದರ ಸಿದ್ಧಾಂತಗಳ ಬಗ್ಗೆ ಮತ್ತು ಸರ್ಕಾರದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ನಾವು ಸರ್ಕಾರದ ಆಡಳಿತ ಮತ್ತು ಕಾರ್ಯಾಚರಣೆ ಕುರಿತು ಬೊಟ್ಟು ಮಾಡಿದ್ದೇವೆ. ಈ ಬಗ್ಗೆ ಪ್ರಶ್ನೆಗಳನ್ನು ಎತ್ತಲು ನಮಗೆ ಸಂಪೂರ್ಣ ಹಕ್ಕು ಇದೆ ಎಂದು ಭಾವಿಸಿದ್ದೇನೆ’ ಎಂದಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ ರಾಜಕಾರಣಕ್ಕೆ ಹೊಸ ತಿರುವು: ಸಚಿನ್ ಪೈಲಟ್ ಪರ ಹೇಳಿಕೆ ನೀಡಿದ ಕಾಂಗ್ರೆಸ್

‘ನಾವು ಕಾಂಗ್ರೆಸ್‌ನಲ್ಲಿಯೇ ಉಳಿಯುತ್ತೇವೆ ಎಂಬ ನಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಿದ್ದೇವೆ. ನನ್ನ ರಾಜಕೀಯವು ಸತ್ಯ ಮತ್ತು ತತ್ವಗಳನ್ನು ಆಧರಿಸಿದೆ. ಇಂದಿಗೂ ನನಗೆ ಯಾವುದೇ ಹುದ್ದೆಯ ದುರಾಸೆ ಇಲ್ಲ. ಸ್ಥಾನಗಳು ಬರುತ್ತವೆ ಹೋಗುತ್ತವೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು