ಗುರುವಾರ , ಅಕ್ಟೋಬರ್ 29, 2020
26 °C

ಲೈಂಗಿಕ ಕಾರ್ಯಕರ್ತೆಯರಿಗೂ ಪರಿಹಾರ: ಸರ್ಕಾರಗಳಿಗೆ ‘ಸುಪ್ರೀಂ’ ನಿರ್ದೇಶನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲೈಂಗಿಕ ಕಾರ್ಯಕರ್ತೆಯರನ್ನು ಕೋವಿಡ್‌ ಪರಿಹಾರ ವ್ಯವಸ್ಥೆಯಿಂದ ಹೊರಗಿಡಲಾಗಿದ್ದು, ಅವರಿಗೆ ನೆರವು ಒದಗಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್‌, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮಂಗಳವಾರ ನಿರ್ದೇಶನ ನೀಡಿದೆ.

‘ಕೋವಿಡ್‌–19 ಕಾರಣದಿಂದ ಲೈಂಗಿಕ ಕಾರ್ಯಕರ್ತೆಯರು ತೀವ್ರ ಸಮಸ್ಯೆ ಎದುರಿಸಿದ್ದಾರೆ. ಅವರ ಸಂಕಷ್ಟಗಳಿಗೂ ತುರ್ತಾಗಿ ಸ್ಪಂದಿಸಬೇಕು’ ಎಂದು ಒತ್ತಾಯಿಸಿ, ಕೋಲ್ಕತ್ತದ ಸರ್ಕಾರೇತರ ಸಂಸ್ಥೆ ‘ದರ್ಬಾರ್‌ ಮಹಿಳಾ ಸಮನ್ವಯ ಸಮಿತಿ’ಯು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅದನ್ನು ವಿಚಾರಣೆಗೆ ಎತ್ತಿಕೊಂಡ, ನ್ಯಾಯಮೂರ್ತಿ ಎಲ್‌. ನಾಗೇಶ್ವರ ರಾವ್‌ ನೇತೃತ್ವದ ಪೀಠವು ಈ ನಿರ್ದೇಶನ ನೀಡಿದೆ.

ಗುರುತುಪತ್ರಕ್ಕಾಗಿ ಒತ್ತಾಯಿಸದೆಯೇ ಲೈಂಗಿಕ ಕಾರ್ಯಕರ್ತೆಯರಿಗೆ ಪಡಿತರ ವಿತರಣೆ ಹಾಗೂ ಅವರ ಖಾತೆಗಳಿಗೆ ನೇರ ಹಣದ ವರ್ಗಾವಣೆ ಮಾಡುವ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌, ಆರ್‌.ಎಸ್‌. ಪುರಿ ಹಾಗೂ ರಾಜ್ಯ ಸರ್ಕಾರಗಳ ಪರವಾಗಿ ಹಾಜರಾಗಿದ್ದ ವಕೀಲರಿಗೆ ಕೋರ್ಟ್‌ ಸೂಚನೆ ನೀಡಿದೆ.

‘ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಹಾಗೂ ತೆಲಂಗಾಣದ ಒಟ್ಟು 1.2 ಲಕ್ಷ ಲೈಂಗಿಕ ಕಾರ್ಯಕರ್ತೆಯರಲ್ಲಿ ಶೇ 96ರಷ್ಟು ಮಂದಿ ಆದಾಯ ಮೂಲವನ್ನೇ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ ಎಂಬುದು ಈಚೆಗೆ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ’ ಎಂದು ಎನ್‌ಜಿಒ ಪರ ವಕೀಲ ಆನಂದ್‌ ಗ್ರೋವರ್‌ ಕೋರ್ಟ್‌ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು