ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಐಟಿ ತನಿಖೆ ಆದೇಶ ರದ್ದುಗೊಳಿಸಿದ ‘ಸುಪ್ರೀಂ’

ಬಿಆರ್‌ಎಸ್‌ ಶಾಸಕರ ಖರೀದಿ ಯತ್ನ ಪ್ರಕರಣ
Last Updated 24 ನವೆಂಬರ್ 2022, 16:42 IST
ಅಕ್ಷರ ಗಾತ್ರ

ನವದೆಹಲಿ: ಭಾರತ ರಾಷ್ಟ್ರ ಸಮಿತಿ (ಈ ಹಿಂದಿನ ಟಿಆರ್‌ಎಸ್‌) ಪಕ್ಷದ ಶಾಸಕರ ಖರೀದಿ ಯತ್ನ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸಲು ಅನುಮತಿ ನೀಡಿದ್ದ ತೆಲಂಗಾಣ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಗುರುವಾರ ರದ್ದುಗೊಳಿಸಿದೆ.

ಹೈಕೋರ್ಟ್‌ ಆದೇಶ ಪ್ರಶ್ನಿಸಿ ಆರೋಪಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಮತ್ತು ವಿಕ್ರಂ ನಾಥ್‌ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ ‘ತೆಲಂಗಾಣ ಹೈಕೋರ್ಟ್‌ನ ವಿಭಾಗೀಯ ಪೀಠವು ನವೆಂಬರ್‌ 15ರಂದು ನೀಡಿದ್ದ ತೀರ್ಪು ಕಾನೂನಿನಡಿ ಸಮರ್ಥನೀಯವಲ್ಲ’ ಎಂದು ಹೇಳಿತು.

‘‍ಸಾಧ್ಯವಾದಷ್ಟು ಬೇಗ ಅಂದರೆ ಮುಂದಿನ ನಾಲ್ಕು ವಾರಗಳ ಒಳಗೆಪ್ರಕರಣದ ವಿಚಾರಣೆ ನಡೆಸಿ’ ಎಂದು ನ್ಯಾಯಪೀಠವು ಹೈಕೋರ್ಟ್‌ಗೆ ತಾಕೀತು ಮಾಡಿತು.

‘ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠವು ಪ್ರಕರಣದ ವಿಚಾರಣೆಯನ್ನು ನವೆಂಬರ್‌ 29ರಂದು ನಿಗದಿಪಡಿಸಿದೆ. ತನ್ನ ಈ ನಿರ್ಧಾರವನ್ನು ಮರುಪರಿಷ್ಕರಿಸಬೇಕು. ಈ ಪ್ರಕರಣದ ವಿಚಾರದಲ್ಲಿ ಏಕಸದಸ್ಯ ನ್ಯಾಯಪೀಠ ಕೈಗೊಂಡಿರುವ ನಿಲುವು ಅಸಮರ್ಥನೀಯವಾದುದು’ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಪ್ರಕರಣದ ಮೂವರು ಆರೋಪಿಗಳು ಶರಣಾಗತರಾಗಬೇಕು ಎಂದು ಹೈಕೋರ್ಟ್‌ ನಿರ್ದೇಶಿಸಿರುವುದಕ್ಕೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

‘ಏಕಸದಸ್ಯ ನ್ಯಾಯಪೀಠವು ತನ್ನ ತೀರ್ಪಿನ ವೇಳೆ 2014ರಲ್ಲಿ ಅರ್ಣೇಶ್‌ಕುಮಾರ್‌ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಂತೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದ್ದನ್ನು ಉಲ್ಲೇಖಿಸಿದೆ. ಆ ತೀರ್ಪನ್ನು ಈ ಪ್ರಕರಣಕ್ಕೆ ಅನ್ವಯಿಸಿರುವುದು ಅಸಮಂಜಸ. ಇಂತಹ ಉಲ್ಲೇಖ ಅನಗತ್ಯವಾದುದು’ ಎಂದೂ ನ್ಯಾಯಪೀಠ ತಿಳಿಸಿದೆ.

‘ರಾಮಚಂದ್ರ ಭಾರತಿ ಅಲಿಯಾಸ್‌ ವಿ.ಕೆ.ಶರ್ಮಾ ಸೇರಿದಂತೆ ಪ್ರಕರಣದ ಇತರೆ ಆರೋಪಿಗಳು 22 ದಿನಗಳಿಂದ ಜೈಲಿನಲ್ಲಿದ್ದಾರೆ. ಅವರ ಜಾಮೀನು ಅರ್ಜಿಯನ್ನು ಸಾಧ್ಯವಾದಷ್ಟು ಬೇಗ ಪರಿಗಣಿಸಿ’ ಎಂದು ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠಕ್ಕೆ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT