ನವದೆಹಲಿ: ‘ಒಂದು ಶ್ರೇಣಿ, ಒಂದು ಪಿಂಚಣಿ’ (ಒಆರ್‌ಒಪಿ) ಯೋಜನೆಗೆ ಸಂಬಂಧಿಸಿದಂತೆ 2022ರ ತೀರ್ಪಿಗೆ ಕೇಂದ್ರ ಸರ್ಕಾರ ಬದ್ಧವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ತಾಕೀತು ಮಾಡಿತು.
ಅಲ್ಲದೆ, ಸೇನೆಯ ನಿವೃತ್ತ ಸಿಬ್ಬಂದಿಗೆ ನೀಡಬೇಕಿರುವ 2019–22ನೇ ಅವಧಿಯ ಬಾಕಿಯ ಒಟ್ಟು ಮೊತ್ತ ₹ 28,000 ಕೋಟಿಯನ್ನು 2024ರ ಫೆಬ್ರುವರಿ 28ರ ಒಳಗೆ ಪಾವತಿಸಬೇಕು ಎಂದೂ ಗಡುವು ನಿಗದಿಪಡಿಸಿತು.
ಮುಖ್ಯ ನ್ಯಾಯಮೂರ್ತಿ ಡಿ.ವೈಚಂದ್ರಚೂಡ್ ನೇತೃತ್ವದ ಪೀಠವು, ಒಆರ್‌ಒಪಿ ಬಾಕಿ ಪಾವತಿಗೆ ಸಂಬಂಧಿಸಿ ಮುಚ್ಚಿದ ಲಕೋಟೆಯಲ್ಲಿ ಕೇಂದ್ರ ಸರ್ಕಾರವು ನೀಡಿದ್ದ ವಿವರಣೆಯನ್ನು ಸ್ವೀಕರಿಸಲು ನಿರಾಕರಿಸಿತು.
ಸೇನೆಯ ವಿವಿಧ ಹಂತದ, ಮಾಜಿ ಸಿಬ್ಬಂದಿಗೆ ನೀಡಬೇಕಾಗಿರುವ ಬಾಕಿ ಉಳಿದಿರುವ ಮೊತ್ತವನ್ನು ವಿತರಿಸಲು ಕಾಲಮಿತಿಯನ್ನು ಪೀಠವು ನಿಗದಿಪಡಿಸಿತು.
ಒಆರ್‌ಒಪಿ ಯೋಜನೆಯ ನಿಯಮಗಳಿಗೆ ಸಂಬಂಧಿಸಿದಂತೆ ಈ ಹಿಂದೆ ನೀಡಲಾಗಿರುವ ತೀರ್ಪಿಗೆ ಬದ್ಧವಾಗಿರುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದೂ ಸ್ಪಷ್ಟಪಡಿಸಿತು.
ಒಟ್ಟು 25 ಲಕ್ಷ ಪಿಂಚಣಿದಾರರಿದ್ದು, ಹೆಚ್ಚುವರಿ ಪಿಂಚಣಿ ಪಡೆಯುತ್ತಿರುವ 4 ಲಕ್ಷ ಜನರು ಇದರ ವ್ಯಾಪ್ತಿಗೆ ಬರುವುದಿಲ್ಲ. ಬಾಕಿಯನ್ನು ಕೇಂದ್ರವು ಏ.30, 2023ರ ಒಳಗೆ ಪಾವತಿಸಬೇಕು ಎಂದು ಸುಪ್ರಿಂ ಕೋರ್ಟ್ ಈ ಹಿಂದೆ ಆದೇಶಿಸಿತು. ಈಗ ಬಾಕಿ ಪಾವತಿಗೆ 2024ರ ಫೆಬ್ರುವರಿ 28ಕ್ಕೆ ಗಡುವು ನಿಗದಿಪಡಿಸಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪಾರ್ದಿವಾಲಾ ಪೀಠದ ಇತರ ಸದಸ್ಯರು. ಆರು ಲಕ್ಷ ಪಿಂಚಣಿದಾರರ ಕುಟುಂಬಗಳು ಮತ್ತು ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ನೀಡಬೇಕಿರುವ ಬಾಕಿಯನ್ನು ಏಪ್ರಿಲ್ 30, 2023ರ ಒಳಗೆ ಪಾವತಿಸಬೇಕು ಎಂದು ಪೀಠವು ತಾಕೀತು ಮಾಡಿತು.
70 ವರ್ಷ ಅಥವಾ ಆ ವಯಸ್ಸು ಮೀರಿರುವ ನಾಲ್ಕರಿಂದ ಐದು ಲಕ್ಷ ಪಿಂಚಣಿದಾರರಿಗೆ ನೀಡಬೇಕಿರುವ ಬಾಕಿ ಮೊತ್ತವನ್ನು ಒಂದು ಅಥವಾ ಹೆಚ್ಚಿನ ಕಂತುಗಳಲ್ಲಿ ಜೂನ್ 30ರ ಒಳಗೆ ಪಾವತಿಸಬೇಕು.
ಇನ್ನುಳಿದ 10–11 ಲಕ್ಷ ಪಿಂಚಣಿದಾರರಿಗೆ ಬಾಕಿಯನ್ನು ಮೂರು ಸಮಾನ ಕಂತುಗಳಲ್ಲಿ ಮುಂದಿನ ವರ್ಷ ಫೆಬ್ರುವರಿ 28ರ ಒಳಗೆ ಪಾವತಿಸಬಹುದು ಎಂದು ಪೀಠವು ಗಡುವು ನಿಗದಿಪಡಿಸಿತು.
‘ಮುಚ್ಚಿದ ಲಕೋಟೆ ವ್ಯವಸ್ಥೆ ಸರಿಯಲ್ಲ’
ನವದೆಹಲಿ (ಪಿಟಿಐ): ಬಾಕಿ ಕುರಿತಂತೆ ಕೇಂದ್ರ ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ವಿವರಣೆಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ಪೀಠವು ಖಡಾಖಂಡಿತವಾಗಿ ನಿರಾಕರಿಸಿತು.
ಸುಪ್ರೀಂ ಕೋರ್ಟ್‌ನಲ್ಲಿ ಇಂತಹ ಮುಚ್ಚಿದ ಲಕೋಟೆಯ ಅಭ್ಯಾಸಕ್ಕೆ ಅಂತ್ಯ ಹಾಡಬೇಕಾಗಿದೆ. ಇದು, ನ್ಯಾಯಯುತ ನ್ಯಾಯ ಪ್ರಕ್ರಿಯೆಗೆ ಮೂಲಭೂತವಾಗಿ ವಿರುದ್ಧವಾಗಿರುವ ವ್ಯವಸ್ಥೆ ಎಂದು ಪೀಠ ಹೇಳಿತು.
‘ಮುಚ್ಚಿದ ಲಕೋಟೆ ಸ್ವೀಕರಿಸುವ ವ್ಯವಸ್ಥೆಗೆ ವೈಯಕ್ತಿಕವಾಗಿ ನಾನು ವಿರೊಧವಿದ್ದೇನೆ. ಕೋರ್ಟ್‌ನಲ್ಲಿ ಪಾರದರ್ಶಕತೆ ಇರಬೇಕು. ಆದೇಶ ನೀಡುವ ಪ್ರಕ್ರಿಯೆಯಲ್ಲಿ ಗೋಪ್ಯ ಕಾಪಾಡುವುದು ಏನಿದೆ?’ ಎಂದು ಮುಖ್ಯನ್ಯಾಯಮೂರ್ತಿ ಪ್ರಶ್ನಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.