ಗುರುವಾರ , ಏಪ್ರಿಲ್ 15, 2021
23 °C

ಚುನಾವಣಾ ಬಾಂಡ್‌ ಮಾರಾಟಕ್ಕೆ ತಡೆ ಕೋರಿದ ಅರ್ಜಿ: ಮಾ. 24ರಂದು ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭಾ ಚುನಾವಣೆಗೆ ಮೊದಲು ಹೊಸ ಚುನಾವಣಾ ಬಾಂಡ್‌ಗಳ ಮಾರಾಟ  ತಡೆಯುವಂತೆ ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ ಎಂಬ ಎನ್‌ಜಿಒ ಸಲ್ಲಿಸಿರುವ ಅರ್ಜಿಯನ್ನು ಮಾರ್ಚ್ 24ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್‌. ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸುವುದಾಗಿ ಬುಧವಾರ ಹೇಳಿದೆ. ಎನ್‌ಜಿಒ ಪರ ಹಾಜರಾಗಿದ್ದ ವಕೀಲ ಪ್ರಶಾಂತ್‌ ಭೂಷಣ್‌ ಈ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.

‘ಮುಂಬರುವ ಚುನಾವಣೆಗಳಿಗಾಗಿ ಹೊಸ ಚುನಾವಣಾ ಬಾಂಡ್‌ ವಿತರಣೆಯನ್ನು ಏಪ್ರಿಲ್‌ನಿಂದ ಶುರು ಮಾಡಲು ತಯಾರಿ ನಡೆದಿದೆ. ಈ ಬಾಂಡ್‌ಗಳು ನಮ್ಮ ಪ್ರಜಾಪ್ರಭುತ್ವಕ್ಕೆ ಬಹಳ ಹಾನಿಕಾರಕವೆಂದು ಆರ್‌ಬಿಐ ಮತ್ತು ಚುನಾವಣಾ ಆಯೋಗದ ಎರಡು ದಾಖಲೆಗಳು ಹೇಳುತ್ತವೆ. ಹೊಸದಾಗಿ ಚುನಾವಣಾ ಬಾಂಡ್‌ಗಳನ್ನು ವಿತರಿಸುವುದನ್ನು ತಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ. ನಮಗೆ ಪ್ರಕರಣದ ತುರ್ತು ವಿಚಾರಣೆಯ ಅಗತ್ಯವಿದೆ’ ಎಂದು ಭೂಷಣ್ ವಾದಿಸಿದ್ದಾರೆ.

ಅನಾಮಧೇಯ ದಾನಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಖರೀದಿಸುವ ಚುನಾವಣಾ ಬಾಂಡ್ ಯೋಜನೆ 2018 ಅನ್ನು ಪ್ರಶ್ನಿಸಿ ಬಾಕಿ ಇರುವ ಮೂರು ಅರ್ಜಿಗಳನ್ನು ಸುಪ್ರೀಂಕೋರ್ಟ್‌ ಇತ್ಯರ್ಥಪಡಿಸುವವರೆಗೆ ಹೊಸ ಚುನಾವಣಾ ಬಾಂಡ್‌ಗಳ ಮಾರಾಟ ನಿಲ್ಲಿಸಬೇಕು ಎಂದು ಎನ್‌ಜಿಒ ಕಳೆದ ವಾರವೇ ಮನವಿ ಅರ್ಜಿ ಸಲ್ಲಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು