ಸೋಮವಾರ, ಆಗಸ್ಟ್ 15, 2022
27 °C

ತಿರುಚಿದ ವಿಡಿಯೊ ಪ್ರಕರಣ: ತಲೆಮರೆಸಿಕೊಂಡ ಟಿ.ವಿ ನಿರೂಪಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಪುರ: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಕುರಿತು ತಿರುಚಿದ ವಿಡಿಯೊ ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ‌‌‌‌ಬುಧವಾರ ರಾಯಪುರ ಪೊಲೀಸರು ಗಾಜಿಯಾಬಾದ್‌ನಲ್ಲಿರುವ ಝೀ ಸುದ್ದಿ ವಾಹಿನಿ ನಿರೂಪಕ ರೋಹಿತ್‌ ರಂಜನ್‌ ನಿವಾಸಕ್ಕೆ ಭೇಟಿ ನೀಡಿದ ವೇಳೆ ಅವರು ಅಲ್ಲಿ ಇರಲಿಲ್ಲ. ತಲೆಮರೆಸಿಕೊಂಡಿರುವ ಅವರ ಪತ್ತೆಗೆ ಶೋಧ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

’ಪೊಲೀಸರು ಬೆಳಿಗ್ಗೆ 9 ಗಂಟೆಗೆ ಅವರ ಮನೆಗೆ ಭೇಟಿ ನೀಡಿದ ವೇಳೆ ಬೀಗ ಹಾಕಲಾಗಿತ್ತು. ಮಂಗಳವಾರವಷ್ಟೇ ರೋಹಿತ್ ಅವರನ್ನು ನೊಯ್ಡಾ ಪೊಲೀಸರು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಈ ವಿಷಯವನ್ನು ಅವರು ರಾಯಪುರ ಪೊಲೀಸರಿಗೆ ತಿಳಿಸಿರಲಿಲ್ಲ. ಸಂಜೆ ಪತ್ರಿಕಾ ಹೇಳಿಕೆಯಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದಾಗಿ ಹೇಳಿದ್ದರು‘ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಪ್ರಶಾಂತ್ ಅಗರವಾಲ್ ತಿಳಿಸಿದ್ದಾರೆ.

ಈ ನಡುವೆ ತಿರುಚಿದ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ರಾಜ್ಯಗಳಲ್ಲಿ ಎಫ್‌ಐಆರ್ ದಾಖಲಾಗಿರುವುದರಿಂದ ರಕ್ಷಣೆ ನೀಡುವಂತೆ ಕೋರಿ ರೋಹಿತ್ ರಂಜನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸುವುದಾಗಿ ಸುಪ್ರೀಂ ಕೋರ್ಟ್  ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ.ಕೆ.ಮಹೇಶ್ವರಿ ಅವರ ರಜಾಕಾಲದ ಪೀಠ ತಿಳಿಸಿದೆ. 

ರಾಹುಲ್ ಗಾಂಧಿ ಕುರಿತು ತಿರುಚಿದ ವಿಡಿಯೊ ಪ್ರಸಾರ ಮಾಡಿದ ಝೀ ಸುದ್ದಿ ವಾಹಿನಿ ಮತ್ತು ನಿರೂಪಕ ರೋಹಿತ್‌ ರಂಜನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸುದ್ದಿ ಪ್ರಸಾರ ಮತ್ತು ಡಿಜಿಟಲ್‌ ಮಾನದಂಡಗಳ ಪ್ರಾಧಿಕಾರ (ಎನ್‌ಬಿಡಿಎಸ್‌ಎ)ಕ್ಕೆ ಕಾಂಗ್ರೆಸ್‌ ದೂರು ಸಲ್ಲಿಸಿದೆ. 

ಪ್ರಾಧಿಕಾರದ ಅಧ್ಯಕ್ಷರಿಗೆ ಪತ್ರ ಬರೆದಿರುವ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಜುಲೈ 1 ರಂದು ವಾಹಿನಿ ಪ್ರಸಾರ ಮಾಡಿದ ’ಡಿಎನ್‌ಎ‘ ಹೆಸರಿನ ಕಾರ್ಯಕ್ರಮದಲ್ಲಿ ನಿರೂಪಕ ದುರುದ್ದೇಶಪೂರಿತವಾಗಿ  ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು