ಬುಧವಾರ, ಡಿಸೆಂಬರ್ 7, 2022
25 °C
ಭಿನ್ನಮತದ ತೀರ್ಪು ನೀಡಿದ ನ್ಯಾಯಮೂರ್ತಿ ಎಸ್ ರವೀಂದ್ರ ಭಟ್

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10 ಮೀಸಲಾತಿ ಸಂವಿಧಾನ ಬದ್ಧ: ಸುಪ್ರೀಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಸಂವಿಧಾನದ 103ನೇ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದು ಸೋಮವಾರ ಬಹುಮತದ ತೀರ್ಪು ನೀಡಿದೆ. ಐವರು ನ್ಯಾಯಮೂರ್ತಿಗಳಿದ್ದ ಸಂವಿಧಾನ ಪೀಠದಲ್ಲಿ ಮೂವರು ನ್ಯಾಯಮೂರ್ತಿಗಳು, 103ನೇ ತಿದ್ದುಪಡಿಯಿಂದ ಸಂವಿಧಾನದ ಮೂಲ ರಚನೆಗೆ ಧಕ್ಕೆಯಾಗುವುದಿಲ್ಲ ಎಂದು ತೀರ್ಪು ನೀಡಿದ್ದಾರೆ. ಇಬ್ಬರು ನ್ಯಾಯಮೂರ್ತಿಗಳು ಇದಕ್ಕೆ ಭಿನ್ನ ತೀರ್ಪು ನೀಡಿದ್ದಾರೆ.

ಬಹುಮತದ ತೀರ್ಪು ತಿದ್ದುಪಡಿಯ ಪರವಾಗೇ ಇದ್ದ ಕಾರಣ, ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ 40ಕ್ಕೂ ಹೆಚ್ಚು ಅರ್ಜಿಗಳನ್ನು ವಜಾ ಮಾಡಲಾಗಿದೆ.

2019ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯೂಎಸ್‌) ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಉದ್ದೇಶದಿಂದ ಸಂವಿಧಾನಕ್ಕೆ 103ನೇ ತಿದ್ದುಪಡಿ ತಂದಿತ್ತು. ಸಾಮಾನ್ಯ ವರ್ಗಗಳಲ್ಲಿ ಆರ್ಥಿಕವಾಗಿ ದುರ್ಬಲವಾದವರಿಗೆ ಇದು ಅನ್ವಯವಾಗುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳನ್ನು ಈ ಮೀಸಲಾತಿಯಿಂದ ಹೊರಗೆ ಇಡಲಾಗಿತ್ತು. ಸರ್ಕಾರದ ಈ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು.

‘ಆರ್ಥಿಕ ಸ್ಥಿತಿಗತಿಯನ್ನು ಮಾನದಂಡವಾಗಿ ಇರಿಸಿಕೊಂಡು ಮೀಸಲಾತಿ ನೀಡುವ ಕ್ರಮದಿಂದ ಸಂವಿಧಾನದ ಮೂಲರಚನೆಗೆ ಧಕ್ಕೆಯಾಗುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳನ್ನು ಈ ಮೀಸಲಾತಿಯಿಂದ ಹೊರಗಿಟ್ಟ ಕಾರಣ
ದಿಂದಲೂ ಸಂವಿಧಾನದ ಮೂಲರಚನೆಗೆ ಧಕ್ಕೆಯಾಗುತ್ತದೆ. ಒಟ್ಟು ಮೀಸಲಾತಿಯ ಶೇ 50ರಷ್ಟು ಮಿತಿಯನ್ನು ಈ ತಿದ್ದುಪಡಿಯು ಉಲ್ಲಂಘಿಸುತ್ತದೆ’ ಎಂಬುದು ಅರ್ಜಿದಾರರ ವಾದವಾಗಿತ್ತು.

ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರ ನೇತೃತ್ವದ ಐವರು ಸದಸ್ಯರ ಸಂವಿಧಾನ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಿತ್ತು. ಸೆಪ್ಟೆಂಬರ್‌ನಲ್ಲಿ ಸತತ ಆರೂವರೆ ದಿನ ನಡೆದ ವಿಚಾರಣೆಯ ನಂತರ ತೀರ್ಪನ್ನು ಕಾಯ್ದಿರಿಸಲಾಗಿತ್ತು. ಐವರು ಸದಸ್ಯರ ಪೀಠವು ಒಟ್ಟು ನಾಲ್ಕು ಪ್ರತ್ಯೇಕ ತೀರ್ಪುಗಳನ್ನು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಮತ್ತು ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಅವರು 100 ಪುಟಗಳ ಒಂದೇ ತೀರ್ಪು ನೀಡಿದ್ದು, ಈ ತಿದ್ದುಪಡಿಯು ಸಂವಿಧಾನದ ಮೂಲ ರಚನೆಗೆ ಧಕ್ಕೆ ತರುತ್ತದೆ ಎಂದಿದ್ದಾರೆ.

ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ, ಬೇಲಾ.ಎಂ. ತ್ರಿವೇದಿ ಮತ್ತು ದಿನೇಶ್ ಮಾಹೇಶ್ವರಿ ಅವರು ತಿದ್ದುಪಡಿಯ ಪರವಾಗಿ ತೀರ್ಪು ನೀಡಿದ್ದಾರೆ.

‘ಆರ್ಥಿಕ ಸ್ಥಿತಿಗತಿಯನ್ನು ಆಧರಿಸಿ ಮೀಸಲಾತಿ ನೀಡಿರುವುದರಿಂದ ಸಂವಿಧಾನದ ಮೂಲ ರಚನೆಗೆ ಧಕ್ಕೆಯಾಗಿಲ್ಲ. ಮೀಸಲಾತಿಯು ಎಲ್ಲರನ್ನೂ ಒಳಗೊಳ್ಳುವ ಸಾಧನವಾಗಿದೆ. ಈ ಸಾಧನವು ಕೇವಲ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗಷ್ಟೇ ಅಲ್ಲ’ ಎಂದು ಈಮೂವರು ನ್ಯಾಯಮೂರ್ತಿಗಳು ಹೇಳಿದ್ದಾರೆ.

‘ಆರ್ಥಿಕವಾಗಿ ದುರ್ಬಲರಾದವರು ಎಂಬುದನ್ನು ಒಂದು ಅನಗತ್ಯವಾದ ವರ್ಗೀಕರಣ ಎಂದು ಪರಿಗಣಿಸಬೇಕಿಲ್ಲ. ಸಮಾನರನ್ನು ಅಸಮಾನವಾಗಿ ಪರಿಗಣಿಸಲು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ ಅಸಮಾನರನ್ನು ಸಮಾನವಾಗಿ ಪರಿಗಣಿಸುವುದೂ ಸಂವಿಧಾನದಉಲ್ಲಂಘನೆಯಾಗುತ್ತದೆ. ಆರ್ಥಿಕವಾಗಿ ದುರ್ಬಲರು ಎಂಬುದು ಒಂದು ಪ್ರತ್ಯೇಕ ವರ್ಗವಾಗುತ್ತದೆ. ಹೀಗಾಗಿ ಈ ಮೀಸಲಾತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗದವರನ್ನು ಹೊರಗಿಡುವುದು ಅಸಮಾನತೆಯಾಗಲೀ ಅಥವಾ ಸಂವಿಧಾನದ ಉಲ್ಲಂಘನೆಯಾಗಲೀ ಆಗುವುದಿಲ್ಲ’ ಎಂದು ಈ ಮೂವರು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಹೇಳಿದ್ದಾರೆ.

ಯಾರಿಗೆ ಶೇ 50ರ ಮಿತಿ: ಮಂಡಲ್‌ ಆಯೋಗದ ಪ್ರಕರಣದಲ್ಲಿ 9 ಸದಸ್ಯರ ಪೀಠ 1992ರಲ್ಲಿ ನೀಡಿದ್ದ ತೀರ್ಪಿನ ಅನುಸಾರ, ಶೇ 50ರ ಮೀಸಲು ಮಿತಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ವರ್ಗಕ್ಕಷ್ಟೇ ಅನ್ವಯವಾಗಲಿದೆ. ಈ ಮಿತಿ ಹೊರತಾಗಿ ಶೇ 10ರ ಇಡಬ್ಲ್ಯುಎಸ್‌ ಕೋಟಾ ನಿಗದಿಪಡಿಸಲಾಗಿದೆ ಎಂದೂ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು.

ಇಡಬ್ಲ್ಯೂಎಸ್‌ ಮೀಸಲಾತಿಯ ಪ್ರಯೋಜನ ಪಡೆದು, ಮುಂದುವರಿದವರನ್ನು ಮುಂದಿನ ದಿನಗಳಲ್ಲಿ ಆ ವರ್ಗದಿಂದ ಹೊರಗಿಡಬೇಕು ಎಂದು ನ್ಯಾಯಮೂರ್ತಿ ಜೆ.ಬಿ.ಪಾರ್ದಿವಾಲಾ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರು ಮಂಗಳವಾರ ನಿವೃತ್ತರಾಗಲಿದ್ದಾರೆ.

‘ಸಂವಿಧಾನದ ಮೂಲ ರಚನೆಗೆ ಧಕ್ಕೆ’
‘ಈ ಮೀಸಲಾತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳನ್ನು ಹೊರಗಿಟ್ಟಿದ್ದು ಸಂವಿಧಾನದ ಉಲ್ಲಂಘನೆಯಾಗುತ್ತದೆ. ಅಸಮಾನತೆಯ ಆಚರಣೆಯನ್ನು ಸಂವಿಧಾನವು ನಿಷೇಧಿದೆ. ಆದರೆ ಈ ತಿದ್ದುಪಡಿಯು, ಅಸಮಾನತೆಯನ್ನೇ ಆಚರಿಸುತ್ತದೆ. ಈ ರೀತಿ ಹೊರಗಿಡುವ ಪದ್ಧತಿಯನ್ನು ಸಂವಿಧಾನವು ಅನುಮತಿಸುವುದಿಲ್ಲ. ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೂಲ ರಚನೆಗೆ 103ನೇ ತಿದ್ದುಪಡಿಯು ಧಕ್ಕೆ ತರುತ್ತದೆ. ಸಾಮಾಜಿಕವಾಗಿ ಹಿಂದುಳಿದವರು ಮೀಸಲಾತಿಯಿಂದಾಗಿ ಈಗ ಉತ್ತಮ ಸ್ಥಿತಿಯಲ್ಲಿ ಇದ್ದಾರೆ ಎಂಬುದನ್ನು ನಂಬುವಂತೆ ಈ ತಿದ್ದುಪಡಿಯು ಒತ್ತಾಯಿಸುತ್ತದೆ. ಸಾಮಾಜಿಕ ಹಿನ್ನೆಲೆಯ ಆಧಾರದಲ್ಲಿ ಹೊರಗಿಡುವ ಕ್ರಮವು, ಸಮಾನತೆಯನ್ನು ಧ್ವಂಸ ಮಾಡುತ್ತದೆ’ ಎಂದು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಮತ್ತು ನ್ಯಾಯಮೂರ್ತಿ ರವೀಂದ್ರ ಭಟ್ ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

‘ಒಟ್ಟು ಮೀಸಲಾತಿಯ ಶೇ 50ರಷ್ಟು ಮಿತಿಯನ್ನು ಮೀರಲು ಅವಕಾಶ ಮಾಡಿಕೊಡುವುದು ಮತ್ತಷ್ಟು ಅಸಮಾನತೆಗೆ ಕಾರಣವಾಗಬಹುದು. ಅಂತಿಮವಾಗಿ ಅದು ಮತ್ತಷ್ಟು ವಿಭಜನೆಗೆ ದಾರಿ ಮಾಡಿಕೊಡಬಹುದು. ಆಗ ಸಮಾನತೆ ಎಂಬುದು ಕೇವಲ ಮೀಸಲಾತಿಯ ಹಕ್ಕು ಎಂಬ ಮಟ್ಟಕ್ಕೆ ಕುಸಿಯಬಹುದು’ ಎಂದು ಈ ಇಬ್ಬರು ನ್ಯಾಯಮೂರ್ತಿಗಳು ಹೇಳಿದ್ದಾರೆ.

‘ಮೀಸಲಾತಿಗೆ ಕಾಲಮಿತಿ ಬೇಕು’
ನ್ಯಾಯಮೂರ್ತಿ ಬೇಲಾ.ಎಂ.ತ್ರಿವೇದಿ, ಮೀಸಲಾತಿಗೆ ಕಾಲಮಿತಿ ಇರಬೇಕು. ಮೀಸಲಾತಿ ಕೊನೆಗೊಂಡರೆ ಜಾತಿ ಮತ್ತು ವರ್ಗ ರಹಿತ ಸಮಾಜ ಸೃಷ್ಟಿಯಾಗುತ್ತದೆ ಎಂದು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಗೆ ಕಾಲಮಿತಿ ಇರಬೇಕು ಎಂದು 1985ರಲ್ಲಿ ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿತ್ತು. ಮೀಸಲಾತಿಯ ಉದ್ದೇಶವು 50 ವರ್ಷಗಳಲ್ಲಿ ಈಡೇರಬೇಕು ಎನ್ನಲಾಗಿತ್ತು. ಆದರೆ, ನಾವೀಗ 75ನೇ ವರ್ಷದಲ್ಲಿದ್ದೇವೆ ಮತ್ತು ಮೀಸಲಾತಿಯ ಉದ್ದೇಶ ಪೂರ್ಣಗೊಂಡಿಲ್ಲ. ಮೀಸಲಾತಿ ಜಾರಿಗೆ ಬರಲು ಭಾರತದ ಪುರಾತನ ಜಾತಿ ಪದ್ಧತಿಯೇ ಕಾರಣ ಎನ್ನಲಾಗದು. ಈ ವರ್ಗಗಳಿಗೆ ಸಮಾನ ಅವಕಾಶ ನೀಡುವ ಉದ್ದೇಶದಿಂದ ಮೀಸಲಾತಿ ನೀಡಲಾಗಿತ್ತು. ದೇಶವು 75ನೇ ಸ್ವಾತಂತ್ರ್ಯೋತ್ಸವದಲ್ಲಿರುವ ಸಂದರ್ಭದಲ್ಲಿ, ಸಮಾಜದ ಹಿತಾಸಕ್ತಿಗಾಗಿ ಈ ಮೀಸಲಾತಿ ಪದ್ಧತಿಯನ್ನು ನಾವು ಮರುಪರಿಶೀಲಿಸಬೇಕಿದೆ. ಆಂಗ್ಲೊ ಇಂಡಿಯನ್‌ ಸಮುದಾಯಕ್ಕೆ ನೀಡಲಾಗಿದ್ದ ಮೀಸಲಾತಿ ಯನ್ನು ತೆಗೆಯಲಾಗಿದೆ. ಸಂವಿಧಾನವು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಗೆ, ಇಂಥದ್ದೇ ಕಾಲಮಿತಿ ಇರಬೇಕು. ಅಂತಹದ್ದೇ ಕಾಲಮಿತಿಯನ್ನು ಈ ವರ್ಗಗಳಿಗೂ ಅನ್ವಯಿಸಿದರೆ ಜಾತಿ ಮತ್ತು ವರ್ಗರಹಿತ ಸಮಾಜದ ನಿರ್ಮಾಣಕ್ಕೆ ಕಾರಣವಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಯಾರು, ಏನೆಂದರು?

ನಾಗರಿಕರ ನಡುವೆ ವೈಷಮ್ಯ ಬಿತ್ತಲು ಯತ್ನಿಸಿದ್ದ ಪಟ್ಟಭದ್ರ ಹಿತಾಸಕ್ತಿಯ ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಕಪಾಳಮೋಕ್ಷವಾಗಿದೆ.
–ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ

*
ಬಡಜನರಿಗೆ ನ್ಯಾಯ ಸಿಕ್ಕಿದೆ. ಯಾವ ಸಮುದಾಯಕ್ಕೆ ಸೇರಿದ್ದಾರೆ ಎಂಬುದನ್ನು ಪರಿಗಣಿಸದೇ, ಬಡವರಿಗೆ ನ್ಯಾಯ ಕಲ್ಪಿಸುವುದು ನಮ್ಮ ಗುರಿಯಾಗಿರಬೇಕು. ನಾನು ರಾಜಸ್ಥಾನದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮೀಸಲಾತಿ ಕಲ್ಪಿಸುವ ನಿರ್ಣಯವನ್ನು ವಿಧಾನಸಭೆಯಲ್ಲಿ ಕೈಗೊಂಡಿದ್ದೆ.
–ಅಶೋಕ್ ಗೆಹಲೋತ್, ರಾಜಸ್ಥಾನ ಮುಖ್ಯಮಂತ್ರಿ

*
ಬಡಜನರೆಲ್ಲ ಒಂದೇ ಜಾತಿ. ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಜಾರಿಗೊಳಿಸಬೇಕು. ಒಬಿಸಿ ಜನ ಅಧಿಕವಾಗಿರುವ ರಾಜ್ಯಗಳಲ್ಲಿ
ಮಧ್ಯಪ್ರದೇಶದ ಮಾದರಿಯಲ್ಲಿ ವಿಶೇಷ ಸಂದರ್ಭದಲ್ಲಿ ಶೇ 27ರಷ್ಟು ಮೀಸಲಾತಿ ನೀಡಬಹುದು
–ಉಮಾ ಭಾರತಿ, ಬಿಜೆಪಿ ನಾಯಕಿ

*
ಮೀಸಲಾತಿ ವಿಚಾರವು ರಾಜಕೀಯವಾಗಿ ಇತ್ಯರ್ಥವಾಗಬೇಕೇ ಹೊರತು ನ್ಯಾಯಾಂಗದ ಪರಿಧಿಯಲ್ಲಿ ಅಲ್ಲ. ಹಿಂದೂಗಳಲ್ಲಿ ಬಹು
ಸಂಖ್ಯಾತರಾಗಿರುವ ಒಬಿಸಿ ಸಮುದಾಯಕ್ಕೆ ವಿರುದ್ಧವಾಗಿರುವ ಈ ಮೀಸಲಾತಿ ಖಂಡಿಸಿ ಬಿಜೆಪಿ ಸರ್ಕಾರದ ವಿರುದ್ಧ ಎಲ್ಲರೂ ಹೋರಾಟಕ್ಕೆ ಕೈಜೋಡಿಸಬೇಕು. ಕಾಂಗ್ರೆಸ್ ಹಾಗೂ ಎಡಪಕ್ಷಗಳು ತಮ್ಮ ನಿಲುವು ಬದಲಿಸಿ, ಮೀಸಲಾತಿ ವಿರೋಧಿಸಬೇಕು
–ತಿರುಮಾವಳವನ್, ವಿಸಿಕೆ ಮುಖಂಡ

**
ಪ್ರಮುಖರ ಅಭಿಪ್ರಾಯಗಳು

‘ರಾಜ್ಯದಲ್ಲೂ ಶೇ 10 ಮೀಸಲಾತಿ’
ಸಮಾಜದಲ್ಲಿರುವ ಎಲ್ಲ ವರ್ಗದ ಬಡವರಿಗೆ ಶೇ 10 ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರವನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆ. ಮುಂದೆ ಕರ್ನಾಟಕದಲ್ಲೂ ಮೀಸಲಾತಿ ಇಲ್ಲದ ಬಡ ವರ್ಗದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ 10 ಮೀಸಲಾತಿ ಸಿಗಲಿದೆ.
–ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

*
‘ಪುನರ್‌ ಪರಿಶೀಲನೆ ಅಗತ್ಯವಿದೆ’
ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡ 10ರಷ್ಟು ಮೀಸಲಾತಿ ಕಲ್ಪಿಸುವ ತೀರ್ಮಾನವನ್ನು ಮೂವರು ನ್ಯಾಯಮೂರ್ತಿಗಳು ಎತ್ತಿ ಹಿಡಿದಿದ್ದರೆ, ಇಬ್ಬರು ತಿರಸ್ಕರಿಸಿದ್ದಾರೆ. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವವರು, ಶೋಷಣೆ ಅನುಭವಿಸಿದವರಿಗೆ ಮಾತ್ರ ಮೀಸಲಾತಿ ಒದಗಿಸಲು ನಮ್ಮ ಸಂವಿಧಾನದಲ್ಲಿ ಅವಕಾಶವಿದೆ. ಆರ್ಥಿಕ ಮಾನದಂಡದ ಆಧಾರದಲ್ಲಿ ಮೀಸಲಾತಿ ಕಲ್ಪಿಸಲು ಅವಕಾಶ ಇರಲಿಲ್ಲ. ಅದನ್ನು ತಿದ್ದುಪಡಿ ಮಾಡಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವುದು ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದು. ಹಂಚಿಕೆ ಮತ್ತು ಮೀಸಲಾತಿ ಎರಡೂ ಒಂದೇ ಅಲ್ಲ. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ತೀರ್ಮಾನದಲ್ಲಿ ಕೊಂಡಿ ಕಳಚಿದಂತಿದೆ ಅನಿಸುತ್ತಿದೆ. ಐವರು ನ್ಯಾಯಮೂರ್ತಿಗಳ ಪೀಠದ ತೀರ್ಪನ್ನು ಪ್ರಶ್ನಿಸಿ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಬೇಕು. ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು.
–ನ್ಯಾ. ಎಚ್‌.ಎನ್‌. ನಾಗಮೋಹನ್‌ ದಾಸ್‌, ನಿವೃತ್ತ ನ್ಯಾಯಮೂರ್ತಿ

*
‘ಕೋರ್ಟ್ ತೀರ್ಮಾನ ಸರಿಯಾಗಿದೆ’
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಹಿಂದುಳಿದ ವರ್ಗಗಳಿಗೆ ಶೇ 50ರಷ್ಟು ಮೀಸಲಾತಿ ಇದೆ. ಸಾಮಾನ್ಯ ವರ್ಗಕ್ಕೆ ಲಭ್ಯವಿದ್ದ ಶೇ 50ರಲ್ಲಿ ಶೇ 10ರಷ್ಟನ್ನು ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವ ತೀರ್ಮಾನವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌ ತೀರ್ಮಾನ ಸರಿಯಾಗಿದೆ. ಮೀಸಲಾತಿ ಮತಬ್ಯಾಂಕ್‌ ರಾಜಕಾರಣದ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಜನರು ಹೀಗೆಯೇ ಇರಲಿ ಎಂಬುದು ರಾಜಕಾರಣಿಗಳ ಬಯಕೆ. ಮೀಸಲಾತಿ ನೀತಿಯನ್ನು ನಿಧಾನವಾಗಿ ಬದಲಾಯಿಸಿ ಆರ್ಥಿಕ ಮಾನದಂಡಗಳ ಆಧಾರದಲ್ಲೇ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಜಾರಿಗೆ ತರಬೇಕು.
–ಬಿ.ವಿ. ಆಚಾರ್ಯ, ಹಿರಿಯ ವಕೀಲ

*
‘ಸಂವಿಧಾನಕ್ಕೆ ವಿರುದ್ಧ’
ಬ್ರಾಹ್ಮಣರು ಹಾಗೂ ಬ್ರಾಹ್ಮಣೇತರ ಮೇಲ್ಜಾತಿಗಳಿಗೆ ನೀಡಿರುವ ಆರ್ಥಿಕತೆ ಆಧಾರಿತ ಶೇ 10ರಷ್ಟು ಮೀಸಲಾತಿಯನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿರುವುದು ಚಾತುರ್ವರ್ಣ್ಯ ವ್ಯವಸ್ಥೆಯ ಜಾರಿಗೆ ಹಾದಿ ಸುಗಮವಾದಂತೆ. ಇದೊಂದು ಬಹುದೊಡ್ಡ ಸಾಮಾಜಿಕ ವಂಚನೆ. ಸಂವಿಧಾನದ ಪರಿಚ್ಛೇದ 15(4), 16(4)ಕ್ಕೆ ಹಿನ್ನಡೆ.ತರ್ಕ ಮತ್ತು ಅರ್ಥ ವಿವರಣೆಯಲ್ಲಿ (logic and reasoning) ಸಂಪೂರ್ಣ ವೈಫಲ್ಯ ಕಾಣಬಹುದು. ದೇಶದ ಚಿಂತಕರು, ಸಂಘಟನೆಗಳು ಸಾಮಾಜಿಕ ನ್ಯಾಯ ಪರವಾದ ಹೋರಾಟದ ಮುಂದಿನ ಸ್ವರೂಪ ನಿರ್ಧರಿಸಬೇಕಿದೆ. ಅವರ ಬಳಿ ಯಾವ ಕಾರ್ಯ ಯೋಜನೆಗಳಿವೆ ಎನ್ನುವುದನ್ನು ಸಮಾಜದ ಮುಂದಿಡಬೇಕು.
–ಬಿ. ಶ್ರೀಪಾದ ಭಟ್, ಶಿಕ್ಷಣ ತಜ್ಞ

*
‘ಎಲ್ಲ ಬಡವರೂ ಸೇರಬೇಕಿತ್ತು’
ಸುಪ್ರೀಂಕೋರ್ಟ್‌ 103ನೇ ಸಂವಿಧಾನ ತಿದ್ದುಪಡಿಯನ್ನು ಎತ್ತಿ ಹಿಡಿಯುವಾಗ, ಆರ್ಥಿಕವಾಗಿ ಹಿಂದುಳಿದವರ ವ್ಯಾಖ್ಯಾನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರನ್ನು ಸೇರಿಸದಿರುವುದು ಎಷ್ಟು ಸಮಂಜಸ? ಸಂಸತ್ತಿಗೆ ಶೇ 50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡುವ ಅಧಿಕಾರ ಇದೆ. ಆದರೆ, ಮೀಸಲಾತಿಯನ್ನು ನೀಡುವಾಗ, ವೈಜ್ಞಾನಿಕ ತಳಹದಿಯ ಅಂಕಿ ಅಂಶಗಳನ್ನ ಕಲೆ ಹಾಕಬೇಕು. ಆಯೋಗಗಳ ಮೂಲಕ ಮೀಸಲಾತಿ ನಿಗದಿ ಮನದಟ್ಟು ಮಾಡಿಕೊಳ್ಳಬೇಕು. ಆಗ ಮಾತ್ರ ಸಂವಿಧಾನ ಅನುಚ್ಛೇದ 15 ಹಾಗೂ 16ರಲ್ಲಿ ಹೇಳಿರುವ ‘ಸಂರಕ್ಷಣಾ ತಾರತಮ್ಯ ನಿಯಮ’ಕ್ಕೆ ಒಂದು ಅರ್ಥ ಸಿಗುತ್ತದೆ.
–ಡಾ.ಎನ್.ಸತೀಶ್ ಗೌಡ,ಸಹ ಪ್ರಾಧ್ಯಾಪಕ, ವಿಶ್ವವಿದ್ಯಾಲಯ ಕಾನೂನು ಕಾಲೇಜು, ಬೆಂಗಳೂರು

*
ತೀರ್ಪು ಸ್ವಾಗತಾರ್ಹ
ಸುಪ್ರೀಂ ಕೋರ್ಟ್‌ ಪ್ರಕಟಿಸಿರುವ ತೀರ್ಪು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಇಡಬ್ಲ್ಯೂಎಸ್‌ ವರ್ಗಕ್ಕೆ ಕೊಡಬೇಕಾಗಿರುವ ಶೇ 10ರಷ್ಟು ಮೀಸಲಾತಿ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಕಾರ್ಯಪ್ರವೃತ್ತರಾಗಬೇಕು.
–ಅಶೋಕ ಹಾರನಹಳ್ಳಿ, ಹಿರಿಯ ವಕೀಲ, ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು