ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್‌ಗೆ ಮಾನ್ಯತೆ: ತಳ್ಳಿಹಾಕಿದ ಪ್ರಧಾನಿ

ಶಾಂಘೈ ಸಹಕಾರ ಸಂಘಟನೆಯ ವಾರ್ಷಿಕ ಶೃಂಗಸಭೆ
Last Updated 17 ಸೆಪ್ಟೆಂಬರ್ 2021, 18:02 IST
ಅಕ್ಷರ ಗಾತ್ರ

ನವದೆಹಲಿ: ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ನೇತೃತ್ವದ ಸರ್ಕಾರಕ್ಕೆ ಮಾನ್ಯತೆ ನೀಡುವ ಸಾಧ್ಯತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ತಳ್ಳಿಹಾಕಿದ್ದಾರೆ.ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯನ್ನು (ಎಸ್‌ಸಿಒ) ಉದ್ದೇಶಿಸಿ ಅವರು ಮಾತನಾಡಿದರು.

ಅಫ್ಗಾನಿಸ್ತಾನದಲ್ಲಿ ಹೊಸ ಆಡಳಿತಕ್ಕೆ ಮಾನ್ಯತೆ ನೀಡುವ ಮುನ್ನ ಜಾಗತಿಕ ಸಮುದಾಯ ಜಾಗರೂಕತೆಯಿಂದ ನಡೆದುಕೊಳ್ಳಬೇಕು ಎಂದು ಮೋದಿ ಒತ್ತಾಯಿಸಿದ್ದಾರೆ.

ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ನೇತೃತ್ವದ ಹೊಸ ಆಡಳಿತವು ಎಲ್ಲರನ್ನೂ ಒಳಗೊಂಡ ಸ್ವರೂಪದಲ್ಲಿ ರಚನೆಯಾಗಿಲ್ಲ. ಹೀಗಾಗಿ ಅದರ ನ್ಯಾಯಬದ್ಧತೆಯು ಪ್ರಶ್ನಾರ್ಹವಾಗಿದೆ ಎಂದು ಭಾರತ ಶುಕ್ರವಾರ ಮೊದಲ ಬಾರಿಗೆ ಸ್ಪಷ್ಟವಾಗಿ ಹೇಳಿದೆ.

ಅಫ್ಗಾನಿಸ್ತಾನದ ಎಲ್ಲ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ, ಮಹಿಳೆ ಹಾಗೂ ಮಕ್ಕಳ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ರಚನೆಯಾದಲ್ಲಿ, ಅದಕ್ಕೆ ಮಾನ್ಯತೆ ನೀಡುವ ಬಗ್ಗೆ ಆಲೋಚನೆ ಮಾಡುವುದಾಗಿ ಈ ಮೊದಲು ಭಾರತ ತನ್ನ ನಿಲುವು ತಿಳಿಸಿತ್ತು. ಆದರೆ ತೀವ್ರವಾದಿಗಳಿಂದಲೇ ತುಂಬಿರುವ, ಮಹಿಳೆಯರನ್ನು ಹೊರಗಿಟ್ಟು ತಾಲಿಬಾನ್ ಸರ್ಕಾರ ರಚಿಸಿದೆ.

ಭಯೋತ್ಪಾದನೆ ಮತ್ತು ತೀವ್ರವಾದದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಶಾಂಘೈ ಸಹಕಾರ ಸಂಘಟನೆಯು ಸ್ಪಷ್ಟ ಮಾದರಿಯೊಂದನ್ನು ರೂಪಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ಭಯೋತ್ಪಾದನೆಯ ಸವಾಲುಗಳು ಪ್ರಾದೇಶಿಕವಾಗಿ ಹೆಚ್ಚಾಗುತ್ತಿವೆ. ಅಫ್ಗಾನಿಸ್ತಾನದ ಇತ್ತೀಚಿನ ಬೆಳವಣಿಗೆಯೇ ಇದಕ್ಕೆ ತಾಜಾ ನಿದರ್ಶನ ಎಂದು ಅವರು ಹೇಳಿದರು.

‘ಈ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ನಂಬಿಕೆಯ ಕೊರತೆಗಳೇ ನಮಗೆ ದೊಡ್ಡ ಸವಾಲು ಎಂದು ನನಗೆ ಅನಿಸುತ್ತಿದೆ. ಇವೆಲ್ಲವೂ ಒಟ್ಟಾಗಿ ತೀವ್ರವಾದದ ಹೆಚ್ಚಳಕ್ಕೆ ನೀರೆರೆಯುತ್ತವೆ. ಅಫ್ಗನ್‌ನ ಈಚಿನ ಬೆಳವಣಿಗೆಗಳಲ್ಲಿ ಇದು ಪ್ರತಿಬಿಂಬಿತವಾಗಿದೆ’ ಎಂದಿದ್ದಾರೆ.

‘ಇಸ್ಲಾಮ್‌ಗೆ ಸಂಬಂಧಿಸಿದ ಉದಾರವಾದಿ, ಸಹಿಷ್ಣುತಾವಾದಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಂಸ್ಥೆಗಳು ಮತ್ತು ಸಂಪ್ರದಾಯಗಳ ನಡುವೆ ಬಲವಾದ ಜಾಲವನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಶಾಂಘೈ ಸಹಕಾರ ಸಂಘಟನೆಯು ಮಾಡಬೇಕು’ ಎಂದು ಮೋದಿ ಹೇಳಿದರು.

ಸಂಘಟನೆಯ 20ನೇ ವರ್ಷಾಚರಣೆಯು ಭವಿಷ್ಯದ ಬಗ್ಗೆ ಚಿಂತನೆ ನಡೆಸಲು ಅತ್ಯಂತ ಸೂಕ್ತ ಸಮಯ ಎಂದು ಮೋದಿ ಹೇಳಿದರು. ಸಂಘಟನೆಯು ಯಶಸ್ವಿಯಾಗಲು ಮುಖ್ಯ ಕಾರಣವೆಂದರೆ, ಅದು ಪ್ರಾದೇಶಿಕ ಆದ್ಯತೆ ಹೊಂದಿರುವುದೇ ಆಗಿದೆ ಎಂದರು.

ಶಾಂಘೈ ಸಹಕಾರ ಸಂಘಟನೆ ಮತ್ತು ಅದರ ಅಂಗಸಂಸ್ಥೆಯಾದ ಪ್ರಾದೇಶಿಕ ಭಯೋತ್ಪಾದನಾ ನಿಗ್ರಹ ವ್ಯವಸ್ಥೆ (ಆರ್‌ಎಟಿಎಸ್‌) ಜತೆ ಪ್ರಬಲ ಭದ್ರತಾ ಸಹಕಾರ ಹೊಂದಲು ಭಾರತ ಉತ್ಸಾಹ ತೋರಿದೆ. ಈ ಸಂಸ್ಥೆಯು ಪ್ರಾದೇಶಿಕ ಭದ್ರತೆ ಮತ್ತು ರಕ್ಷಣೆ ವಿಷಯಗಳನ್ನು ವಿಶೇಷವಾಗಿ ನಿರ್ವಹಿಸುತ್ತದೆ.

ಶಾಂಘೈ ಸಹಕಾರ ಸಂಘಟನೆಯು ಆರ್ಥಿಕ ಹಾಗೂ ಭದ್ರತಾ ಸಂಸ್ಥೆಯಾಗಿದ್ದು, ಇದು ಬೃಹತ್ ಅಂತರರಾಷ್ಟ್ರೀಯ ಸಂಘಟನೆಗಳಲ್ಲಿ ಒಂದಾಗಿದೆ.

ದೃಷ್ಟಿಕೋನ: ಭಾರತದ ನಿಲುವು ಒಪ್ಪಿದ ಚೀನಾ

ಭಾರತದೊಂದಿಗಿನ ತನ್ನ ಸಂಬಂಧವನ್ನು ಮೂರನೇ ರಾಷ್ಟ್ರದ ದೃಷ್ಟಿಕೋನದಲ್ಲಿ ಚೀನಾ ನೋಡಬಾರದು ಎಂಬ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಪ್ರತಿಪಾದನೆಯನ್ನು ಚೀನಾ ಒಪ್ಪಿಕೊಂಡಿದೆ. ‘ಚೀನಾ-ಭಾರತ ಸಂಬಂಧ ತನ್ನದೇ ಆದ ‘ಆಂತರಿಕ ತರ್ಕ’ವನ್ನು ಹೊಂದಿವೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.

ದುಶಾಂಬೆಯಲ್ಲಿ ವಾಂಗ್ ಯಿ ಅವರನ್ನು ಭೇಟಿ ಮಾಡಿದ ಜೈಶಂಕರ್, ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಉಳಿದಿರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ಎರಡೂ ಕಡೆಯವರು ಕೆಲಸ ಮಾಡಬೇಕು ಎಂಬುದನ್ನು ಮನವರಿಕೆ ಮಾಡಿಕೊಟ್ಟರು.

ಎರಡೂ ದೇಶಗಳು ಪರಸ್ಪರ ಗೌರವದ ಆಧಾರದ ಮೇಲೆ ಸಂಬಂಧವನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಚೀನಾದ ವಿದೇಶಾಂಗ ಸಚಿವರಿಗೆ ಅವರು ಹೇಳಿದರು.

‘ಚೀನಾ-ಭಾರತ ಗಡಿ ಸಮಸ್ಯೆಗೆ ಸರಿಯಾದ ಪರಿಹಾರವನ್ನು ಪಡೆಯಲು ಚೀನಾ ಯಾವಾಗಲೂ ಸಕಾರಾತ್ಮಕವಾಗಿದೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ವಾಂಗ್ ಯಿ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜೈಶಂಕರ್ ಅಭಿಪ್ರಾಯವನ್ನು ಪ್ರಸ್ತಾಪಿಸಿದಾಗ, ‘ಭಾರತದ ನಿಲುವನ್ನು ಒಪ್ಪುತ್ತೇವೆ’ ಎಂದು ಸಚಿವಾಲಯದ ವಕ್ತಾರ ಜಾವೊ ಲಿಜಿಯಾನ್ ಉತ್ತರಿಸಿದರು.

ಜೈಶಂಕರ್ ಅವರು ರಷ್ಯಾದ ವಿದೇಶಾಂಗ ಸಚಿವರಾದ ಸೆರ್ಗೆ ಲಾವ್ರೊವ್ ಅವರೊಂದಿಗೆ ಅಫ್ಗಾನಿಸ್ತಾನ ಸೇರಿದಂತೆ ಸಮಕಾಲೀನ ವಿಷಯಗಳ ಕುರಿತು ಫಲಪ್ರದ ಚರ್ಚೆ ನಡೆಸಿದರು. ಇರಾನಿನ ಅಧ್ಯಕ್ಷ ಇಬ್ರಾಹಿಂ ರೈಸಿಯೊಂದಿಗೆ ಜಾಗತಿಕ ವ್ಯವಹಾರಗಳ ದೃಷ್ಟಿಕೋನಗಳನ್ನು ಹಂಚಿಕೊಂಡರು. ಇಬ್ಬರೂ ನಾಯಕರೊಂದಿಗೆ ಪ್ರತ್ಯೇಕ ಅನೌಪಚಾರಿಕ ಸಭೆಗಳನ್ನು ನಡೆಸಿದರು.

ಸೂಫಿ ಹಿರಿಮೆ ಪ್ರಸ್ತಾಪ

ಸೂಫಿ ಪಂಥ, ಮಧ್ಯ ಏಷ್ಯಾದ ಸಾಂಸ್ಕೃತಿಕ ಹಿರಿಮೆಯ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಈ ಐತಿಹಾಸಿಕ ಪರಂಪರೆಯನ್ನು ಕಾಪಾಡಿಕೊಳ್ಳಬೇಕಾದರೆ, ತೀವ್ರವಾದದ ವಿರುದ್ಧದ ಮಾದರಿ ಹೋರಾಟ ಅಗತ್ಯ ಎಂದು ಪ್ರತಿಪಾದಿಸಿದರು.

‘ಮಧ್ಯ ಏಷ್ಯಾ ಭಾಗವು ಶತಮಾನಗಳಿಂದ ಪ್ರಗತಿಪರ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಜಗತ್ತಿನಾದ್ಯಂತ ಹಂಚಿರುವುದು ಇತಿಹಾಸವನ್ನು ಗಮನಿಸಿದರೆ ತಿಳಿಯುತ್ತದೆ. ಸೂಫಿ ಪಂಥವು ಇದಕ್ಕೆ ಶ್ರೇಷ್ಠ ನಿದರ್ಶನ’ ಎಂದರು.

ಮಧ್ಯ ಏಷ್ಯಾದ ಜೊತೆ ಸಂಪರ್ಕವನ್ನು ಬಲಪಡಿಸುವ ನಿಲುವಿಗೆ ಭಾರತ ಬದ್ಧವಾಗಿದೆ ಎಂದ ಪ್ರಧಾನಿ, ಯಾವುದೇ ಸಂಪರ್ಕ ಕಾರ್ಯಕ್ರಮವು ಏಕಮುಖವಾಗಿರಬಾರದು. ಅದು ಸಮಾಲೋಚನೆ, ಪಾರದರ್ಶಕತೆ ಮತ್ತು ಭಾಗವಹಿಸುವಿಕೆಯ ಜೊತೆ ಮಿಳಿತವಾಗಿರಬೇಕು ಎಂದು ಅಭಿಪ್ರಾಪಟ್ಟರು.

‘ಭಯೋತ್ಪಾದನೆಯ ಕಾರಣದಿಂದಲೇ ಈ ಭಾಗದ ಆರ್ಥಿಕ ಅವಕಾಶಗಳ ಬಾಗಿಲು ತೆರೆದಿಲ್ಲ. ಮಧ್ಯ ಏಷ್ಯಾದ ರಾಷ್ಟ್ರಗಳಲ್ಲಿರುವ ಅಪನಂಬಿಕೆಯಿಂದಾಗಿ ಅವುಗಳ ನಡುವಿನ ಸಂಪರ್ಕ ಸಾಧ್ಯವಾಗಿಲ್ಲ. ಭಾರತದ ವಿಶಾಲ ಮಾರುಕಟ್ಟೆಯೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಮಧ್ಯ ಏಷ್ಯಾದ ದೇಶಗಳು ಅಪಾರ ಲಾಭ ಪಡೆಯಬಹುದು’ ಎಂದು ಪ್ರಧಾನಿ ತಿಳಿಸಿದರು.

***

ತೀವ್ರವಾದದ ವಿರುದ್ಧದ ಹೋರಾಟವು ಪ್ರಾದೇಶಿಕ ಭದ್ರತೆಯ ಖಾತರಿ ನೀಡುವುದರ ಜತೆಗೆ, ಈ ಪ್ರದೇಶದ ಯುವಜನರಿಗೆ ಉಜ್ವಲ ಭವಿಷ್ಯ ರೂಪಿಸಬೇಕು

ನರೇಂದ್ರ ಮೋದಿ, ಪ್ರಧಾನಿ

***

ಸ್ಥಳೀಯ ಪರಿಸ್ಥಿತಿಯನ್ನು ಪರಿಗಣಿಸಿ, ವಿವಿಧ ದೇಶಗಳ ಬ್ಯಾಂಕ್‌ಗಳಲ್ಲಿರುವ ಅಫ್ಗಾನಿಸ್ತಾನದ ಖಾತೆಗಳನ್ನು ಸಕ್ರಿಯಗೊಳಿಸಲು ವಿಶ್ವ ಸಮುದಾಯದ ಮನವೊಲಿಸಬೇಕು

ಶವ್ಕತ್ ಮಿರ್ಜಿಯೊಯೆವ್, ಉಜ್ಬೇಕಿಸ್ತಾನದ ಅಧ್ಯಕ್ಷ

***

ಶಾಂತಿಯುತ ಮತ್ತು ಸ್ಥಿರ ಅಫ್ಗಾನಿಸ್ತಾನವನ್ನು ಪಾಕ್ ಬಯಸುತ್ತದೆ. ಇದಕ್ಕಾಗಿ ಬೆಂಬಲ ನೀಡುತ್ತಲೇ ಇರುತ್ತದೆ. ಅಫ್ಗಾನಿಸ್ತಾನವನ್ನು ಹೊರಗಿನಿಂದ ನಿಯಂತ್ರಿಸಲಾಗುವುದಿಲ್ಲ

ಇಮ್ರಾನ್ ಖಾನ್,ಪಾಕಿಸ್ತಾನದ ಪ್ರಧಾನಿ

***

ಯಾವುದೇ ನೆಪದಲ್ಲಿ ಬಾಹ್ಯ ಶಕ್ತಿಗಳು ಯಾವುದೇ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ನೀಡಬಾರದು

ಷಿ ಜಿನ್‌ಪಿಂಗ್, ಚೀನಾ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT