ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19 ಪ್ರಕರಣಗಳ ಏರಿಕೆ: ಗೋವಾದಲ್ಲಿ ಸೆಕ್ಷನ್‌ 144 ಜಾರಿ

Last Updated 28 ಮಾರ್ಚ್ 2021, 4:49 IST
ಅಕ್ಷರ ಗಾತ್ರ

ಪಣಜಿ: ದೇಶದಾದ್ಯಂತ ಕೋವಿಡ್-19 ಪ್ರಕರಣಗಳು ಏರಿಕೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಗೋವಾ ಸರ್ಕಾರವು ಮುಂಬರುವ ಹೋಳಿ, ಈಸ್ಟರ್‌ ಮತ್ತು ಈದ್‌ ಹಬ್ಬಗಳಿಗೂ ಮುನ್ನ ರಾಜ್ಯದಲ್ಲಿ ನಿಷೇಧಾಜ್ಞೆ ಜಾರಿಗೆ ಆದೇಶಿಸಿದೆ.

ಉತ್ತರ ಗೋವಾದ ಜಿಲ್ಲಾ ಮ್ಯಾಜಿಸ್ಟ್ರೇಟರ್‌ ಅಜಿತ್‌‌ ರಾಯ್‌ ಅವರು ಶುಕ್ರವಾರ ನೀಡಿರುವ ಆದೇಶದಂತೆ, ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕ ಆಚರಣೆ, ಗುಂಪುಗೂಡುವಿಕೆ ಮತ್ತು ಸಭೆ ನಡೆಸುವುದನ್ನು ನಿಷೇಧಿಸಲಾಗಿದೆ.

ಮುಂಬರುವ ಹಬ್ಬಗಳಾದ ಹೋಳಿ, ಶಾಬ್-ಇ ಬರಾತ್, ಈಸ್ಟರ್ ಮತ್ತು ಈದ್-ಉಲ್-ಫಿತರ್ ಸಂದರ್ಭದಲ್ಲಿ ಗೋವಾದ ಸಾರ್ವಜನಿಕ ಸ್ಥಳಗಳಲ್ಲಿ ಸಭೆ ಸೇರುವುದು, ಸಾರ್ವಜನಿಕ ಆಚರಣೆ ಮತ್ತು ಗುಂಪುಗೂಡುವುದನ್ನು ಅನುಮತಿಸಲಾಗುವುದಿಲ್ಲ. ಈ ಸಂಬಂಧ ಕ್ರಿಮಿನಲ್ ಕಾರ್ಯವಿಧಾನ ಸಂಹಿತೆಯ ಸೆಕ್ಷನ್ 144ರ ಉಪವಿಭಾಗ 1ರ ಅಡಿಯಲ್ಲಿ ನನ್ನಲ್ಲಿರುವ ಅಧಿಕಾರವನ್ನು ಚಲಾಯಿಸಲಾಗುವುದುʼ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ಆದೇಶವನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್‌ 188 (ಸರ್ಕಾರದ ಆದೇಶಕ್ಕೆ ಅಸಹಕಾರ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಲಾಗಿದೆ.

ರಾಜ್ಯದಲ್ಲಿಭಾನುವಾರ ಶಾಬ್-ಇ ಬರಾತ್, ಸೋಮವಾರ ಹೋಳಿ, ಏಪ್ರಿಲ್‌ 4ರಂದು ಈಸ್ಟರ್‌ ಹಬ್ಬ ನಡೆಯುತ್ತದೆ.

ಕೋವಿಡ್-19 ಪ್ರಕರಣಗಳ ಹೆಚ್ಚಳದಿಂದಾಗಿ ಶಿಗ್ಮೋ ಹಬ್ಬದ ಮೆರವಣಿಗೆಯನ್ನು ರದ್ದುಪಡಿಸಲಾಗಿದೆ ಎಂದು ಗೋವಾ ಸರ್ಕಾರ ಈ ಹಿಂದೆ ಘೋಷಿಸಿತ್ತು.

ದೆಹಲಿ, ಮಧ್ಯಪ್ರದೇಶ ಮತ್ತು ಬಿಹಾರದಲ್ಲಿಯೂ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 62,258 ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.

ಶನಿವಾರ ವರದಿಯಾಗಿರುವ 170 ಹೊಸ ಪ್ರಕರಣಗಳೂ ಸೇರಿದಂತೆ ಗೋವಾದಲ್ಲಿ ಸದ್ಯ 1,379 ಸಕ್ರಿಯ ಪ್ರಕರಣಗಳಿವೆ. ಇಲ್ಲಿ ಈವರೆಗೆ ಒಟ್ಟು 824 ಸೋಂಕಿತರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT