ಸೋಮವಾರ, ಅಕ್ಟೋಬರ್ 18, 2021
22 °C

ರೂಪದರ್ಶಿಗೆ ಕೆಟ್ಟ ಕೇಶ ವಿನ್ಯಾಸ: ₹ 2 ಕೋಟಿ ಪರಿಹಾರ ನೀಡಲು ಸಲೂನ್‌ಗೆ ಆದೇಶ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ:  ಐಟಿಸಿ ಮೌರ್ಯ ಸಲೂನ್‌ನಲ್ಲಿ ತರಬೇತಿ ಪಡೆದ ಸಿಬ್ಬಂದಿ ಮಾಡಿದ ಕೆಟ್ಟ ಹೇರ್ ಸ್ಟೈಲ್‌ನಿಂದ ಟಾಪ್ ಮಾಡೆಲ್ ಆಗುವ ಕನಸು ಭಗ್ನಗೊಂಡ ರೂಪದರ್ಶಿಗೆ ₹ 2 ಕೋಟಿ ಪರಿಹಾರ ನೀಡುವಂತೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.

‘ಮಹಿಳೆಯರು ತಮ್ಮ ಕೂದಲಿಗೆ ಸಂಬಂಧಿಸಿದಂತೆ ಬಹಳ ಸೂಕ್ಷ್ಮ ಮತ್ತು ಜಾಗರೂಕರಾಗಿರುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಅವರು ತಮ್ಮ ಕೂದಲನ್ನು ಉತ್ತಮ ಸ್ಥಿತಿಯಲ್ಲಿಡಲು ತುಂಬಾ ಹಣವನ್ನು ಖರ್ಚು ಮಾಡುತ್ತಾರೆ ಮತ್ತು ಭಾವನಾತ್ಮಕವಾಗಿರುತ್ತಾರೆ’ ಎಂದು ಆಯೋಗದ ಅಧ್ಯಕ್ಷ, ನ್ಯಾಯಮೂರ್ತಿ ಆರ್. ಕೆ. ಅಗರವಾಲ್ ಮತ್ತು ಸದಸ್ಯ ಎಸ್ ಎಂ ಕಾಂತಿಕರ್ ಅವರಿದ್ದ ಪೀಠ ಹೇಳಿದೆ.

ಆಯೋಗವು ಗ್ರಾಹಕ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಸೇವೆಯ ನ್ಯೂನತೆ ಆಗಿರುವುದರಿಂದ ಎಂಟು ವಾರಗಳಲ್ಲಿ ದೂರುದಾರೆ ಆಶ್ನಾ ರಾಯ್‌ಗೆ ₹2 ಕೋಟಿ ಪರಿಹಾರದ ನೀಡುವಂತೆ ಐಟಿಸಿಗೆ ನಿರ್ದೇಶಿಸಿದೆ. 

‘ಪ್ರತಿವಾದಿಯು ಕೂದಲು ಚಿಕಿತ್ಸೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಕಾರಣವಾಗಿದ್ದಾರೆ. ಆಕೆಯ ನೆತ್ತಿಯು ಸುಟ್ಟುಹೋಗಿದ್ದು, ಚಿಕಿತ್ಸೆ ದೋಷದಿಂದಾಗಿ ಈಗಲೂ ಅಲರ್ಜಿ ಮತ್ತು ತುರಿಕೆ ಇದೆ’ಎಂದು ಆಯೋಗವು ಸೆಪ್ಟೆಂಬರ್ 21ರ ಆದೇಶದಲ್ಲಿ ತಿಳಿಸಿದೆ .

ಘಟನೆಯಿಂದ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದು, ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಸಾಮಾಜಿಕ ಚಟುವಟಿಕೆಗಳಿಂದ ದೂರವಿರುವಂತಾಗಿದೆ ಎಂದು ದೂರುದಾರರಾದ ಆಶ್ನಾ ರಾಯ್ ಅಳಲು ತೋಡಿಕೊಂಡಿದ್ದಾರೆ.

‘ಆಕೆ ಸಂವಹನ ವೃತ್ತಿಪರರಾಗಿದ್ದು, ಸಭೆ ಮತ್ತು ಸಂವಾದಾತ್ಮಕ ಸೆಶನ್‌ಗಳಲ್ಲಿ ಭಾಗಿಯಾಗುವ ಅಗತ್ಯವಿದೆ. ಆದರೆ, ಕನಿಷ್ಠ ಕೂದಲಿನ ಕಾರಣದಿಂದ ಅವರು ತನ್ನ ಆತ್ಮವಿಶ್ವಾಸವನ್ನು ಕಳೆದುಕೊಂಡಿದ್ಧಾರೆ. ಕಳಪೆ ಕ್ಷೌರದ ನಂತರ ಮತ್ತು ಮಾನಸಿಕ ಹಿಂಸೆಯಿಂದಾಗಿ ಅವರು ಆದಾಯದ ನಷ್ಟವನ್ನು ಅನುಭವಿಸಿದ್ದಾರೆ. ಕೆಲಸವನ್ನೂ ತೊರೆಯುವಂತಾಗಿದೆ’ಎಂದು ಪೀಠ ಹೇಳಿದೆ.

ರಾಯ್ ತಮ್ಮ ಉದ್ದ ಕೂದಲಿನಿಂದಾಗಿ ಕೂದಲು ಉತ್ಪನ್ನಗಳಿಗೆ ಮಾಡಲ್ ಆಗಿದ್ದರು. ದೊಡ್ಡ ದೊಡ್ಡ ಬ್ರಾಂಡ್‌ಗಳಿಗೆ ಮಾಡೆಲಿಂಗ್ ಮಾಡಿದ್ದಾರೆ ಎಂದು ಪೀಠ ಗಮನಿಸಿದೆ. ‘ಆದರೆ ಅವರ ಸೂಚನೆಗಳಿಗೆ ವಿರುದ್ಧವಾಗಿ ಕೂದಲು ಕತ್ತರಿಸುವುದರಿಂದ ... ಅವರು ತನ್ನ ನಿರೀಕ್ಷಿತ ಹುದ್ದೆಗಳನ್ನು ಕಳೆದುಕೊಂಡಿದ್ದಾರೆ ಮತ್ತು ದೊಡ್ಡ ನಷ್ಟವನ್ನು ಅನುಭವಿಸಿದ್ದಾರೆ. ಅದು ಅವರ ಜೀವನಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಟಾಪ್ ಮಾಡೆಲ್ ಆಗಬೇಕೆಂಬ ಅವರ ಕನಸನ್ನು ಭಗ್ನಗೊಳಿಸಿದೆ’ಎಂದು ಪೀಠ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.