ಭಾನುವಾರ, ಜನವರಿ 16, 2022
28 °C
ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿರುವ ಚೀನಾ ವಿರುದ್ಧ ವಾಗ್ದಾಳಿ

ಕೆಲ ರಾಷ್ಟ್ರಗಳಿಂದ ಕಡಲ ಕಾನೂನಿನ ತಪ್ಪು ವ್ಯಾಖ್ಯಾನ: ರಾಜನಾಥ್‌ ಸಿಂಗ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ‘ಪಕ್ಷಪಾತ ಧೋರಣೆ ಹಾಗೂ ಪ್ರಾಬಲ್ಯ ಮೆರೆಯುವ ಪ್ರವೃತ್ತಿ ಹೊಂದಿರುವ ಕೆಲವು ಬೇಜವಾಬ್ದಾರಿ ರಾಷ್ಟ್ರಗಳು ವಿಶ್ವಸಂಸ್ಥೆಯ ಕಡಲ ಕಾನೂನನ್ನು  (ಯುಎನ್‌ಸಿಎಲ್‌ಒಎಸ್‌) ತಪ್ಪಾಗಿ ವ್ಯಾಖ್ಯಾನಿಸುತ್ತಿವೆ’ ಎಂದು ರಕ್ಷಣಾ ಮಂತ್ರಿ ರಾಜನಾಥ್‌ ಸಿಂಗ್‌ ಭಾನುವಾರ ಟೀಕಿಸಿದರು.

ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ ‘ಐಎನ್‌ಎಸ್‌ ವಿಶಾಖಪಟ್ಟಣಂ’ ಅನ್ನು ನೌಕಾಪಡೆಗೆ ಸೇರ್ಪಡೆಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರೋಕ್ಷವಾಗಿ ಚೀನಾ ವಿರುದ್ಧ ವಾಗ್ದಾಳಿ ನಡೆಸಿದರು.

‘ಕೆಲವು ರಾಷ್ಟ್ರಗಳು ತಮಗೆ ತೋಚಿದಂತೆ ವ್ಯಾಖ್ಯಾನ ಮಾಡುವ ಮೂಲಕ ಕಡಲ ಕಾನೂನನ್ನು ದುರ್ಬಲಗೊಳಿಸುತ್ತಿರುವುದು ಕಳವಳಕಾರಿ’ ಎಂದರು.

‘ಕಡಲ ರಕ್ಷಣೆ ವಿಷಯದಲ್ಲಿ ಜವಾಬ್ದಾರಿ ಭಾಗಿದಾರ ದೇಶವಾಗಿರುವ ಭಾರತ, ಒಮ್ಮತದ ತಳಹದಿ ಮೇಲೆ ರೂಪಿಸಲಾಗಿರುವ ತತ್ವಗಳನ್ನು ಬೆಂಬಲಿಸುತ್ತದೆ. ಶಾಂತಿಯುತವಾದ ಹಾಗೂ ನಿಯಮಗಳಿಗೆ ಬದ್ಧವಾಗಿರುವ ಕಡಲ ರಕ್ಷಣಾ ವ್ಯವಸ್ಥೆಯನ್ನು ಬಯಸುತ್ತದೆ’ ಎಂದು ಹೇಳಿದರು.

‘ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿ ಮುಕ್ತ ವ್ಯಾಪಾರ, ನೌಕಾಯಾನದ ಸ್ವಾತಂತ್ರ್ಯ ಹಾಗೂ ಈ ಪ್ರದೇಶದ ಎಲ್ಲ ಭಾಗಿದಾರ ರಾಷ್ಟ್ರಗಳ ಹಿತಾಸಕ್ತಿ ರಕ್ಷಣೆಗೆ ಭಾರತ ಬೆಂಬಲ ನೀಡುತ್ತದೆ’ ಎಂದು ಅವರು ಹೇಳಿದರು.

ದಕ್ಷಿಣ ಚೀನಾ ಸಮುದ್ರವು ಸಂವಹನ ವ್ಯವಸ್ಥೆ ಹೊಂದಿರುವ ಪ್ರಮುಖ ಸಾಗರ ಮಾರ್ಗವಾಗಿದ್ದು, ಹೈಡ್ರೋಕಾರ್ಬನ್‌ಗಳಿಂದ ಸಂಪದ್ಭರಿತವಾಗಿದೆ. ಹೀಗಾಗಿ ಈ ಪ್ರದೇಶದಲ್ಲಿ ಚೀನಾ ತನ್ನ ಮಿಲಿಟರಿ ಪ್ರಾಬಲ್ಯವನ್ನು ಹೆಚ್ಚಿಸುತ್ತಿದೆ. ಇದು ಇಂಡೊ–ಪೆಸಿಫಿಕ್‌ ಪ್ರದೇಶದ ರಾಷ್ಟ್ರಗಳ ಕಳವಳಕ್ಕೆ ಕಾರಣವಾಗಿದೆ. ಚೀನಾದ ಈ ನಡೆಗೆ ಜಾಗತಿಕವಾಗಿಯೂ ಭಾರಿ ಟೀಕೆ ವ್ಯಕ್ತವಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು