ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗ್‌ ಬದಲಿಗೆ ಪವಾರ್‌ ಅವರನ್ನು ಪ್ರಧಾನಿ ಮಾಡಬೇಕಿತ್ತು: ಕೇಂದ್ರ ಸಚಿವ ಅಠವಾಳೆ

Last Updated 25 ಸೆಪ್ಟೆಂಬರ್ 2021, 17:12 IST
ಅಕ್ಷರ ಗಾತ್ರ

ಇಂದೋರ್‌: ಸೋನಿಯಾ ಗಾಂಧಿಯವರ ವಿದೇಶಿ ಮೂಲದ ಚರ್ಚೆ ಅರ್ಥಹೀನ. ಭಾರತ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾಗಲು ಸಾಧ್ಯವಾದರೆ, ಕಾಂಗ್ರೆಸ್ ಅಧ್ಯಕ್ಷೆ ಪ್ರಧಾನಿಯಾಗಬಹುದಿತ್ತು. ಆ ಸಮಯದಲ್ಲಿ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನು ಸ್ವೀಕರಿಸಲು ಇಚ್ಛಿಸದಿದ್ದರೆ ಮನಮೋಹನ್ ಸಿಂಗ್ ಬದಲಿಗೆ ಹಿರಿಯ ನಾಯಕ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಪ್ರಧಾನಿ ಮಾಡಬಹುದಿತ್ತು ಎಂದು ಕೇಂದ್ರ ಸಚಿವ, ರಿಪಬ್ಲಿಕನ್‌ ಪಾರ್ಟಿಯ ರಾಮದಾಸ್‌ ಅಠವಾಳೆ ಅಭಿಪ್ರಾಯಪಟ್ಟಿದ್ದಾರೆ.

‘2004ರ ಚುನಾವಣೆಯಲ್ಲಿ ಯುಪಿಎ ಬಹುಮತ ಪಡೆದಾಗ, ಸೋನಿಯಾ ಗಾಂಧಿ ಪ್ರಧಾನಿಯಾಗಬೇಕೆಂದು ನಾನು ಪ್ರಸ್ತಾಪಿಸಿದ್ದೆ. ಅವರ ವಿದೇಶಿ ಮೂಲದ ಚರ್ಚೆಗೆ ಯಾವುದೇ ಅರ್ಥವಿಲ್ಲ ಎಂದು ನಾನು ಭಾವಿಸಿದ್ದೆ’ ಎಂದೂ ಅವರು ಮಧ್ಯಪ್ರದೇಶದ ಇಂದೋರ್‌ನಲ್ಲಿ ಹೇಳಿದ್ದಾರೆ.

‘ಭಾರತ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾಗಲು ಸಾಧ್ಯವಾದರೆ, ಭಾರತದ ಪ್ರಜೆ, ರಾಜೀವ್ ಗಾಂಧಿಯವರ ಪತ್ನಿ (ಮಾಜಿ ಪ್ರಧಾನಿ) ಮತ್ತು ಸಂಸದರಾಗಿ ಆಯ್ಕೆಯಾಗಿದ್ದ ಸೋನಿಯಾ ಗಾಂಧಿಯವರು ಯಾಕೆ ಪ್ರಧಾನಿಯಾಗಲು ಸಾಧ್ಯವಾಗಲಿಲ್ಲ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

‘ಪವಾರ್ ಒಬ್ಬ ಜನ ನಾಯಕ ಮತ್ತು ಪ್ರಧಾನಿ ಹುದ್ದೆಗೆ ಅರ್ಹ ಅಭ್ಯರ್ಥಿಯಾಗಿದ್ದರು,’ ಎಂದು ಬಣ್ಣಿಸಿರುವ ಅಠವಾಳೆ, ‘ಮನಮೋಹನ್ ಸಿಂಗ್ ಬದಲಿಗೆ ಪವಾರ್ ಅವರನ್ನು ಅಂದು ಪ್ರಧಾನಿಯಾಗಿ ಮಾಡಬೇಕಿತ್ತು. ಆದರೆ ಸೋನಿಯಾ ಗಾಂಧಿ ಹಾಗೆ ಮಾಡಲಿಲ್ಲ’ ಎಂದು ಹೇಳಿದರು.

‘2004 ರಲ್ಲಿ ಪವಾರ್ ದೇಶದ ಪ್ರಧಾನಿಯಾಗಿದ್ದಿದ್ದರೆ ಕಾಂಗ್ರೆಸ್ ಬಲಿಷ್ಟವಾಗಿರುತ್ತಿತ್ತು. ಆ ಪಕ್ಷವನ್ನು ಇವತ್ತಿನ ಅನಿಶ್ಚಿತ ಸ್ಥಿತಿಯಿಂದ ಪಾರು ಮಾಡಬಹುದಿತ್ತು,‘ ಎಂದೂ ಅವರು ಹೇಳಿದ್ದಾರೆ.

ಇದೇ ವೇಳೆ ಅವರು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅವರ ಬಗ್ಗೆಯೂ ಮಾತನಾಡಿದರು. ಅವರು ಬಿಜೆಪಿ ಅಥವಾ ಎನ್‌ಡಿಎ ಸೇರಬೇಕೆಂದು ಅಟವಾಳೆ ಮನವಿ ಮಾಡಿದರು. ‘ಸಿಂಗ್ ಬಿಜೆಪಿಗೆ ಸೇರಿದರೆ, ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಲಿಷ್ಠಗೊಳ್ಳುತ್ತದೆ" ಎಂದು ಅವರು ಹೇಳಿದರು.

ಸೋನಿಯಾ ಗಾಂಧಿಯವರ ವಿದೇಶಿ ಮೂಲ ಪ್ರಸ್ತಾಪಿಸಿದ್ದಕ್ಕಾಗಿ ಪವಾರ್ ಅವರನ್ನು 1999 ರಲ್ಲಿ ಕಾಂಗ್ರೆಸ್‌ನಿಂದ ಹೊರಹಾಕಲಾಯಿತು. ನಂತರ ಅವರು ಎನ್‌ಸಿಪಿಯನ್ನು ರಚಿಸಿದರು. ಮನಮೋಹನ್ ಸಿಂಗ್ 2004 ರಿಂದ 2014 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT