ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಯೋಜನೆ ವಿರೋಧಿಸಿ ಸೋಮವಾರ ತಮಿಳುನಾಡಿನಲ್ಲಿ ಸರ್ವಪಕ್ಷಗಳ ಸಭೆ

ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್‌ ಅಧ್ಯಕ್ಷತೆ
Last Updated 11 ಜುಲೈ 2021, 14:09 IST
ಅಕ್ಷರ ಗಾತ್ರ

ಚೆನ್ನೈ: ಮೇಕೆದಾಟು ಯೋಜನೆ ಕುರಿತು ಮುಂದಿನ ಕಾರ್ಯತಂತ್ರ ರೂಪಿಸುವ ಕುರಿತು ಚರ್ಚಿಸಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್‌ ಅಧ್ಯಕ್ಷತೆಯಲ್ಲಿ ಸೋಮವಾರ ಸರ್ವಪಕ್ಷಗಳ ಸಭೆ ನಡೆಯಲಿದೆ.

ಈ ಯೋಜನೆಯನ್ನು ಮುಂದುವರಿಸಲು ಬದ್ಧವಾಗಿರುವುದಾಗಿ ಕರ್ನಾಟಕ ಘೋಷಿಸಿರುವುದರಿಂದ ಎಲ್ಲ ರಾಜಕೀಯ ಪಕ್ಷಗಳ ಅಭಿಪ್ರಾಯ ಪಡೆಯಲು ಈ ಸಭೆ ಕರೆಯಲಾಗಿದೆ. ಜತೆಗೆ, ಕರ್ನಾಟಕದ ನಿರ್ಧಾರವನ್ನು ಖಂಡಿಸಿ ನಿರ್ಣಯವನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಯೋಜನೆ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಪ್ರಯತ್ನಗಳನ್ನು ಸ್ಟ್ಯಾಲಿನ್‌ ಅವರು ಸಭೆಯಲ್ಲಿ ವಿವರಿಸಲಿದ್ದಾರೆ.

ತಮಿಳುನಾಡಿನ ಅನುಮತಿ ಇಲ್ಲದೆಯೇ ಮೇಕೆದಾಟು ಅಣೆಕಟ್ಟು ನಿರ್ಮಿಸಲು ಕರ್ನಾಟಕಕ್ಕೆ ಅವಕಾಶ ಕಲ್ಪಿಸಬಾರದು. ಈ ಬಗ್ಗೆ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ರಾಜಕೀಯ ಪಕ್ಷಗಳು ಒತ್ತಾಯಿಸುವ ಸಾಧ್ಯತೆ ಇದೆ. ಜತೆಗೆ, ಈ ವಿಷಯದ ಬಗ್ಗೆ ಪ್ರಧಾನಿ ಅವರ ಬಳಿ ಸರ್ವಪಕ್ಷಗಳ ನಿಯೋಗವನ್ನು ಕೊಂಡೊಯ್ಯಬೇಕು ಎಂದು ಎಐಎಡಿಎಂಕೆ ಒತ್ತಾಯಿಸಲಿದೆ.

ತಮಿಳುನಾಡು ಸರ್ಕಾರದ ಜಲಸಂಪನ್ಮೂಲ ಸಚಿವ ದುರೈ ಮುರುಗನ್ ಅವರು ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಇತ್ತೀಚೆಗೆ ದೆಹಲಿಯಲ್ಲಿ ಭೇಟಿಯಾಗಿ, ಮೇಕೆದಾಟು ಯೋಜನೆಯನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದರು. ಈ ಭೇಟಿಯ ಬಳಿಕ ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT