ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉ.ಪ್ರ: ಕಾಂಗ್ರೆಸ್ ಮ್ಯಾರಥಾನ್‌ನಲ್ಲಿ ಕಾಲ್ತುಳಿತದ ಸನ್ನಿವೇಶ, ಹುಡುಗಿಯರಿಗೆ ಗಾಯ

Last Updated 4 ಜನವರಿ 2022, 10:02 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ ಕಾಂಗ್ರೆಸ್‌ ಪಕ್ಷ ಆಯೋಜಿಸಿದ್ದ 'ಮಹಿಳಾ ಮ್ಯಾರಥಾನ್‌'ನಲ್ಲಿ ಕಾಲ್ತುಳಿತದಂತಹ ಸನ್ನಿವೇಶ ನಿರ್ಮಾಣವಾಗಿತ್ತು. 'ಲಡ್ಕಿ ಹೂಂ, ಲಡ್‌ ಸಕ್ತಿ ಹೂಂ' (ನಾನು ಹುಡುಗಿ ಹಾಗೂ ನಾನು ಹೋರಾಡ ಬಲ್ಲೆ) ಹೆಸರಿನಲ್ಲಿ ಕಾಂಗ್ರೆಸ್‌ ನಡೆಸುತ್ತಿರುವ ಚುನಾವಣಾ ಅಭಿಯಾನದ ಭಾಗವಾಗಿ ಮಹಿಳೆಯರ ಓಟದ ಸ್ಪರ್ಧೆಯನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಮ್ಯಾರಥಾನ್‌ ವೇಳೆ ಕೆಲವು ಹುಡುಗಿಯರು ಎಡವಿ ನೆಲಕ್ಕೆ ಬೀಳುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ಆ ಹುಡುಗಿಯರ ಹಿಂದೆ ಓಡುತ್ತಿದ್ದವರು ತಕ್ಷಣವೇ ನಿಲ್ಲುವ ಭರದಲ್ಲಿ ಮುಗ್ಗರಿಸಿದರು ಹಾಗೂ ಮತ್ತಷ್ಟು ಓಟಗಾರರು ನೆಲಕ್ಕೆ ಉರುಳಿದರು. ಅದರಿಂದಾಗಿ ಕಾಲ್ತುಳಿತದಂತಹ ಸನ್ನಿವೇಶ ಸೃಷ್ಟಿಯಾಯಿತು.

ಘಟನೆಯಲ್ಲಿ ಕೆಲವು ಓಟಗಾರರು ಗಾಯಗೊಂಡಿದ್ದಾರೆ. ಕನಿಷ್ಠ ಮೂವರು ಸ್ಪರ್ಧಿಗಳನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಪೊಲೀಸರು ಸ್ಥಳದಲ್ಲಿದ್ದು, ತನಿಖೆ ಕೈಗೊಂಡಿದ್ದಾರೆ. ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ನಡುವೆಯೂ ಮ್ಯಾರಥಾನ್‌ನಲ್ಲಿ ಭಾಗಿಯಾಗಿದ್ದವರು ಅಂತರ ಕಾಯ್ದುಕೊಂಡಿರಲಿಲ್ಲ ಹಾಗೂ ಹಲವು ಸ್ಪರ್ಧಿಗಳು ಮಾಸ್ಕ್‌ ಧರಿಸದಿರುವುದನ್ನು ವಿಡಿಯೊದಲ್ಲಿ ಗುರುತಿಸಬಹುದಾಗಿದೆ.

ಅವಘಡದ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕಿ ಮತ್ತು ಬರೇಲಿಯ ಮಾಜಿ ಮೇಯರ್‌ ಸುಪ್ರಿಯಾ ಏರೊನ್‌, 'ಆತಂಕ ಪಡುವ ಅಗತ್ಯವಿಲ್ಲ. ವೈಷ್ಣೋ ದೇವಿಯಲ್ಲೇ ಕಾಲ್ತುಳಿತ ಉಂಟಾಗಿದೆ, ಇವರು ಹುಡುಗಿಯರು...ಇದು ಮನುಷ್ಯನ ಸಹಜ ಗುಣ. ಆದರೆ ನಾನು ಕ್ಷಮೆ ಕೋರುತ್ತೇನೆ' ಎಂದಿದ್ದಾರೆ.

ಚುನಾವಣೆ ಸಮೀಪಿಸುತ್ತಿದ್ದು, ಕಾಂಗ್ರೆಸ್‌ಗೆ ಬೆಂಬಲ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದು ಪಕ್ಷದ ವಿರುದ್ಧ ಪಿತೂರಿಯ ಭಾಗವೂ ಆಗಿರಬಹುದು ಎಂದು ಸುಪ್ರಿಯಾ ಅಭಿಪ್ರಾಯ ಪಟ್ಟಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಕಳೆದ ಡಿಸೆಂಬರ್‌ 28ರಂದು ಕಾಂಗ್ರೆಸ್‌ ಲಖನೌದಲ್ಲಿ ಇಂಥದ್ದೇ ಮ್ಯಾರಥಾನ್‌ ಆಯೋಜಿಸಿತ್ತು. ಐದು ಕಿಲೋ ಮೀಟರ್‌ ದೂರದ ಓಟದ ಸ್ಪರ್ಧೆಯಲ್ಲಿ ಮಹಿಳೆಯರು ಭಾಗಿಯಾಗಿದ್ದರು.

ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಮಹಿಳೆಯರ ಉನ್ನತಿಗಾಗಿ ಹಲವು ಭರವಸೆಗಳನ್ನು ನೀಡಿರುವ ಅವರು, ಚುನಾವಣೆಯಲ್ಲಿ ಸ್ಪರ್ಧಿಸಲು ಮಹಿಳೆಯರಿಗೆ ಶೇಕಡ 40ರಷ್ಟು ಪ್ರಾತಿನಿಧ್ಯ ನೀಡುವುದಾಗಿ ಹೇಳಿದ್ದಾರೆ. ಅವರೇ 'ಲಡ್ಕಿ ಹೂಂ, ಲಡ್‌ ಸಕ್ತಿ ಹೂಂ' ಘೋಷಣೆಯನ್ನು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT